ಸಂಕಷ್ಟದಲ್ಲಿರುವ ಪಾಕ್‌ಗೆ ಸೌದಿಯ 3 ಬಿಲಿಯನ್ ಡಾಲರ್  ಆರ್ಥಿಕ ನೆರವು
ಸುದ್ದಿ ಸಾರ

ಸಂಕಷ್ಟದಲ್ಲಿರುವ ಪಾಕ್‌ಗೆ ಸೌದಿಯ 3 ಬಿಲಿಯನ್ ಡಾಲರ್ ಆರ್ಥಿಕ ನೆರವು

ಪಾಕಿಸ್ತಾನ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟುಗಳನ್ನು ಎದುರಿಸಲು ಒಟ್ಟು 6 ಬಿಲಿಯನ್ ಡಾಲರ್ ಮೊತ್ತದ ಅಗತ್ಯ ಇದೆ ಎಂದು ಆರ್ಥಿಕ ತಜ್ಞರು ಮುಂಚೆಯೇ ಅಂದಾಜಿಸಿದ್ದರು.

ಪತ್ರಕರ್ತ ಖಶೋಗಿ ಹಿನ್ನೆಲೆಯಲ್ಲಿ ಇಡೀ ಜಗತ್ತಿನ ಕಣ್ಣಲ್ಲಿ ‘ವಿಲನ್’ ಆಗಿರುವ ಸೌದಿ ಅರೇಬಿಯಾ, ನೆರೆಯ ಪಾಕಿಸ್ತಾನಕ್ಕೆ ಭಾರಿ ನೆರವು ನೀಡಲು ಮುಂದೆ ಬಂದಿದೆ.

ಮಂಗಳವಾರ ಪಾಕಿಸ್ತಾನ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಮುಂದಿನ ಒಂದು ವರ್ಷದ ಅಂತರದಲ್ಲಿ ಒಟ್ಟು 3 ಬಿಲಿಯನ್ ಡಾಲರ್ ಹಣವನ್ನು ಸೌದಿ ಸಾಲದ ರೂಪದಲ್ಲಿ ನೀಡಲಿದೆ. ಈ ಹಣವನ್ನು ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಹಾಗೂ ಸದ್ಯ ಪಾಕಿಸ್ತಾನ ಎದುರಿಸುತ್ತಿರುವ ಹಣಕಾಸಿನ ಮುಗ್ಗಟ್ಟಿನಿಂದ ಹೊರಬರಲು ಬಳಸಬಹುದಾಗಿದೆ.

ಪಾಕಿಸ್ತಾನ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟುಗಳನ್ನು ಎದುರಿಸಲು ಒಟ್ಟು 6 ಬಿಲಿಯನ್ ಡಾಲರ್ ಮೊತ್ತದ ಅಗತ್ಯ ಇದೆ ಎಂದು ಆರ್ಥಿಕ ತಜ್ಞರು ಮುಂಚೆಯೇ ಅಂದಾಜಿಸಿದ್ದರು. ಈಗಾಗಲೇ ವಿಶ್ವಸಂಸ್ಥೆಯ ಐಎಂಎಫ್‌ ಒಂದಷ್ಟು ನೆರವು ನೀಡುವ ಸಾಧ್ಯತೆ ಇದೆ. ಈಗ ಸೌದಿ ಅರೇಬಿಯಾ ಕೂಡ ಸಾಲ ನೀಡಲು ಮುಂದಾಗಿರುವುದು ನೆರೆಯ ದೇಶದ ಸಂಕಷ್ಟವನ್ನು ದೊಡ್ಡಮಟ್ಟದಲ್ಲಿ ದೂರಮಾಡಲಿದೆ.

ಇತ್ತೀಚೆಗಷ್ಟೆ ಸೌದಿ ಹೂಡಿಕೆದಾರರ ಸಮ್ಮೇಳವನ್ನು ನಡೆಸಿತ್ತು. ಆದರೆ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಹಿನ್ನೆಲೆಯಲ್ಲಿ ಹಲವು ದೇಶಗಳು ಈ ಸಮ್ಮೇಳನದಿಂದ ದೂರವೇ ಉಳಿದಿದ್ದರು. ಆದರೆ, ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ಮಾತ್ರ, ‘ಅನಿವಾರ್ಯತೆ’ಯನ್ನು ಮುಂದಿಟ್ಟು ಹೂಡಿಕೆದಾರರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಪಾಕಿಸ್ತಾನ ಕಳೆದ ನಾಲ್ಕು ವರ್ಷಗಳಲ್ಲಿಯೇ ಅತಿ ದೊಡ್ಡ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಇತ್ತೀಚೆಗೆ ಪಾಕಿಸ್ತಾನ ಆರ್ಥಿಕ ಸಚಿವ ಅಸಾದ್ ಉಮರ್, ಐಎಂಎಫ್‌ ಜತೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದ್ದರು. ನವೆಂಬರ್ 7ರಂದು, ಐಎಂಎಫ್ ತಂಡ ಪಾಕಿಸ್ತಾನಕ್ಕೆ ಈ ಸಂಬಂಧ ಭೇಟಿ ನೀಡಲಿದೆ.