ಲೋಕಸಭೆಗೆ ಕಾಂಗ್ರೆಸ್‌- ಜೆಡಿಎಸ್‌ ‘ಸಮ್ಮಿಶ್ರ’; ಮಹಾಮೈತ್ರಿಗೆ ಕರ್ನಾಟಕದಲ್ಲೇ ಅಡಿಪಾಯ
ಸುದ್ದಿ ಸಾರ

ಲೋಕಸಭೆಗೆ ಕಾಂಗ್ರೆಸ್‌- ಜೆಡಿಎಸ್‌ ‘ಸಮ್ಮಿಶ್ರ’; ಮಹಾಮೈತ್ರಿಗೆ ಕರ್ನಾಟಕದಲ್ಲೇ ಅಡಿಪಾಯ

ಲೋಕಸಭಾ ಚುನಾವಣೆಯ ಮೈತ್ರಿಗೆ ರಾಜ್ಯದ ಉಪ ಚುನಾವಣೆಯ ಮೈತ್ರಿಯೇ ನಾಂದಿ ಎಂದು ಕಾಂಗ್ರೆಸ್‌- ಜೆಡಿಎಸ್‌ ಮುಖಂಡರು ಹೇಳಿದ್ದಾರೆ. ಸಿದ್ದರಾಮಯ್ಯ ಹಾಗೂ ದೇವೇಗೌಡ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯ ಸಾರಾಂಶ ಇಲ್ಲಿದೆ. 

ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಲಿವೆ ಎಂದು ಉಭಯ ಪಕ್ಷಗಳ ನಾಯಕರು ಘೋಷಿಸಿದ್ದಾರೆ. ಲೋಕಸಭಾ ಚುನಾವಣೆಯ ಮೈತ್ರಿಗೆ ಈ ಉಪ ಚುನಾವಣೆಯ ಮೈತ್ರಿಯೇ ನಾಂದಿ ಎಂದು ಮುಖಂಡರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿದರು.

ಲೋಕಸಭಾ ಚುನಾವಣೆಯ ಹೊತ್ತಿಗೆ ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸಿದ್ದವು. ಆದರೆ, ಅಧಿಕೃತ ಘೋಷಣೆಯೊಂದು ಬಾಕಿ ಉಳಿದಿತ್ತು. ಶನಿವಾರ ಈ ಬಗ್ಗೆ ಎರಡೂ ಪಕ್ಷಗಳ ನಾಯಕರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. “ಹಳೆಯ ತಪ್ಪುಗಳನ್ನೆಲ್ಲಾ ಮನ್ನಿಸಿ” ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮನವಿ ಮಾಡಿದ್ದಾರೆ.

“ಹಲವು ಸಂದರ್ಭಗಳಲ್ಲಿ ನಾವು ಆರೋಪ ಪ್ರತ್ಯಾರೋಪ ಮಾಡಿದ್ದೇವೆ. ಆದರೆ, ಈಗ ಹಳೆಯದ್ದೆಲ್ಲವನ್ನೂ ಮರೆಯುತ್ತೇವೆ. ತಳಮಟ್ಟದ ಜೆಡಿಎಸ್‌ – ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಕೂಡಾ ಒಗ್ಗೂಡಿ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ರಾಷ್ಟ್ರದ ಹಿತಕ್ಕಾಗಿ ನಾವು ಒಂದಾಗಬೇಕಿದೆ. ನಮ್ಮಿಂದ ಹಿಂದೆ ಯಾವುದೇ ತಪ್ಪಾಗಿದ್ದರೆ ಜನತೆ ಹಾಗೂ ಕಾರ್ಯಕರ್ತರು ಕ್ಷಮಿಸಬೇಕು. ಕೋಮುವಾದಿ ಶಕ್ತಿಯನ್ನು ಸೋಲಿಸಲು ನಾವು ಒಂದಾಗಬೇಕು” ಎಂದು ಎಚ್‌.ಡಿ. ದೇವೇಗೌಡ ಹೇಳಿದರು.

“ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಜಾತ್ಯತೀತ ಶಕ್ತಿಗಳು ಒಂದುಗೂಡಬೇಕು. ಜಾತ್ಯತೀತ ಮತಗಳು ವಿಭಜನೆಯಾಗಬಾರದು. ಆ ಮೂಲಕ ಕೋಮುವಾದಿ ಬಿಜೆಪಿಗೆ ಸಹಾಯ ಆಗಬಾರದು. ಇದೇ ಉದ್ದೇಶದಿಂದಲೇ ನಾವು ಸಮ್ಮಿಶ್ರ ಸರಕಾರ ರಚಿಸಿಕೊಂಡಿದ್ದೇವೆ. ಉಪ ಚುನಾವಣೆಯಲ್ಲೂ ನಾವು ಇದೇ ಕಾರಣಕ್ಕೆ ಒಂದಾಗಿದ್ದೇವೆ” ಎಂದು ಸಿದ್ದರಾಮಯ್ಯ ತಿಳಿಸಿದರು.

“ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಮತ ಹಂಚಿಕೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ ಮುಂದಿತ್ತು. ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಂದಿದ್ದವು. ಅಧಿಕಾರ ಹಿಡಿಯಬೇಕೆಂದು ಅವರು ಏನೇನೋ ಪ್ರಯತ್ನ ನಡೆಸಿದರು. ಆದರೆ, ಅವರು ಆ ಪ್ರಯತ್ನದಲ್ಲಿ ಸಫಲರಾಗಲಿಲ್ಲ. ಕೋಮುವಾದಿಗಳು ಅಧಿಕಾರಕ್ಕೆ ಬರುವುನ್ನು ತಡೆಯಲು ಜಾತ್ಯತೀತ ಶಕ್ತಿಗಳ ಮೈತ್ರಿ ಅಗತ್ಯ. ಕಾಂಗ್ರೆಸ್‌- ಜೆಡಿಎಸ್‌ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಈ ಉಪ ಚುನಾವಣೆಯಲ್ಲಿ ನಾವು ಎಲ್ಲಾ ಐದೂ ಕ್ಷೇತ್ರಗಳಲ್ಲೂ ಗೆದ್ದೇ ಗೆಲ್ಲುತ್ತೇವೆ. ಲೋಕಸಭಾ ಚುನಾವಣೆಗೆ ಕರ್ನಾಟಕದ ಮೈತ್ರಿಯೇ ಅಡಿಪಾಯ. ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ” ಎಂದರು.

“ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ, ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದ ಆರ್ಥಿಕ ಸ್ಥಿತಿ ಹಾಳಾಗಿದೆ. ಮೋದಿ ಜನರಿಗೆ ನೀಡಿದ್ದ ಭರವಸೆಗಳೆಲ್ಲವೂ ಹುಸಿಯಾಗಿವೆ. ಜನಸಾಮಾನ್ಯರು ಬದುಕುವುದೇ ದುಸ್ಸರವಾಗಿದೆ. ಬಡಜನರ, ರೈತರ ಕಷ್ಟ ಕೇಳುವ ಪ್ರಯತ್ನವನ್ನೂ ಮೋದಿ ಮಾಡಿಲ್ಲ. ಜನ ಸಾಮಾನ್ಯರು, ರೈತರು, ಬಡವರು, ಹಿಂದುಳಿದವರು ಭಯದಲ್ಲಿ ಬದುಕುವಂತಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ರಾಜಕೀಯವಾಗಿ ಬಿಜೆಪಿ ಸಾಮಾನ್ಯ ಶತ್ರು (ಕಾಮನ್‌ ಎನಿಮಿ). ಕಾಂಗ್ರೆಸ್- ಜೆಡಿಎಸ್‌ ಮೈತ್ರಿ ವಿಚಾರವಾಗಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದು ಹೇಳಿದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, “ದೇವೇಗೌಡರು ಹಾಗೂ ಸಿದ್ದರಾಮಯ್ಯ ನಡುವೆ ಹಳೆಯ ಸ್ನೇಹದ ಬಾಂಧವ್ಯ ಇತ್ತು. ದೇಹ ಬೇರೆ ಇದ್ದರೂ ಮನಸ್ಸಿನಲ್ಲಿ ದೇವೇಗೌಡ- ಸಿದ್ದರಾಮಯ್ಯ ಒಂದಾಗಿದ್ದರು. ಈ ಬಾಂಧವ್ಯ ನಮ್ಮ ಮೈತ್ರಿ ಬಲವನ್ನು ಹೆಚ್ಚಿಸಿದೆ” ಎಂದರು.

ಸುದ್ದಿಗೋಷ್ಠಿಯ ನಡುವೆಯೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತೋಂಟದಾರ್ಯ ಸ್ವಾಮೀಜಿ ನಿಧನದ ಸುದ್ದಿಯನ್ನು ಬಹಿರಂಗಪಡಿಸಿದರು. ಸುದ್ದಿಗೋಷ್ಠಿಯಲ್ಲೇ ಅಗಲಿದ ಸ್ವಾಮೀಜಿಗೆ ಸಂತಾಪ ಸೂಚಿಸಲಾಯಿತು.