samachara
www.samachara.com
ಬಿಷಪ್ ಫ್ರಾಂಕೋ ವಿರುದ್ಧ ಸಾಕ್ಷ್ಯ ಹೇಳಿದ್ದ ಹಿರಿಯ ಪಾದ್ರಿ ಕುರಿಯಕೊಸ್ ನಿಗೂಢ ಸಾವು
ಸುದ್ದಿ ಸಾರ

ಬಿಷಪ್ ಫ್ರಾಂಕೋ ವಿರುದ್ಧ ಸಾಕ್ಷ್ಯ ಹೇಳಿದ್ದ ಹಿರಿಯ ಪಾದ್ರಿ ಕುರಿಯಕೊಸ್ ನಿಗೂಢ ಸಾವು

ಕುರಿಯಕೊಸ್ ಕಾಟ್ಟುಥರ ಅವರದ್ದು ಅಸಹಜ ಸಾವು ಎಂದು ಅವರ ಸಂಬಂಧಿಕರು ಅಲಪ್ಪುಳದ ಎಸ್‌ಪಿ ಎಸ್‌. ಸುರೇಂದ್ರನ್‌ ಅವರಿಗೆ ದೂರು ನೀಡಿದ್ದಾರೆ.

ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್ ವಿರುದ್ಧ ಸಾಕ್ಷ್ಯ ನುಡಿದಿದ್ದ ಕೇರಳದ ಅಲಪ್ಪುಳ ಮೂಲದ ಹಿರಿಯ ಪಾದ್ರಿ ಕುರಿಯಕೊಸ್ ಕಾಟ್ಟುಥರ (67) ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಸೋಮವಾರ ಬೆಳಿಗ್ಗೆ ಅವರ ಮೃತದೇಹ ಪಂಜಾಬ್‌ನ ದಸೂಯಾದ ಚರ್ಚ್ ಆವರಣದ ಕೋಣೆಯಲ್ಲಿ ಪತ್ತೆಯಾಗಿದೆ. ಅವರದ್ದು ಅನುಮಾನಾಸ್ಪದ ಸಾವು ಎಂದು ಅವರ ಸಂಬಂಧಿಕರು ಅಲಪ್ಪುಳದ ಎಸ್‌ಪಿ ಎಸ್‌. ಸುರೇಂದ್ರನ್‌ ಅವರಿಗೆ ದೂರು ನೀಡಿದ್ದಾರೆ. ಈ ಸಾವಿನ ಬಗ್ಗೆ ಸೂಕ್ತವಾದ ತನಿಖೆ ನಡೆಯಬೇಕೆಂದು ಸಂಬಂಧಿಕರು ಒತ್ತಾಯಿಸಿದ್ದಾರೆ.

ಜಲಂಧರ್‌ ಡಿಯೊಸಿಸ್‌ನ ಪಾದ್ರಿ ಫ್ರಾಂಕೋ ಮುಳಕ್ಕಲ್ ವಿರುದ್ಧ ಸಾಕ್ಷ್ಯ ಹೇಳಿದ್ದಕ್ಕಾಗಿ ತಮಗೆ ಜೀವ ಬೆದರಿಕೆ ಇದೆ ಎಂದು ಕುರಿಯಕೊಸ್ ಕಾಟ್ಟುಥರ ಮಾತೃಭೂಮಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಪರವಾಗಿ ನಿಂತ ಕಾರಣಕ್ಕೆ ಜಲಂಧರ್‌ ಡಿಯೊಸಿಸ್‌ನ ಅಧಿಕಾರಿಗಳಿಂದ ತಮಗೆ ಬೆದರಿಕೆ ಇತ್ತು ಎಂದು ಕುರಿಯಕೊಸ್ ಕಾಟ್ಟುಥರ ಹೇಳಿದ್ದರು.

Also read: ಅತ್ಯಾಚಾರ ಪ್ರಕರಣದಲ್ಲಿ ಚರ್ಚ್‌ನ ಮೌನ; ವ್ಯಾಟಿಕನ್‌ ಪ್ರತಿನಿಧಿಗೆ ಕ್ರೈಸ್ತ ಸನ್ಯಾಸಿನಿ ಪತ್ರ

ಫ್ರಾಂಕೋ ಅವರನ್ನು ಸೆಪ್ಟೆಂಬರ್‌ 21ರಂದು ಕೇರಳ ಪೊಲೀಸರು ಬಂಧಿಸಿದ್ದರು. ಅಕ್ಟೋಬರ್‌ 15ರಂದು ಕೇರಳ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಈಗ ಕುರಿಯಕೊಸ್ ಕಾಟ್ಟುಥರ ನಿಗೂಢವಾಗಿ ಸಾವನ್ನಪ್ಪಿದ್ದು, ಫ್ರಾಂಕೋ ಅವರಿಗೆ ನೀಡಿರುವ ಜಾಮೀನನ್ನು ಹೈಕೋರ್ಟ್‌ ರದ್ದುಗೊಳಿಸಬೇಕು ಎಂದು ಕುರಿಯಕೊಸ್ ಕಾಟ್ಟುಥರ ಅವರ ಸಂಬಂಧಿಕರು ಆಗ್ರಹಿಸಿದ್ದಾರೆ.

“ಕುರಿಯಕೊಸ್ಅ ವರು ಹಾಸಿಗೆಯಲ್ಲಿ ಮಲಗಿದ್ದಲ್ಲೇ ವಾಂತಿ ಮಾಡಿಕೊಂಡಿದ್ದಾರೆ. ಅವರ ಹಾಸಿಗೆ ಸಮೀಪದಲ್ಲಿ ಬಿಪಿ ಮಾತ್ರೆಗಳು ಸಿಕ್ಕಿವೆ. ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ” ಎಂದು ದಸೂಯಾ ವಿಭಾಗದ ಡಿಸಿಪಿ ಎ.ಆರ್‌. ಶರ್ಮಾ ಹೇಳಿದ್ದಾರೆ.

ಕೇರಳದ ಕುರವಿಲಂಗಾಡು ಚರ್ಚ್‌ಗೆ ಸೇರಿದ ಕೊಠಡಿಯಲ್ಲಿ 2014ರ ಮೇ 5ರಿಂದ 2016ರ ಮೇ 6ರ ಅವಧಿಯಲ್ಲಿ ಫ್ರಾಂಕೋ ತಮ್ಮ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದರು ಎಂದು ಕ್ರೈಸ್ತ ಸನ್ಯಾಸಿನಿ ಆರೋಪಿಸಿದ್ದರು.