ಕಾಯಬೇಕಾದವರೇ ಕಾದಾಟಕ್ಕೆ ಇಳಿದಾಗ ಪ್ರಯೋಗಿಸಿದ ಅಸ್ತ್ರದ ಹೆಸರು ‘ಗೂಢಚರ್ಯೆ’!
ಸುದ್ದಿ ಸಾರ

ಕಾಯಬೇಕಾದವರೇ ಕಾದಾಟಕ್ಕೆ ಇಳಿದಾಗ ಪ್ರಯೋಗಿಸಿದ ಅಸ್ತ್ರದ ಹೆಸರು ‘ಗೂಢಚರ್ಯೆ’!

ಜನ ಜೀವನ ಮತ್ತು ಆಂತರಿಕ ಭದ್ರತೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು ಕಲೆ ಹಾಕುವ ಹೊಣೆಗಾರಿಕೆ ನಮ್ಮದು ಎಂದು ಅಧಿಕಾರಿಗಳು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದು ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಚಾಣಕ್ಯ ಹೇಳಿಕೊಟ್ಟ ‘ಗೂಢಚರ್ಯೆ’ ಎಂಬ ಆಡಳಿತಾಂಗದ ಅಸ್ತ್ರದ ಅಸಹ್ಯ ಪ್ರಯೋಗ.

ಒಂದು ಕಡೆ ಕೇಂದ್ರ ಸರಕಾರ ಕಡ್ಡಾಯ ರಜೆಯ ಮೇಲೆ ತನಿಖಾ ಸಂಸ್ಥೆ ಸಿಬಿಐನ ಮುಖ್ಯಸ್ಥರನ್ನು ಮನೆಗೆ ಕಳುಹಿಸುತ್ತದೆ. ಮತ್ತೊಂದೆಡೆ ಅವರ ಮನೆಯ ಸುತ್ತ ಗುಪ್ತಚರ ಇಲಾಖೆಯ ಅಧಿಕಾರಿಗಳು ಬೇಹುಗಾರಿಕೆ ಆರೋಪದ ಮೇಲೆ ವಿಚಾರಣೆಗೆ ಒಳಪಡುತ್ತಾರೆ.

ಮಂಗಳವಾರ ಮಧ್ಯರಾತ್ರಿಯಿಂದ ದಿಲ್ಲಿ ನಡೆಯುತ್ತಿರುವ ‘ಸಿಬಿಐ ವರ್ಸಸ್‌ ಸಿಬಿಐ’ ಬೆಳವಣಿಗೆಯಲ್ಲಿ ಗುರುವಾರ ಗೂಢಚರ್ಯೆ ಆರೋಪ ಕೇಳಿಬಂದಿದೆ. ಮುಂಜಾನೆ 8 ಗಂಟೆ ಸುಮಾರಿಗೆ ದೆಹಲಿಯಲ್ಲಿರುವ ಅಲೋಕ್‌ ವರ್ಮಾ ಮನೆ ಸಮೀಪ ಕಾರಿನ ಮರೆಯಲ್ಲಿ ನಿಂತು ಗೂಢಚರ್ಯೆ ನಡೆಸುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಷ್ಟ್ರ ರಾಜಧಾನಿಯ ಪ್ರತಿಷ್ಠಿತ 2 ಜನಪಥ್‌ ರಸ್ತೆಯಲ್ಲಿ ವರ್ಮಾ ಮನೆಯಿದೆ. ಅದರ ಸಮೀಪ ಭದ್ರತಾ ಸಿಬ್ಬಂದಿಗಳು ಶರ್ಟಿನ ಕಾಲರ್ ಪಟ್ಟಿ ಹಿಡಿದು ನಾಲ್ವರನ್ನು ಎಳೆದು ತರುತ್ತಿರುವ ದೃ‍ಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇವರನ್ನು ದೆಹಲಿ ಪೊಲೀಸರಿಗೆ ಒಪ್ಪಿಸಲಾಗಿದ್ದು, ಗುಪ್ತಚರ ಇಲಾಖೆಗೆ ಸೇರಿದ ಧೀರಜ್‌ ಕುಮಾರ್, ಅಜಯ್‌ ಕುಮಾರ್‌, ಪ್ರಶಾಂತ್‌ ಕುಮಾರ್‌ ಮತ್ತು ವಿನೀತ್‌ ಗುಪ್ತಾ ಎಂದು ಗುರುತಿಸಲಾಗಿದೆ.

ವಶಕ್ಕೆ ಪಡೆದುಕೊಂಡ ಐಬಿ ಅಧಿಕಾರಿಗಳ ವಿವರಗಳು
ವಶಕ್ಕೆ ಪಡೆದುಕೊಂಡ ಐಬಿ ಅಧಿಕಾರಿಗಳ ವಿವರಗಳು
/ದಿ ವೈರ್‌. 

