samachara
www.samachara.com
ಗೊಂದಲದ ಗೂಡಾದ ಅಫ್ಘಾನಿಸ್ತಾನ ಚುನಾವಣೆ, 170 ಕ್ಕೂ ಹೆಚ್ಚು ಸಾವುನೋವು
ಸುದ್ದಿ ಸಾರ

ಗೊಂದಲದ ಗೂಡಾದ ಅಫ್ಘಾನಿಸ್ತಾನ ಚುನಾವಣೆ, 170 ಕ್ಕೂ ಹೆಚ್ಚು ಸಾವುನೋವು

250 ಸ್ಥಾನಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ 2565 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ ಬಾಂಬ್‌ ಸ್ಫೋಟ, ಉಗ್ರರ ದಾಳಿಗೆ 10 ಅಭ್ಯರ್ಥಿಗಳು ಸಾವನ್ನಪ್ಪಿದ್ದಾರೆ.

ಭಯೋತ್ಪಾದಕ ಪೀಡಿತ ಅಫ್ಘಾನಿಸ್ತಾನದ ಸಾರ್ವತ್ರಿಕ ಚುನಾವಣೆ ಗೊಂದಲದ ಗೂಡಾಗಿದೆ. ಇಲ್ಲಿಯವರೆಗೆ ಚುನಾವಣೆ ವೇಳೆ 170 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದೇ ವೇಳೆ ಹಲವು ದಿನಗಳಾದರೂ ಮತದಾನ ಪ್ರಕ್ರಿಯೆಯೇ ಇನ್ನೂ ಮುಗಿದಿಲ್ಲ.

ಶಾಸನಸಭೆಗಳಿಗೆ ನಡೆದ ಇಡೀ ಚುನಾವಣೆಯೇ ಗೊಂದಲದಲ್ಲಿ ಮುಳುಗಿದ್ದು 29,000 ಮತಗಟ್ಟೆಗಳಲ್ಲಿ ಹೆಚ್ಚಿನವು ವಿಳಂಬವಾಗಿ ತೆರೆದರೆ, ಇನ್ನು ಕೆಲವು ಮತದಾನದ ಅವಧಿ ಮುಗಿದರೂ ಬಾಗಿಲು ತೆರೆಯಲೇ ಇಲ್ಲ. ಮತಯಂತ್ರಗಳಲ್ಲಿ ದೋಷ, ಸೂಕ್ತ ಸಿಬ್ಬಂದಿಗಳಿಲ್ಲದೆ ದೇಶವೊಂದರ ಚುನಾವಣೆಯೇ ಅಸ್ತವ್ಯಸ್ತವಾಗಿದೆ.

ಚುನಾವಣೆಯುದ್ಧಕ್ಕೂ ಹಲವು ಬಾಂಬು ದಾಳಿಗಳಿಗೆ ಅಫ್ಘಾನಿಸ್ತಾನ ಸಾಕ್ಷಿಯಾಗಿದೆ. ಇತ್ತೀಚಿಗಿನ ದಾಳಿಯಲ್ಲಿ ರಾಜಧಾನಿ ಕಾಬೂಲ್‌ನಲ್ಲಿ ಮತಗಟ್ಟಯೊಂದರಲ್ಲಿ ಆತ್ಮಾಹುತಿ ದಳದ ಬಾಂಬರ್‌ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ 15 ಜನರು ಸಾವನ್ನಪ್ಪಿ 20 ಜನರು ಗಾಯಗೊಂಡಿದ್ದಾರೆ. ಇದೇ ರೀತಿಯಲ್ಲಿ ದಾಳಿಯಲ್ಲಿ ಅಫ್ಘಾನಿಸ್ತಾನದ ರಾಜಧಾನಿಯಲ್ಲೇ 19 ಜನರು ಅಸುನೀಗಿದ್ದರೆ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸದ್ಯಕ್ಕೆ ಈ ಬಾಂಬ್‌ ಸ್ಫೋಟದ ಹೊಣೆಯನ್ನು ಯಾರೂ ಹೊತ್ತಿಕೊಂಡಿಲ್ಲ. ಆದರೆ ಈ ಹಿಂದೆ ಹೇಳಿಕೆ ಬಿಡುಗಡೆ ಮಾಡಿದ್ದ ತಾಲಿಬಾನ್‌ ತಾನು ಈ ‘ನಕಲಿ ಚುನಾವಣೆ’ಯಲ್ಲಿ 300 ಬಾಂಬ್‌ ಸ್ಫೋಟಗಳನ್ನು ನಡೆಸಿದ್ದಾಗಿ ಹೇಳಿಕೊಂಡಿತ್ತು.

