ಅಸಹಕಾರ ಧೋರಣೆಗಾಗಿ ಅಲೋಕ್‌ ವರ್ಮಾ ತಲೆದಂಡ: ಕೇಂದ್ರದ ಹೊಸ ವಾದ
ಸುದ್ದಿ ಸಾರ

ಅಸಹಕಾರ ಧೋರಣೆಗಾಗಿ ಅಲೋಕ್‌ ವರ್ಮಾ ತಲೆದಂಡ: ಕೇಂದ್ರದ ಹೊಸ ವಾದ

“ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಸಹಕಾರ ಧೋರಣೆ ತಳೆದ ಸಿಬಿಐ ನಿರ್ದೇಶಕರು ಕಡತಗಳನ್ನು ಸಿಇಸಿಗೆ ಸಿಗದಂತೆ ಮಾಡಿದರು,” ಎಂದು ಕೇಂದ್ರ ಸರಕಾರ ದೂರಿದೆ.

ಕೇಂದ್ರ ಜಾಗೃತ ಆಯೋಗದ ಜತೆ ‘ಅಸಹಕಾರ ಧೋರಣೆ’ ತಾಳಿದ ಹಿನ್ನೆಲೆಯಲ್ಲಿ ಸಿಬಿಐ ನಿರ್ದೇಶಕರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೊಸ ವಾದ ಮುಂದಿಟ್ಟಿದೆ.

ಮಂಗಳವಾರ ಮಧ್ಯರಾತ್ರಿ ನಡೆದ ಬೆಳವಣಿಗೆಗಳಿಗೆ ಕೇಂದ್ರ ಸರಕಾರ ಅಧಿಕೃತಿ ಪ್ರತಿಕ್ರಿಯೆ ನೀಡಿದ್ದು, ‘ಸಿಬಿಐ ವರ್ಸಸ್ ಸಿಬಿಐ’ ಪ್ರಕರಣದಲ್ಲಿ ಅಲೋಕ್ ವರ್ಮಾರನ್ನು ಹರಕೆ ಕುರಿ ಮಾಡಲು ಮುಂದಾಗಿದೆ.

ಸಂಸ್ಥೆಯ ಹಿರಿಯ ಅಧಿಕಾರಿಗಳ ವಿರುದ್ಧ ‘ಭ್ರಷ್ಟಾಚಾರದ ಗಂಭೀರ ಆರೋಪ’ದ ಕಾರಣ ‘ಅಸಾಧಾರಣ’ ಪರಿಸ್ಥಿತಿ ಉದ್ಭವಿಸಿತ್ತು. ಈ ಕಾರಣಕ್ಕೆ ನಿರ್ದೇಶಕ ಅಲೋಕ್‌ ವರ್ಮಾರನ್ನು ರಜೆಯ ಮೇಲೆ ಕಳುಹಿಸಬೇಕಾಯಿತು ಎಂದು ಸರ್ಕಾರ ಸಮಜಾಯಿಷಿ ನೀಡಿದೆ.

ಸಿಬಿಐನಲ್ಲಿನ ಒಡಕಿನ ಪರಿಸರವು ಅದರ ಉತ್ತುಂಗವನ್ನು ತಲುಪಿತ್ತು. ಇದು ಪ್ರಮುಖ ವಿಶ್ವಾಸಾರ್ಹ ತನಿಖಾ ಸಂಸ್ಥೆಯ ಖ್ಯಾತಿಗೆ ಮಸಿ ಬಳೆಯಲು ಆರಂಭಿಸಿತ್ತು. ಈ ಪ್ರಕ್ರಿಯೆ ಸಂಸ್ಥೆಯ ಪರಿಸರವನ್ನು ಗಾಳುಗೆಡಹುವುದಲ್ಲದೆ ಸರಕಾರದ ಮೇಲೆಯೂ ಆಳವಾದ ಮತ್ತು ಗೋಚರವಾದ ಪರಿಣಾಮವನ್ನು ಬೀರುತ್ತದೆ ಎಂಬುದಾಗಿ ಸರಕಾರ ರಜೆಯ ಮೇಲೆ ಕಳುಹಿಸಲು ಕಾರಣವನ್ನು ನೀಡಿದೆ.