ಅಕ್ರಮ ಬೇಹುಗಾರಿಕೆ ಆರೋಪದ ಮೇಲೆ ನಾಲ್ವರ ವಶ ಸುದ್ದಿಯಾಗುತ್ತಿದ್ದಂತೆಯೇ, ಪ್ರತಿಕ್ರಿಯೆ ನೀಡಿರುವ ಗುಪ್ತಚರ ಇಲಾಖೆ, “ಇದರಲ್ಲಿ ಗೂಢಚರ್ಯೆ ಏನಿಲ್ಲ. ಮನೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಜನ ನೆರೆದಿರುವುದನ್ನು ಸಿಬ್ಬಂದಿಗಳು ಪರಿಶೀಲನೆಗೆಂದು ತೆರಳಿದಾಗ ಅವರನ್ನು ತಡೆಯಲಾಗಿದೆ,” ಎಂದು ಹೇಳಿದೆ. ಜತೆಗೆ ಜನ ಜೀವನ ಮತ್ತು ಆಂತರಿಕ ಭದ್ರತೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು ಕಲೆ ಹಾಕುವ ಹೊಣೆಗಾರಿಕೆ ನಮ್ಮದು ಎಂದು ಅಧಿಕಾರಿಗಳು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಮ್ಮ ಯುನಿಟ್‌ಗಳನ್ನು ನಿಯಮಿತವಾಗಿ ಸೂಕ್ಷ್ಮ ಪ್ರದೇಶಗಳಿಗೆ ನಿಯೋಜನೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯ ಕಾನೂನು ಜಾರಿ ಇಲಾಖೆಗಳ ಜತೆ ಸೇರಿ ಈ ಕೆಲಸವನ್ನು ನಿರ್ವಹಿಸಲಾಗುತ್ತದೆ. ಕೆಲವು ಸಂದರ್ಭದಲ್ಲಿ ಹೀಗೆ ನಡೆಯದೇ ಇರಬಹುದು ಎಂದು ‘ಎನ್‌ಡಿಟಿವಿ’ಗೆ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

“ಸಾಮಾನ್ಯದಂತೆ ನಾಲ್ವರನ್ನು ಜನಪಥ್‌ ರಸ್ತೆಗೆ ಕಳುಹಿಸಲಾಗಿತ್ತು. ಇಲ್ಲಿನ ಮನೆಯಲ್ಲಿ ಹೆಚ್ಚಿನ ಜನರು ನೆರೆದಿದ್ದಾರೆ ಎಂಬ ಕಾರಣಕ್ಕೆ ಈ ಅಧಿಕಾರಿಗಳು ಪರಿಶೀಲನೆಗೆ ತೆರಳಿದ್ದಾರೆ. ಇಲ್ಲಿ ಗಣ್ಯ ವ್ಯಕ್ತಿಗಳು ಜೀವಿಸುವುದರಿಂದ ಇಂಥಹದ್ದೊಂದು ಎಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ. ಆದರೆ ಅವರು ಅಲ್ಲಿಗೆ ಹೋದಾಗ ಬೇರೆಯದೇ ನಡೆಯಿತು,” ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

2 ಜನಪಥ್ ರಸ್ತೆಯಲ್ಲಿರುವ ಅಲೋಕ್‌ ವರ್ಮಾ ಅವರ ಮನೆ ಮತ್ತು ನೆರೆದ ಮಾಧ್ಯಮ ದಂಡು. 
2 ಜನಪಥ್ ರಸ್ತೆಯಲ್ಲಿರುವ ಅಲೋಕ್‌ ವರ್ಮಾ ಅವರ ಮನೆ ಮತ್ತು ನೆರೆದ ಮಾಧ್ಯಮ ದಂಡು. 

ಪರಿಣಾಮ ಸದ್ಯ ಮಾಧ್ಯಮಗಳು ಅಧಿಕಾರಿ ಅಲೋಕ್ ವರ್ಮಾ ಮನೆ ಮುಂದೆ ನೆರೆದಿವೆ. ಗೂಢಚರ್ಯೆ ಸುತ್ತ ಇನ್ನಷ್ಟು ಬೆಳವಣಿಗೆಗಳ ನಿರೀಕ್ಷೆ ಇದೆ.

ವಶಕ್ಕೆ ಪಡೆದ ನಾಲ್ವರ ವಿಚಾರಣೆ ನಡೆಸಲಾಗುತ್ತಿದ್ದು, ಬಂಧನ ಪ್ರಕ್ರಿಯೆಗಳು ನಡೆದಿಲ್ಲ ಎಂದು ವರದಿಗಳು ಹೇಳುತ್ತಿವೆ.