ರಾವಣ ದಹನ ವೀಕ್ಷಿಸುತ್ತಿದ್ದವರ ಮೇಲೆ ಹರಿದ ಅವಳಿ ರೈಲು, ಕನಿಷ್ಠ 52 ಸಾವು
ಸುದ್ದಿ ಸಾರ

ರಾವಣ ದಹನ ವೀಕ್ಷಿಸುತ್ತಿದ್ದವರ ಮೇಲೆ ಹರಿದ ಅವಳಿ ರೈಲು, ಕನಿಷ್ಠ 52 ಸಾವು

ಅಮೃತಸರದ ಸಮೀಪದಲ್ಲಿರುವ ಜೋಧಾ ಪಾಠಕ್‌ನಲ್ಲಿ ರಾವಣ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ ಇದನ್ನು ವೀಕ್ಷಿಸಲೆಂದು ಸುಮಾರು 300 ಕ್ಕೂ ಹೆಚ್ಚು ಜನರು ರೈಲ್ವೇಯ ಹಳಿಗಳ ಮೇಲೆ ನೆರೆದಿದ್ದರು.

ಜನರು ನವರಾತ್ರಿ ಸಂಭ್ರಮದಿಂದ ಹೊರ ಬರುವ ಮುನ್ನವೇ ಭೀಕರ ಅಪಘಾತವೊಂದು ನಡೆದಿದೆ. ಪಂಜಾಬ್‌ನ ಅಮೃತಸರದಲ್ಲಿ ರಾವಣ ದಹನ ವೀಕ್ಷಿಸುತ್ತಿದ್ದ ಜನರ ಮೇಲೆ ಅವಳಿ ರೈಲುಗಳು ಹರಿದಿದ್ದು ಕನಿಷ್ಠ 52ಕ್ಕೂ ಹೆಚ್ಚು ಜನರು ಸಾವನ್ನಪ್ಪಿ 72 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಿಗೆ ಅಮೃತಸರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಗಿದ್ದೇನು?

ಉತ್ತರ ಭಾರತದಲ್ಲಿ ನವರಾತ್ರಿಯ ಕೊನೆಯ ದಿನ ರಾವಣ ದಹನ ಮಾಡುವುದು ಸಂಪ್ರದಾಯ. ಬೃಹತ್ ರಾವಣನ ಪ್ರತಿಕೃತಿಗಳಿಗೆ ಸಾರ್ವಜನಿಕವಾಗಿ ಬೆಂಕಿ ಹಚ್ಚಿ ಸುಡಲಾಗುತ್ತದೆ. ಇದನ್ನು ನೋಡಲೆಂದೇ ನೂರಾರು, ಸಾವಿರಾರು ಜನರು ಸೇರುತ್ತಾರೆ.

ಇಂದು ನವರಾತ್ರಿಯ ಕೊನೆಯ ದಿನವಾಗಿದ್ದು ಇದೇ ಹಿನ್ನೆಲೆಯಲ್ಲಿ ಅಮೃತಸರದ ಸಮೀಪದಲ್ಲಿರುವ ಜೋಧಾ ಪಾಠಕ್‌ನಲ್ಲಿ ರಾವಣ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ ಇದನ್ನು ವೀಕ್ಷಿಸಲೆಂದು ಸುಮಾರು 300 ಕ್ಕೂ ಹೆಚ್ಚು ಜನರು ರೈಲ್ವೇಯ ಹಳಿಗಳ ಮೇಲೆ ನೆರೆದಿದ್ದರು. ಇಲ್ಲಿ ನಿಂತಿದ್ದ ಜನರು ರಾವಣ ದಹನ ಆರಂಭವಾಗುತ್ತಿದ್ದಂತೆ ಉರಿಯುತ್ತಿರುವ ಪ್ರತಿಕೃತಿ ನೋಡಿ ಸಂಭ್ರಮಿಸುತ್ತಿದ್ದರು.

ಈ ಸಂದರ್ಭದಲ್ಲಿ ಒಮ್ಮಿಂದೊಮ್ಮೆಲೇ ಜಲಂಧರ್‌-ಅಮೃತಸರ ನಡುವಿನ ಮಾರ್ಗದಲ್ಲಿ ರೈಲು ಏಕಕಾಲಕ್ಕೆ ಎರಡೂ ದಿಕ್ಕುಗಳಿಂದ ಆಗಮಿಸಿದೆ. ರಾವಣ ದಹನ ವೀಕ್ಷಿಸುತ್ತಿದ್ದವರ ಗಮನಕ್ಕೆ ಇದು ಬಂದಿಲ್ಲ. ರಾವಣ ದಹನ ವೀಕ್ಷಿಸುತ್ತಿರುವಾಲೇ ಏನಾಗುತ್ತಿದೆ ಎಂದು ತಿರುಗಿ ನೋಡುವಷ್ಟರಲ್ಲಿ ನೂರಾರು ಜನರ ಮೇಲೆ ರೈಲು ಹರಿದು ಹೋಗಿದೆ. “ಏಕಕಾಲದಲ್ಲಿ ಎರಡೂ ದಿಕ್ಕಿನಿಂದ ರೈಲು ಬಂದಿದ್ದರಿಂದ ಜನರಿಗೆ ತಪ್ಪಿಸಿಕೊಳ್ಳಲು ಹೆಚ್ಚು ಅವಕಾಶವೂ ಸಿಗಲಿಲ್ಲ. ಎರಡೂ ರೈಲಿನಡಿ ಸಿಲುಕಿ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಬೇಕಾಯಿತು,” ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆ ಬೆನ್ನಲ್ಲೆ ಪಂಜಾಬ್‌ ಮುಖ್ಯಮಂತ್ರಿ ಕ್ಯಾ. ಅಮರಿಂದರ್‌ ಸಿಂಗ್‌ ಅಪಘಾತ ನಡೆದ ಸ್ಥಳಕ್ಕ ಧಾವಿಸಿದ್ದಾರೆ. ಅಮೆರಿಕಾದಲ್ಲಿರುವ ರೈಲ್ವೇ ಸಚಿವ ಪಿಯೂಷ್‌ ಗೋಯಾಲ್‌ ತಮ್ಮ ಪ್ರವಾಸ ಮೊಟಕುಗೊಳಿಸಿ ಭಾರತದತ್ತ ಹೊರಟಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ರಾಜಕೀಯ ಬಣ್ಣಗಳನ್ನು ಪಡೆದುಕೊಳ್ಳುತ್ತಿದ್ದು, ಸೂಕ್ತ ಅನುಮತಿಗಳನ್ನು ಪಡೆಯದೇ ಕಾಂಗ್ರೆಸ್‌ ನಾಯಕರು ರೈಲ್ವೇ ಹಳಿ ಮೇಲೆ ದಸರಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಎಂದು ವಿರೋಧ ಪಕ್ಷಗಳು ದೂರಿವೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂಬ ಬೇಡಿಕೆಯೂ ಕೇಳಿ ಬಂದಿದೆ.