ಪತ್ರಕರ್ತರಿಗೂ ಶಬರಿಮಲೆ ನಿಷೇಧ; ಅಯ್ಯಪ್ಪ ಕ್ಷೇತ್ರದಲ್ಲಿ ಮುಂದುವರೆದ ಗೂಂಡಾಗಿರಿ
ಸುದ್ದಿ ಸಾರ

ಪತ್ರಕರ್ತರಿಗೂ ಶಬರಿಮಲೆ ನಿಷೇಧ; ಅಯ್ಯಪ್ಪ ಕ್ಷೇತ್ರದಲ್ಲಿ ಮುಂದುವರೆದ ಗೂಂಡಾಗಿರಿ

‘ನ್ಯೂಯಾರ್ಕ್‌ ಟೈಮ್ಸ್‌’ನ ಪತ್ರಕರ್ತೆ ಸುಹಾಸಿನಿ ರಾಜ್‌ ಮತ್ತು ಅವರ ವಿದೇಶಿ ಸಹೋದ್ಯೋಗಿಯ ಮೇಲೆ ಕಲ್ಲು ತೂರಾಟ ನಡೆಸಿ ಅವರನ್ನು ಪಂಪಾದಿಂದ ವಾಪಸ್‌ ಕಳಿಸಲಾಗಿದೆ.

ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸುವುದನ್ನು ತಡೆಯುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರು ಗುರುವಾರ ಶಬರಿಮಲೆಗೆ ಹೊರಟಿದ್ದ ಪತ್ರಕರ್ತರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆಯ ಪತ್ರಕರ್ತೆ ದೆಹಲಿ ಮೂಲದ ಸುಹಾಸಿನಿ ರಾಜ್‌ ಮತ್ತು ಅವರ ವಿದೇಶಿ ಸಹೋದ್ಯೋಗಿಯ ಮೇಲೆ ಕಲ್ಲು ತೂರಾಟ ನಡೆಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅವರನ್ನು ಪಂಪಾದಿಂದ ವಾಪಸ್‌ ಕಳಿಸಿದ್ದಾರೆ.

ಪಂಪಾದಿಂದ ನಡೆದುಕೊಂಡು ಶಬರಿಮಲೆಗೆ ಹೊರಟಿದ್ದ ಇವರನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಾರ್ಗ ಮಧ್ಯೆ ತಡೆದಿದ್ದಾರೆ. ಇವರು ಶಬರಿಮಲೆಗೆ ಪ್ರವೇಶಿಸಬಾರದು ಎಂದು ದಾರಿಗೆ ಅಡ್ಡಲಾಗಿ ಕುಳಿತಿದ್ದಾರೆ. ಈ ವೇಳೆ ಪತ್ರಕರ್ತರ ನೆರವಿಗೆ ಬಂದ ಪೊಲೀಸರು ಅವರಿಗೆ ಭದ್ರತೆ ನೀಡಿ ಶಬರಿಮಲೆಗೆ ಕರೆದುಕೊಂಡು ಹೋಗಲು ಮುಂದಾದರು.

ಸುಮಾರು ಐವತ್ತು ಮಂದಿ ಪೊಲೀಸ್‌ ಸಿಬ್ಬಂದಿ ಪತ್ರಕರ್ತರನ್ನು ಸುತ್ತುವರಿದು ಶಬರಿಮಲೆ ಕಡೆಗೆ ಹೊರಟಾಗ ಕಿಡಿಗೇಡಿಗಳು ಇವರ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರ ರಕ್ಷಣೆಯಲ್ಲೇ ಪತ್ರಕರ್ತರನ್ನು ವಾಪಸ್‌ ಕಳಿಸಲಾಯಿತು.

ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೂ ಅವಕಾಶ ಕೊಡಬೇಕು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದರೂ ಅದರ ಅನುಷ್ಠಾನಕ್ಕೆ ಹಿಂದೂ ಸಂಘಟನೆಗಳು ಅಡ್ಡಿಪಡಿಸುತ್ತಿವೆ. ಬುಧವಾರ ಸಂಜೆ ಶಬರಿಮಲೆಯ ಅಯ್ಯಪ್ಪ ದೇಗುಲದ ಬಾಗಿಲು ತೆಗೆಯಲಾಗಿದೆ. ಆದರೆ, ಈವರೆಗೂ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಸಿಕ್ಕಿಲ್ಲ. ಶಬರಿಮಲೆಗೆ ಹೋಗುವ ಮಾರ್ಗ ಮಧ್ಯೆ ಭಕ್ತರ ಸೋಗಿನಲ್ಲಿ ಸೇರಿರುವ ಗೂಂಡಾಗಳು ಮಹಿಳೆಯರನ್ನು ವಾಪಸ್‌ ಕಳಿಸುತ್ತಿದ್ದಾರೆ.

ಈ ಗೂಂಡಾಗಳನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ. ಶಬರಿಮಲೆಗೆ ಎಲ್ಲಾ ಮಹಿಳೆಯರ ಪ್ರವೇಶಕ್ಕಾಗಿ ಎಲ್ಲಾ ಭದ್ರತೆಯನ್ನೂ ಕೈಗೊಳ್ಳಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದರು. ಆದರೆ, ಬುಧವಾರ ಶಬರಿಮಲೆಯಲ್ಲಿ ಪ್ರತಿಭಟನೆಗಳು ಹಿಂಸಾಚಾರದ ಸ್ವರೂಪ ಪಡೆದುಕೊಂಡಿದ್ದವು.

ಹಿಂಸಾಚಾರಕ್ಕಿಳಿದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿದರೂ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಶಬರಿಮಲೆಯ ನಾಲ್ಕು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೆ, ಹಲವು ಕಡೆ ನಿಷೇಧಾಜ್ಞೆಯನ್ನೂ ಉಲ್ಲಂಘಿಸಿ ಶಬರಿಮಲೆಗೆ ಹೋಗುವ ಮಾರ್ಗ ಮಧ್ಯೆ ಗೂಂಡಾಗಳು ಗುಂಪು ಸೇರಿ ಮಹಿಳೆಯರು ಶಬರಿಮಲೆಗೆ ಹೋಗದಂತೆ ತಡೆಯುತ್ತಿದ್ದಾರೆ.