ಈ ಕುರಿತು ಸುದೀರ್ಘ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಹಿರಿಯ ಅಧಿಕಾರಿಗಳ ವಿರುದ್ಧ ಆಗಸ್ಟ್‌ 24, 2018ರಂದು ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ದೂರು ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಡತಗಳನ್ನು ನೀಡುವಂತೆ ಎರಡು ಬಾರಿ ಸಿಬಿಐ ನಿರ್ದೇಶಕರಿಗೆ ನೊಟೀಸ್‌ ನೀಡಲಾಗಿತ್ತು. ಸೆಪ್ಟೆಂಬರ್ 14ರ ಮೊದಲು ಇವುಗಳನ್ನು ಸಿಇಸಿಗೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ದಾಖಲೆಗಳನ್ನು ಸಲ್ಲಿಸಲು ಹಲವು ಅವಕಾಶಗಳನ್ನು ಸೃಷ್ಟಿಸಲಾಯಿತು. ಕೊನೆಗೆ ಸಿಬಿಐ ನಿರ್ದೇಶಕರು ಸೆಪ್ಟೆಂಬರ್ 24ರ ಮೊದಲು ಎಲ್ಲಾ ದಾಖಲೆಗಳನ್ನು ನೀಡವುದಾಗಿ ಭರವಸೆ ನೀಡಿದರು.

ಆದರೆ, “ಸತತ ಭರವಸೆಗಳು ಮತ್ತು ನೆನಪಿಸುವ ಪತ್ರಗಳ ನಂತರವೂ ಕಡತಗಳನ್ನು ಸಿವಿಸಿ ಮುಂದೆ ಸಲ್ಲಿಕೆ ಮಾಡಲು ಸಿಬಿಐ ನಿರ್ದೇಶಕರು ವಿಫಲವಾದರು. ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಸಹಕಾರ ಧೋರಣೆ ತಳೆದ ನಿರ್ದೇಶಕರು ಕಡತಗಳನ್ನು ಸಿಇಸಿಗೆ ಸಿಗದಂತೆ ಮಾಡಿದರು,” ಎಂದು ಪತ್ರದಲ್ಲಿ ದೂರಲಾಗಿದೆ.

ಸಿಬಿಐ ನಿರ್ದೇಶಕರು ಅಸಹಕಾರಿಯಾಗಿದ್ದು, ಅವಶ್ಯಕತೆಗಳು / ನಿರ್ದೇಶನಗಳಿಗೆ ಸರಿಯಾದ ರೀತಿಯಲ್ಲಿ ನಡೆದುಕೊಂಡಿಲ್ಲ. ಮತ್ತು ಸಂವಿಧಾನಾತ್ಮಕ ಅಂಗವಾದ ಜಾಗೃತ ಆಯೋಗದ ಕಾರ್ಯಚಟುವಟಿಕೆಗಳಿಗೆ ಉದ್ದೇಶಪೂರ್ವಕ ಅಡ್ಡಿಗಳನ್ನು ಸೃಷ್ಟಿಸಿದ್ದಾರೆ ಎಂಬುದನ್ನು ಸಿವಿಸಿ ಗಮನಿಸಿದೆ ಎಂದು ಹೇಳಿಕೆಯಲ್ಲಿ ಸ್ಪಷ್ಟನೆ ನೀಡಲಾಗಿದೆ.

ಈ ಮೂಲಕ ನಿರ್ದೇಶಕ ಅಲೋಕ್‌ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ನಡುವಿನ ಮುಸುಕಿನ ಗುದ್ದಾಟವೇ ಅವರಿಬ್ಬರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲು ಕಾರಣವಲ್ಲ ಎಂದು ಸರಕಾರ ತಿಳಿಸಿದೆ.