ಸಿಬಿಐ v/s ಸಿಬಿಐ: ತನ್ನ ಕೇಂದ್ರ ಕಚೇರಿ ಮೇಲೆ ತಾನೇ ದಾಳಿ ನಡೆಸಿದ ಕೇಂದ್ರ ತನಿಖಾ ದಳ
ಸುದ್ದಿ ಸಾರ

ಸಿಬಿಐ v/s ಸಿಬಿಐ: ತನ್ನ ಕೇಂದ್ರ ಕಚೇರಿ ಮೇಲೆ ತಾನೇ ದಾಳಿ ನಡೆಸಿದ ಕೇಂದ್ರ ತನಿಖಾ ದಳ

ತಮಾಷೆಯ ಬೆಳವಣಿಯಲ್ಲಿ ಸ್ವತಃ ತನ್ನ ಕೇಂದ್ರ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದೆ. ಮಾತ್ರವಲ್ಲ ತನ್ನದೇ ಅಧಿಕಾರಿ ಡಿವೈಎಸ್‌ಪಿ ದೇವಿಂದರ್‌ ಕುಮಾರ್‌ರನ್ನು ಬಂಧಿಸಿದೆ.

ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕ ಅಲೋಕ್‌ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಅತ್ಯಪರೂಪದ ಬೆಳವಣಿಯಲ್ಲಿ ಸ್ವತಃ ದೆಹಲಿಯಲ್ಲಿರುವ ತನ್ನ ಕೇಂದ್ರ ಕಚೇರಿ ಮೇಲೆಯೇ ಸಿಬಿಐ ದಾಳಿ ನಡೆಸಿದೆ. ಮಾತ್ರವಲ್ಲ ತನ್ನದೇ ಅಧಿಕಾರಿ ಡಿವೈಎಸ್‌ಪಿ ದೇವಿಂದರ್‌ ಕುಮಾರ್‌ರನ್ನು ಬಂಧಿಸಿದೆ.

ಅಕ್ಟೋಬರ್‌ 15ರಂದು ಸಿಬಿಐನ ಹೈದರಾಬಾದ್‌ ಕಚೇರಿ ತನ್ನ ಎರಡನೇ ಅತ್ಯುನ್ನತ ಅಧಿಕಾರಿ ರಾಕೇಶ್‌ ಆಸ್ತಾನಾ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿಕೊಂಡಿತ್ತು. ಉದ್ಯಮಿ ‘ಮೊಯಿನ್‌ ಖುರೇಶಿ ಪ್ರಕರಣ’ದಲ್ಲಿ ಕೇಸು ಮುಚ್ಚಿ ಹಾಕಲು ಆಸ್ತಾನಾ 2 ಕೋಟಿ ರೂಪಾಯಿ ಲಂಚ ಪಡೆದುಕೊಂಡಿದ್ದಾರೆ ಎಂಬುದು ಆರೋಪ. ಈ ಹಿನ್ನೆಲೆಯಲ್ಲಿ ಎಫ್ಐಆರ್‌ನಲ್ಲಿ ಅಸ್ತಾನಾ, ದೇವೇಂದರ್‌ ಕುಮಾರ್‌ ಸೇರಿದಂತೆ ಸಿಬಿಐ ವಿಶೇಷ ತನಿಖಾ ದಳದ ಕೆಲ ಅಧಿಕಾರಿಗಳ ಮೇಲೆ ಆರೋಪ ಹೊರಿಸಲಾಗಿತ್ತು. ಈ ವಿಚಾರ ಭಾನುವಾರ ಜಗಜ್ಜಾಹೀರಾಗುವ ಮೂಲಕ ಸಿಬಿಐನೊಳಗಿನ ಸಂಘರ್ಷ ಬೀದಿಗೆ ಬಂದಿತ್ತು.

ಸದ್ಯ ಈ ಬೆಳವಣಿಗೆಗಳ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಕೋರಿದ್ದಾರೆ ಎಂದು ಅವರ ಕಚೇರಿ ಹೇಳಿದೆ. ಇದರ ಮಧ್ಯದಲ್ಲೇ ಇಂದು ತನ್ನ ಕೇಂದ್ರ ಕಚೇರಿ ಮೇಲೆಯೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಸಾಮಾನ್ಯವಾಗಿ ದೇಶದಲ್ಲಿ ಯಾವುದೇ ಪ್ರಮುಖ ಅಪರಾಧ ಪ್ರಕರಣಗಳು ನಡೆದಾಗಲೂ ಜನರು ಇದನ್ನು ಸಿಬಿಐಗೆ ಒಪ್ಪಿಸಿ ಎಂದು ಪ್ರತಿಭಟನೆಗೆ ಇಳಿಯುತ್ತಾರೆ. ನಂಬಿಕೆ ಕಳೆದುಕೊಳ್ಳುವಂತಹ ಹಲವು ಬೆಳವಣಿಗೆಗಳ ನಂತರವೂ ಸಿಬಿಐ ಬಗ್ಗೆ ಇಂಥಹ್ದೊಂದು ಸಣ್ಣ ನಿರೀಕ್ಷೆ ಉಳಿದುಕೊಂಡಿತ್ತು. ಆದರೆ ಸದ್ಯ ತನ್ನ ವಿಶೇಷ ನಿರ್ದೇಶಕರ ಮೇಲೆಯೇ ಪ್ರಕರಣ ದಾಖಲಿಸಿಕೊಂಡಿರುವುದು, ತನ್ನ ಕೇಂದ್ರ ಕಚೇರಿ ಮೇಲೆ ತಾನೇ ದಾಳಿ ನಡೆಸಿರುವಂಥ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಬಿಐ ಜನರಿಂದ ತಮಾಷೆಗೆ ಗುರಿಯಾಗಿದೆ.

Also read: ಪ್ರಧಾನಿ ಮೋದಿಯ ‘ನೀಲಿ ಕಣ್ಣಿನ ಹುಡುಗ’ ರಾಕೇಶ್‌ ಅಸ್ತಾನಾ; ಸಿಬಿಐ ಟಾಪ್‌ ಕಾಪ್‌ನ ವಿವಾದಿತ ಚರಿತ್ರೆ ಇದು!

Also read: ದೂರು- ಆರೋಪ- ಗುಮಾನಿ: ‘ಪಂಜರದ ಗಿಳಿ’ ಸಿಬಿಐ ಒಳಗೆ ನಿಜಕ್ಕೂ ಏನು ನಡೆಯುತ್ತಿದೆ?