samachara
www.samachara.com
ನ್ಯಾಯ- ನಿಷ್ಠುರ, ‘ಲೋಕವಿರೋಧಿ ಶರಣ’ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿ ಲಿಂಗೈಕ್ಯ
ಸುದ್ದಿ ಸಾರ

ನ್ಯಾಯ- ನಿಷ್ಠುರ, ‘ಲೋಕವಿರೋಧಿ ಶರಣ’ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿ ಲಿಂಗೈಕ್ಯ

ತೋಂಟದಾರ್ಯ ಸಂಸ್ಥಾನ ಮಠದ 19ನೇಯ ಪೀಠಾಧಿಕಾರಿಗಳಾಗಿ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸೇವೆ ಸಲ್ಲಿಸುತ್ತಿದ್ದರು. ಶನಿವಾರ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಗದಗದ ಯಡಿಯೂರು ಶ್ರೀ ಜಗದ್ಗುರು ತೊಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಶನಿವಾರ ಮಧ್ಯಾಹ್ನ ನಿಧನರಾದರು. ತೀವ್ರ ಹೃದಯಾಘಾತದಿಂದ ಅವರು ಗದಗದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ತೋಂಟದಾರ್ಯ ಸಂಸ್ಥಾನ ಮಠವು 15ನೇಯ ಶತಮಾನದಲ್ಲಿ ಬದುಕಿ ಬಾಳಿದ ಶಿವಯೋಗಿ ಸೂರ್ಯ ಶ್ರೀ ಯಡೆಯೂರು ತೋಂಟದ ಶ್ರೀ ಸಿದ್ದಲಿಂಗ ಯತಿಗಳ ನೇರ ವಾರಸುದಾರಿಕೆಯ ಮಠವಾಗಿದೆ. ಇಲ್ಲಿನ 19ನೇಯ ಪೀಠಾಧಿಕಾರಿಗಳಾಗಿ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸೇವೆ ಸಲ್ಲಿಸುತ್ತಿದ್ದರು.

ಅವರ ನೇತೃತ್ವದಲ್ಲಿ ತೋಂಟದಾರ್ಯ ಮಠವು ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಕೆಲಸಗಳನ್ನು ನಡೆಸಿತ್ತು. ಸಾಮಾನ್ಯ ಮಠಗಳಿಗಿಂತ ಭಿನ್ನ ನೆಲೆಯಲ್ಲಿ ತೋಂಟದಾರ್ಯ ಮಠವನ್ನು ಅವರು ಕಟ್ಟಿ ಬೆಳೆಸಿದ್ದರು. ಜನಪರ ಹಾಗೂ ಜ್ಞಾನಪರವಾದ ಜಾತ್ರೋತ್ಸವಗಳ ಮೂಲಕ ಜನರಲ್ಲಿ ಅರಿವು-ವೈಚಾರಿಕತೆಯನ್ನು ಪ್ರಸಾರ ಮಾಡಲು ಅವರು ಶ್ರಮಿಸಿದ್ದರು.

ಅವರ ನಿಧನ ದಿಗ್ಭ್ರಮೆ ಉಂಟು ಮಾಡಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಹಲವಾರು ಗಣ್ಯರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಿತ್ರಕೃಪೆ: ಪ್ರಜಾವಾಣಿ