ದಾಳಿಗಳು ರಾಜಧಾನಿಯ ಹೊರಗೂ ನಡೆದಿವೆ. ಕುಂಡುಜ್‌ ನಗರದ ಮೇಲೆ 20 ಕ್ಕೂ ಹೆಚ್ಚು ರಾಕೆಟ್‌ ದಾಳಿಗಳು ನಡೆದಿದ್ದು ಮೂವರು ಸಾವನ್ನಪ್ಪಿ 39 ಜನರು ಗಾಯಗೊಂಡಿದ್ದಾರೆ. ಕುಂಡುಜ್‌ ನಗರದಿಂದ ಕೆಲವು ಕಿಲೋಮೀಟರ್‌ ದೂರದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಚುನಾವಣಾ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು 7 ಜನರು ನಾಪತ್ತೆಯಾಗಿದ್ದಾರೆ. ನಂಗಹಾರ್‌ ಪ್ರಾಂತ್ಯದಲ್ಲಿ 8 ಬಾಂಬ್‌ ಸ್ಫೋಟಗಳು ಸಂಭವಿಸಿದ್ದು ಇಬ್ಬರು ಸಾವನ್ನಪ್ಪಿ ಐವರು ಗಾಯಗೊಂಡಿದ್ದಾರೆ. ಹೀಗೆ ಚುನಾವಣೆಯುದ್ದಕ್ಕೂ ದೇಶದ ಮೂಲೆ ಮೂಲೆಯಲ್ಲೂ ರಕ್ತದ ಕೋಡಿ ಹರಿದಿದೆ.

ಒಟ್ಟು ಅಫ್ಘಾನಿಸ್ತಾನದಲ್ಲಿ 34 ಪ್ರಾಂತ್ಯಗಳಲ್ಲಿ 89.18 ಲಕ್ಷ ಮತದಾರರಿದ್ದಾರೆ. ಆರಂಭಿಕ ಮಾಹಿತಿಗಳ ಪ್ರಕಾರ 27 ಪ್ರಾಂತ್ಯಗಳ ಲೆಕ್ಕ ತೆಗೆದುಕೊಂಡಾಗ 15 ಲಕ್ಷ ಜನರು ಮತದಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ಹಲವು ಕಡೆಗಳಲ್ಲಿ ಮತದಾನ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ 371 ಮತಗಟ್ಟೆಗಳಲ್ಲಿ ಭಾನುವಾರವೂ ಚುನಾವಣಾ ಆಯೋಗ ಮತದಾನವನ್ನು ಮುಂದುವರಿಸಿದೆ.

ಹಾಗೆ ನೋಡಿದರೆ ಇಂಥಹದ್ದೊಂದು ಚುನಾವಣೆ ಮೂರುವರೆ ವರ್ಷಗಳ ಹಿಂದೆಯೇ ನಡೆಯಬೇಕಾಗಿತ್ತು. ಆದರೆ ಸಂಕಷ್ಟದಲ್ಲಿರುವ ದೇಶದಲ್ಲಿ ತಡವಾಗಿ ಈಗ ಚುನಾವಣೆ ನಡೆಯುತ್ತಿದೆ. 2001ರಲ್ಲಿ ತಾಲಿಬಾನ್‌ ಸಾಮ್ರಾಜ್ಯ ಪತನವಾದ ನಂತರ ದೇಶದಲ್ಲಿ ನಡೆಯುತ್ತಿರುವ ಕೇವಲ ಮೂರನೇ ಚುನಾವಣೆ ಇದಾಗಿದೆ.

250 ಸ್ಥಾನಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ 2565 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ ಬಾಂಬ್‌ ಸ್ಫೋಟ, ಉಗ್ರರ ದಾಳಿಗೆ 10 ಅಭ್ಯರ್ಥಿಗಳು ಸಾವನ್ನಪ್ಪಿದ್ದಾರೆ. ಅದರಲ್ಲೂ ಕಂದಹಾರ್ ಪ್ರಾಂತ್ಯದ ಪೊಲೀಸ್‌ ಮುಖ್ಯಸ್ಥರೇ ದಾಳಿಗೆ ಬಲಿಯಾಗಿದ್ದರು. ಇದರಿಂದ ಇಲ್ಲಿ ಒಂದು ವಾರ ತಡವಾಗಿ ಮತದಾನ ನಡೆದಿತ್ತು.

ಹೀಗೊಂದು ವಿಚಿತ್ರ ರೀತಿಯ ಸಾರ್ವತ್ರಿಕ ಚುನಾವಣೆ ಅಫ್ಘಾನಿಸ್ತಾನದಲ್ಲಿ ಜಾರಿಯಲ್ಲಿದೆ. ಈ ಚುನಾವಣೆಯ ಫಲಿತಾಂಶವನ್ನು ನವೆಂಬರ್‌ 10ರಂದು ಘೋಷಣೆ ಮಾಡಲಾಗುತ್ತದೆ. ಆದರೆ ಇದಕ್ಕೂ ಮುನ್ನ ಉಗ್ರರ ದಾಳಿಗಳುಮೇರೆ ಮೀರಿದ್ದು ಬ್ಯಾಲೆಟ್‌ ಯಂತ್ರಗಳ ನಾಶವಾದರೆ ಏನು ಮಾಡುವುದು ಎಂಬ ಚಿಂತೆಯೂ ಕಾಡತೊಡಗಿದೆ.