ಅರ್ಚಕರಿಂದಲೇ ಶಬರಿಮಲೆ ಮುಚ್ಚುವ  ಬೆದರಿಕೆ; 3ನೇ ದಿನವೂ ಜಾರಿಯಾಗದ ಸುಪ್ರೀಂಕೋರ್ಟ್‌ ತೀರ್ಪು
ಸುದ್ದಿ ಸಾರ

ಅರ್ಚಕರಿಂದಲೇ ಶಬರಿಮಲೆ ಮುಚ್ಚುವ ಬೆದರಿಕೆ; 3ನೇ ದಿನವೂ ಜಾರಿಯಾಗದ ಸುಪ್ರೀಂಕೋರ್ಟ್‌ ತೀರ್ಪು

ಶಬರಿಮಲೆ ವಿಚಾರದಲ್ಲಿ ಕೇರಳ ಸರಕಾರ ಅಡ್ಡಗೋಡೆ ಮೇಲೆ ದೀಪ ಇಟ್ಟಿದೆ. ಬೆದರಿಕೆ ಹಾಕುತ್ತಿರುವ ದೇಗುಲದ ಅರ್ಚಕರನ್ನು ಕಾನೂನಿನಡಿ ನಿಯಂತ್ರಿಸಲು ಸರಕಾರ ಮುಂದಾಗುತ್ತಿಲ್ಲ.

ಶಬರಿಮಲೆ ದೇಗುಲದ ಬಾಗಿಲು ತೆರೆದು ಇಂದಿಗೆ ಮೂರು ದಿನವಾದರೂ ಇನ್ನೂ ಸುಪ್ರೀಂಕೋರ್ಟ್‌ ತೀರ್ಪು ಪಾಲನೆಯಾಗಿಲ್ಲ. ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂಬ ಸುಪ್ರೀಂಕೋರ್ಟ್‌ ತೀರ್ಪಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ದೇಗುಲದ ಅರ್ಚಕರು ವಿರುದ್ಧವಾಗಿ ನಿಂತಿದ್ದಾರೆ.

ತೀರ್ಪನ್ನು ವಿರೋಧಿಸುತ್ತಿರುವವರ ಬೆದರಿಕೆ, ಗೂಂಡಾಗಿರಿಗಳು ಮೇರೆ ಮೀರಿವೆ. ಮಹಿಳೆಯರು ದೇಗುಲ ಪ್ರವೇಶಿಸಿದರೆ ದೇಗುಲಕ್ಕೆ ಬೀಗ ಹಾಕಿ ಪೂಜೆ ನಿಲ್ಲಿಸುತ್ತೇವೆ ಎಂದು ಅರ್ಚಕರು ಬೆದರಿಕೆ ಹಾಕಿದ್ದಾರೆ. ಶಬರಿಮಲೆ ಮಾರ್ಗದಲ್ಲಿ ಅಲ್ಲಲ್ಲಿ ಗುಂಪುಗೂಡುತ್ತಿರುವ ಭಕ್ತರ ಸೋಗಿನ ಗೂಂಡಾಗಳು ಮಹಿಳೆಯರನ್ನು ಬೆದರಿಸಿ ವಾಪಸ್‌ ಕಳಿಸುತ್ತಿದ್ದಾರೆ.

ಹೆಲ್ಮೆಟ್‌, ಶೋಲ್ಡರ್‌ ಪ್ಯಾಡ್‌ ಹಾಗೂ ಬುಲೆಟ್‌ ಪ್ರೂಫ್‌ ಜಾಕೆಟ್‌ಗಳನ್ನು ಧರಿಸಿ ಪೊಲೀಸರ ಬಿಗಿ ಭದ್ರತೆಯಲ್ಲಿ ಶಬರಿಮಲೆ ದೇಗುಲಕ್ಕೆ ಸುಮಾರು 500 ಮೀಟರ್‌ ಸಮೀಪಕ್ಕೆ ಹೋಗಿದ್ದ ಇಬ್ಬರು ಮಹಿಳೆಯರನ್ನು ಭಕ್ತರ ಸೋಗಿನ ಗೂಂಡಾಗಳು ಹಾಗೂ ಅರ್ಚಕರು ತಡೆದು ವಾಪಸ್‌ ಕಳಿಸಿದ್ದಾರೆ.

