samachara
www.samachara.com
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧ ಸಿಬಿಐನಲ್ಲೇ ಎಫ್‌ಐಆರ್‌
ಸುದ್ದಿ ಸಾರ

ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧ ಸಿಬಿಐನಲ್ಲೇ ಎಫ್‌ಐಆರ್‌

ರಾಕೇಶ್‌ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿರುವುದು ಇದೇ ಮೊದಲಲ್ಲ. 5,200 ಕೋಟಿ ರೂಪಾಯಿ ವಂಚನೆಯ ಆರೋಪಿಗಳಾದ ಸಂದೇಸರ ಸಹೋದರರ ಪ್ರಕರಣದಲ್ಲೂ ರಾಕೇಶ್‌ ಲಂಚ ಪಡೆದಿರುವ ಆರೋಪವಿದೆ.

ಲಂಚ ಪ್ರಕರಣದಲ್ಲಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಭ್ರಷ್ಟಾಚಾರ ಹಾಗೂ ಮನಿ ಲಾಂಡ್ರಿಂಗ್‌ ಪ್ರಕರಣದ ಆರೋಪಿಯಾಗಿರುವ ಉದ್ಯಮಿ ಮೊಯಿನ್‌ ಖುರೇಶಿಯಿಂದ 2 ಕೋಟಿ ರೂಪಾಯಿ ಲಂಚ ಪಡೆದ ಆರೋಪ ರಾಕೇಶ್ ಮೇಲಿದೆ.

ಈ ಲಂಚ ಪ್ರಕರಣದಲ್ಲಿ ಮಧ್ಯವರ್ತಿ ಮನೋಜ್‌ ಕುಮಾರ್‌ ಎಂಬಾತನನ್ನು ಸಿಬಿಐ ಬಂಧಿಸಿದ್ದು, ಖುರೇಶಿ ಅವರು ನೀಡಿದ್ದ 2 ಕೋಟಿ ರೂಪಾಯಿ ಲಂಚವನ್ನು ರಾಕೇಶ್‌ ಅವರಿಗೆ ತಲುಪಿಸಿದ್ದಾಗಿ ಮನೋಜ್‌ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ರಾಕೇಶ್‌ ಗುಜರಾತ್‌ ಕೇಡರ್‌ನ 1984ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದಾರೆ. ಸಿಬಿಐ ನಿರ್ದೇಶಕರ ನಂತರದ ಉನ್ನತ ಸ್ಥಾನದಲ್ಲಿರುವ ರಾಕೇಶ್ ವಿರುದ್ಧವೇ ಸಿಬಿಐನಲ್ಲಿ ಎಫ್‌ಐಆರ್‌ ದಾಖಲಾಗಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಮತ್ತು ರಾಕೇಶ್‌ ನಡುವಿನ ಆಂತರಿಕ ಕಲಹ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.

ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಕುಟುಂಬ ಸದಸ್ಯರ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅನಗತ್ಯವಾಗಿ ಮಧ್ಯ ಪ್ರವೇಶಿಸುತ್ತಿದ್ದಾರೆ ಎಂದು ರಾಕೇಶ್‌ ಈ ಮುಂಚೆ ದೂರಿದ್ದರು.

ರಾಕೇಶ್‌ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿರುವುದು ಇದೇ ಮೊದಲಲ್ಲ. 5,200 ಕೋಟಿ ರೂಪಾಯಿ ವಂಚನೆಯ ಆರೋಪಿಗಳಾದ ಸಂದೇಸರ ಸಹೋದರರ ಪ್ರಕರಣದಲ್ಲೂ ರಾಕೇಶ್‌ ಲಂಚ ಪಡೆದಿರುವ ಆರೋಪವಿದೆ.