ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಗುತ್ತಿಗೆ ನೌಕರರು
ಸುದ್ದಿ ಸಾರ

ಸಮಾನ ವೇತನ, ಸೇವಾ ಭದ್ರತೆಗೆ ಆಗ್ರಹ; ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಮುಷ್ಕರ

ಸಮಾನ ವೇತನ ಹಾಗೂ ಸೇವಾ ಭದ್ರತೆಗೆ ಒತ್ತಾಯಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ಗುರುವಾರ ಪ್ರತಿಭಟನೆ ನಡೆಸಿದರು.

ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸೇವಾ ಭದ್ರತೆಗೆ ಒತ್ತಾಯಿಸಿ ‘ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೇದಿಕೆ’ಯಡಿ ಸಿಬ್ಬಂದಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗುರುವಾರ ಮುಷ್ಕರ ನಡೆಸಿದ್ದಾರೆ.

ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಕೆಲಸ ಮಾಡುತ್ತಿರುವ ಸುಮಾರು ಶೇಕಡ 60ರಷ್ಟು ಸಿಬ್ಬಂದಿ ಗುತ್ತಿಗೆ ನೌಕರರು. ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಸುಪ್ರೀಂಕೋರ್ಟ್‌ 2016ರ ಅಕ್ಟೋಬರ್‌ನಲ್ಲೇ ಆದೇಶ ನೀಡಿದೆ. ಆದರೆ, ಈ ಆದೇಶ ಪಾಲನೆಗೆ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳು ಹಿಂದೇಟು ಹಾಕುತ್ತಿವೆ.

ಸರಕಾರ ಗುತ್ತಿಗೆ ನೌಕರರ ಬಗ್ಗೆ ತೋರುತ್ತಿರುವ ಈ ಅವಗಣನೆಯನ್ನು ವಿರೋಧಿಸಲು ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ಬೆಂಗಳೂರಿನ ಆನಂದರಾವ್‌ ವೃತ್ತದ ಸಮೀಪದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಸುಪ್ರೀಂಕೋರ್ಟ್‌ ಆದೇಶದ ಅನ್ವಯ ಗುತ್ತಿಗೆ ನೌಕರರ ಸೇವಾ ಭದ್ರತೆಗೆ ಸರಕಾರ ಮನಸ್ಸು ಮಾಡುತ್ತಿಲ್ಲ. ಆರೋಗ್ಯ ಇಲಾಖೆಯ ಖಾಯಂ ಸಿಬ್ಬಂದಿಯ ವೇತನಕ್ಕಿಂತ ಶೇಕಡ 50ಕ್ಕೂ ಕಡಿಮೆ ವೇತನವನ್ನು ಗುತ್ತಿಗೆ ಸಿಬ್ಬಂದಿ ಪಡೆಯುತ್ತಿದ್ದಾರೆ. ಗುತ್ತಿಗೆ ನೌಕರರ ಈ ಸಮಸ್ಯೆ ನೇರವಾಗಿ ದೇಶದ ಆರೋಗ್ಯ ಸೇವೆಯ ಮೇಲಾಗುತ್ತಿದೆ. ಹೀಗಾಗಿ ಸರಕಾರ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸೇವಾ ಭದ್ರತೆ ಹಾಗೂ ವೇತನ ಪರಿಷ್ಕರಣೆಗೆ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

“ಆರೋಗ್ಯ ಇಲಾಖೆಯ ಎಲ್ಲಾ ಗುತ್ತಿಗೆ ನೌಕರರಿಗೆ ನಿವೃತ್ತಿ ವಯಸ್ಸಿನವರೆಗೆ ಸೇವಾ ಭದ್ರತೆ ಒದಗಿಸಬೇಕು. ಗುತ್ತಿಗೆ ಸಿಬ್ಬಂದಿ ಮೇಲೆ ಖಾಯಂ ಸಿಬ್ಬಂದಿ ಹಾಗೂ ಮೇಲಾಧಿಕಾರಿಗಳಿಂದ ದಿನ ನಿತ್ಯ ಕಿರುಕುಳ ಉಂಟಾಗುತ್ತಿದೆ. ಖಾಯಂ ಸಿಬ್ಬಂದಿ ರಜೆ ಮತ್ತಿತರ ಸೌಲಭ್ಯಗಳೆಲ್ಲವನ್ನೂ ಪಡೆದುಕೊಳ್ಳುತ್ತಾರೆ. ಆದರೆ, ಗುತ್ತಿಗೆ ಸಿಬ್ಬಂದಿಗೆ ಸಿಗಬೇಕಾದ ರಜೆಗಳು ಸಿಗುತ್ತಿಲ್ಲ. ಕಡಿಮೆ ವೇತನದ ಕಾರಣದಿಂದ ಜೀವನ ನಿರ್ವಹಣೆಯೇ ಕಷ್ಟವಾಗುತ್ತಿದೆ” ಎಂದು ಆರೋಗ್ಯ ಇಲಾಖೆಯಲ್ಲಿ ಯಾದಗಿರಿಯಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ವಿಶ್ವಾರಾಧ್ಯ ಹೇಳಿದರು.

“ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಸಿಬ್ಬಂದಿ ಖಾಯಂ ಸಿಬ್ಬಂದಿಗಿಂತ ಎರಡು ಪಟ್ಟು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಖಾಯಂ ಆಯುಷ್‌ ವೈದ್ಯರು ತಿಂಗಳಿಗೆ 25ರಿಂದ 30 ಸಾವಿರ ವೇತನ ಪಡೆಯುತ್ತಿದ್ದರೆ, ಗುತ್ತಿಗೆ ಆಯುಷ್ ವೈದ್ಯರು ತಿಂಗಳಿಗೆ ಸುಮಾರು 16 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದಾರೆ. ವೈದ್ಯರಷ್ಟೇ ಅಲ್ಲ ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಹಾಗೂ ಇಲಾಖೆಯಲ್ಲಿ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಎಲ್ಲಾ ಸಿಬ್ಬಂದಿಯ ವೇತನ ಅಸಮಾನತೆಯನ್ನು ನಿಲ್ಲಿಸಬೇಕು” ಎಂದು ಅವರು ಒತ್ತಾಯಿಸಿದರು.

“ಆರೋಗ್ಯ ಇಲಾಖೆಯ ಗುತ್ತಿಗೆ ಸಿಬ್ಬಂದಿ ಅತಂತ್ರದಲ್ಲಿ ಬದುಕು ನಡೆಸುವಂತಾಗಿದೆ. ಸಣ್ಣ ತಪ್ಪಿಗೂ ಒಂದು ನೋಟಿಸ್‌ ನೀಡಿ ಕೆಲಸದಿಂದ ತೆಗೆದು ಹಾಕುವ ವ್ಯವಸ್ಥೆ ಇದೆ. ಸೇವಾ ಭದ್ರತೆ ಇಲ್ಲದೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ಅನುಭವಿಸುವ ಪರಿಸ್ಥಿತಿ ಇದೆ. ಸಂಘಟನೆ ಕಟ್ಟಿಕೊಂಡು ಹೋರಾಟ ಮಾಡುವುದಕ್ಕೂ ಇಲಾಖೆಯೊಳಗೆ ನಿರ್ಬಂಧ ಹೇರಲಾಗಿದೆ” ಎಂದು ರಾಷ್ಟ್ರೀಯ ಆರೋಗ್ಯ ಮಿಷನ್‌ನ ಕಲಬುರ್ಗಿಯ ನಗರ ಕಾರ್ಯಕ್ರಮ ವ್ಯವಸ್ಥಾಪಕರಾಗಿ (ಸಿಪಿಎಂ) ಕೆಲಸ ಮಾಡುತ್ತಿರುವ ಶ್ರೀಕಾಂತ್‌ಸ್ವಾಮಿ ಹೇಳಿದರು.

“ಗುತ್ತಿಗೆ ನೌಕರರಿಗೆ ಸಮಾನ ವೇತನ ನೀಡುತ್ತಿರುವ ಹರಿಯಾಣ ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲೂ ಎಚ್‌ಆರ್‌ ನೀತಿ ಜಾರಿಗೆ ತರಬೇಕು. ಹರಿಯಾಣದಲ್ಲಿ ಸಿಪಿಎಂ ಆಗಿರುವವರಿಗೆ ತಿಂಗಳಿಗೆ 50ರಿಂದ 60 ಸಾವಿರ ವೇತನವಿದೆ. ಆದರೆ, ನಮ್ಮಲ್ಲಿ 31 ಸಾವಿರ ವೇತನವಿದೆ. ಕಡಿಮೆ ವೇತನ ಹಾಗೂ ಸೇವಾ ಭದ್ರತೆ ಇಲ್ಲದಿರುವುದು ಗುತ್ತಿಗೆ ನೌಕರರ ಮಾನಸಿಕ ನೆಮ್ಮದಿಯನ್ನು ಕಸಿದುಕೊಂಡಿದೆ” ಎಂದು ಬೇಸರಿಸುತ್ತಾರೆ ಅವರು.

ರಾಷ್ಟ್ರೀಯ ಆರೋಗ್ಯ ಮಿಷನ್‌ನ ಗುತ್ತಿಗೆ ನೌಕರರು ಹಾಗೂ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ಒಟ್ಟಾಗಿ ತಮ್ಮ ಹಕ್ಕುಗಳ ಈಡೇರಿಕೆಗೆ ವೇದಿಕೆ ರಚಿಸಿಕೊಂಡಿದ್ದು, ಈ ವೇದಿಕೆಯಡಿ ಎಲ್ಲಾ ಗುತ್ತಿಗೆ ನೌಕರರ ಸಮಸ್ಯೆಗಳನ್ನೂ ಸರಕಾರದ ಗಮನಕ್ಕೆ ತರಲಾಗುವುದು. ಈ ಬಗ್ಗೆ ಸರಕಾರದ ಗಮನ ಸೆಳೆಯಲು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ರೂಪಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೇದಿಕೆಯ ಅಧ್ಯಕ್ಷ ಡಾ. ಎಚ್‌.ವಿ. ವಾಸು ಹೇಳಿದರು.