ದೇಗುಲ ಪ್ರವೇಶಕ್ಕೆ ಮುಂದಾದ ಈ ಇಬ್ಬರು ಮಹಿಳೆಯರ ದಾರಿ ಅಡ್ಡವಾಗಿ ಕುಳಿತ ಭಕ್ತ ವೇಷಧಾರಿ ಗೂಂಡಾಗಳು ಹಾಗೂ ಅರ್ಚಕರು ಯಾವುದೇ ಕಾರಣಕ್ಕೂ ಮಹಿಳೆಯರಿಗೆ ದೇಗುಲ ಪ್ರವೇಶಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಈ ವೇಳೆ ಮೂಖ ಪ್ರೇಕ್ಷಕರಾದ ಪೊಲೀಸರು ಮಹಿಳೆಯರ ಮನವೊಲಿಸಿ ಅವರನ್ನು ವಾಪಸ್‌ ಕಳಿಸಿದರು.

“ಒಂದು ವೇಳೆ ಮಹಿಳೆಯರು ದೇಗುಲ ಪ್ರವೇಶಿಸಲೇಬೇಕು ಎಂದಾದರೆ ನಾವು ದೇಗುಲಕ್ಕೆ ಬೀಗ ಹಾಕಿಕೊಂಡು ಪೂಜೆ ಬಿಟ್ಟು ಹೋಗುತ್ತೇವೆ. ನಾನು ಭಕ್ತರ ಪರವಾಗಿದ್ದೇನೆ. ಇದನ್ನು ಬಿಟ್ಟು ಬೇರೆ ಆಯ್ಕೆಯೇ ನನ್ನ ಮುಂದಿಲ್ಲ” ಎಂದು ದೇಗುಲದ ಮುಖ್ಯ ಅರ್ಚಕ ಕಂದರಾರು ರಾಜೀವಾರು ಹೇಳಿದ್ದಾರೆ.

“ಬಿಗಿ ಭದ್ರತೆಯಲ್ಲಿ ಇಬ್ಬರು ಮಹಿಳೆಯರನ್ನು ದೇಗುಲದ ಸಮೀಪದವರೆಗೂ ಕರೆತರಲಾಗಿತ್ತು. ಈಗ ಅಲ್ಲಿನ ಪರಿಸ್ಥಿತಿಯನ್ನು ಅವರಿಗೆ ವಿವರಿಸಿದ್ದೇವೆ. ಅವರಿಬ್ಬರೂ ಇಲ್ಲಿಂದ ವಾಪಸ್‌ ಹೋಗಲು ಒಪ್ಪಿದ್ದಾರೆ” ಎಂದು ಕೇರಳದ ಐಜಿಪಿ ಎಸ್‌. ಶ್ರೀಜಿತ್‌ ಹೇಳಿದ್ದಾರೆ.

ಮಹಿಳೆಯರ ಪ್ರವೇಶಕ್ಕೆ ಅಡ್ಡಿಪಡಿಸುತ್ತಿರುವ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗಕ್ಕೆ ಕೇರಳ ಪೊಲೀಸರು ಮುಂದಾಗುತ್ತಿಲ್ಲ. ಕೇರಳ ಸರಕಾರ ಕೂಡಾ ಇದು ಪೂರ್ತಿಯಾಗಿ ಧಾರ್ಮಿಕ ವಿಚಾರ ಎಂದು ಹೇಳಿತ್ತಿದೆ. “ದೇಗುಲಕ್ಕೆ ಭಕ್ತೆಯರು ಪ್ರವೇಶಿಸಲು ಮುಂದಾದರೆ ನಾವು ಅವರಿಗೆ ಅವಕಾಶ ನೀಡಬಹುದು. ಆದರೆ, ದೇಗುಲಕ್ಕೆ ಪ್ರವೇಶಿಸಲು ಬರುತ್ತಿರುವವರು ಸಾಮಾಜಿಕ ಕಾರ್ಯಕರ್ತೆಯರು. ಭಕ್ತರಲ್ಲದವರಿಗೆ ದೇಗುಲ ಪ್ರವೇಶ ಸಾಧ್ಯವಿಲ್ಲ” ಎಂದು ಕೇರಳ ದೇವಸ್ವಂ ಇಲಾಖೆ ಸಚಿವ ಸುರೇಂದ್ರನ್‌ ತಿಳಿಸಿದ್ದಾರೆ.

ಹೈದರಾಬಾದ್‌ನ ಮೋಜೊ ಟಿವಿಯ ಪತ್ರಕರ್ತೆ ಕವಿತಾ ಜಕ್ಕಲ್‌ ಮತ್ತು ಕೊಚ್ಚಿ ಮೂಲದ ಮಹಿಳೆಯೊಬ್ಬರು ಶುಕ್ರವಾರ ದೇಗುಲ ಪ್ರವೇಶಿಸಲು ಮುಂದಾಗಿದ್ದರು. ಕೊಚ್ಚಿ ಮೂಲದ ಮಹಿಳೆ ಕಪ್ಪು ಬಟ್ಟೆ ಧರಿಸಿ, ಇರುಮುಡಿ ಹೊತ್ತೇ ಶಬರಿಮಲೆಗೆ ಬಂದಿದ್ದರು. ಆದರೆ, ಅವರ ಪ್ರವೇಶಕ್ಕೂ ಭಕ್ತರ ವೇಷದ ಗೂಂಡಾಗಳು ಅಡ್ಡಿಪಡಿಸಿದ್ದಾರೆ. ಈ ಮಹಿಳೆಯ ಕೊಚ್ಚಿಯಲ್ಲಿರುವ ಮನೆಯ ಮೇಲೂ ಗೂಂಡಾಗಳು ದಾಳಿ ನಡೆಸಿದ್ದಾರೆ.

ಒಂದು ಕಡೆ ಕೇರಳದ ದೇವಸ್ವಂ ಇಲಾಖೆ ಸಚಿವರು ಭಕ್ತೆಯರ ಪ್ರವೇಶಕ್ಕೆ ಅವಕಾಶ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆ ದೇಗುಲದ ಅರ್ಚಕರೇ ಮಹಿಳೆಯರು ಪ್ರವೇಶಿಸಬಾರದು ಎಂದು ಬೆದರಿಕೆ ತಂತ್ರಕ್ಕೆ ಮುಂದಾಗಿದ್ದಾರೆ. ದೇಗುಲದ ಬಾಗಿಲು ತೆರೆದ ದಿನದಿಂದ ಶಬರಿಮಲೆ ಪ್ರವೇಶ ಮಹಿಳೆರಿಗೆ ನಿಷಿದ್ಧ ಎಂಬಂತಾಗಿದೆ.

ಸುಪ್ರೀಂಕೋರ್ಟ್‌ ತೀರ್ಪನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಈ ವಿಚಾರದಲ್ಲಿ ಬದ್ಧತೆಯನ್ನು ತೋರುತ್ತಿಲ್ಲ. ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡು, ಬೆದರಿಕೆ ಹಾಕುತ್ತಿರುವ ದೇಗುಲದ ಅರ್ಚಕರನ್ನು ಕಾನೂನಿನಡಿ ನಿಯಂತ್ರಿಸಲು ಕೇರಳ ಸರಕಾರ ಮುಂದಾಗುತ್ತಿಲ್ಲ. ಹೀಗಾಗಿ ಕೇರಳ ಸರಕಾರ ಸದ್ಯ ಅಡ್ಡಗೋಡೆ ಮೇಲೆ ದೀಪ ಇಟ್ಟ ಸ್ಥಿತಿಯಲ್ಲಿದೆ.

Also read: ಶಬರಿಮಲೆ ಎಂಬ ಸ್ಥಾಪಿತ ನಂಬಿಕೆ ಮತ್ತು 250 ಕೋಟಿ ರೂ. ವಾರ್ಷಿಕ ಆದಾಯದ ಹಿಂದಿನ ಅಸಲಿ ಕತೆ!