samachara
www.samachara.com
ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಸ್ವಂತ್‌ ಸಿಂಗ್‌ ಪುತ್ರ
ಸುದ್ದಿ ಸಾರ

ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಸ್ವಂತ್‌ ಸಿಂಗ್‌ ಪುತ್ರ

ರಜಪೂತ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಮನ್ವೇಂದ್ರ ಸಿಂಗ್‌ ಆಗಮನದಿಂದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ತನಗೆ ಲಾಭವಾಗಬಹುದು ಎಂದು ಕಾಂಗ್ರೆಸ್‌ ಲೆಕ್ಕ ಹಾಕಿದೆ.

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭಯದಲ್ಲಿರುವ ಬಿಜೆಪಿಗೆ ಮತ್ತೊಂದು ಅಘಾತ ಎದುರಾಗಿದೆ. ಬಿಜೆಪಿ ಹಿರಿಯ ನಾಯಕ ಜಸ್ವಂತ್‌ ಸಿಂಗ್‌ ಪುತ್ರ ಮಾಜಿ ಶಾಸಕ ಮನ್ವೇಂದ್ರ ಸಿಂಗ್‌ ಕಾಂಗ್ರೆಸ್‌ ಪಾಳಯ ಸೇರಿದ್ದಾರೆ. ರಜಪೂತ ಸಮುದಾಯದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ 54 ವರ್ಷದ ಸಿಂಗ್‌ ನಿರ್ಗಮನ ಬಿಜೆಪಿಗೆ ಆತಂಕ ತಂದೊಡ್ಡಿದೆ.

2013ರ ಚುನಾವಣೆಯಲ್ಲಿ ಬಾರ್ಮೆರ್‌ನ ಶಿಯೋ ಕ್ಷೇತ್ರದಲ್ಲಿ ಮನ್ವೇಂದ್ರ ಸಿಂಗ್‌ ಬಿಜೆಪಿಯಿಂದ ಸ್ಪರ್ಧಿಸಿ ಜಯಶಾಲಿಯಾಗಿದ್ದರು. ನಂತರ 2014ರಲ್ಲಿ ಜಸ್ವಂತ್‌ ಸಿಂಗ್‌ ಅವರಿಗೆ ಬರ್ಮೇರ್‌ - ಜೈಸಲ್ಮೇರ್‌ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನೀಡದಾಗ ತಂದೆ ಮಗ ಇಬ್ಬರೂ ಕೇಸರಿ ಪಕ್ಷದ ವಿರುದ್ಧ ಆಕ್ರೋಶಿತರಾಗಿದ್ದರು. ಅದೇ ಚುನಾವಣೆಯಲ್ಲಿ ಜಸ್ವಂತ್‌ ಸಿಂಗ್‌ ಸ್ವತಂತ್ರವಾಗಿ ಸ್ಪರ್ಧಿಸಿ ಸೋಲೊಪ್ಪಿಕೊಂಡಿದ್ದರು.

ನಂತರದ ದಿನಗಳಲ್ಲಿ ಬಿಜೆಪಿಯಿಂದ ಮಾನಸಿಕವಾಗಿ ದೂರ ಸರಿಯುತ್ತಾ ಬಂದ ಮನ್ವೇಂದ್ರ ಸಿಂಗ್‌ ತಿಂಗಳ ಕೆಳಗೆ ನಡೆದ ರ್ಯಾಲಿಯಲ್ಲಿ ತಾವು ಪಕ್ಷ ಬಿಡುತ್ತಿರುವುದಾಗಿ ಘೋಷಿಸಿದ್ದರು. ಇದೀಗ ಬುಧವಾರ ಅವರು ಕುಟುಂಬ ಸಮೇತರಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರಿದ ಅವರು, ಬಿಜೆಪಿ ಜತೆಗಿದ್ದದ್ದು ನನ್ನ ಅತೀ ದೊಡ್ಡ ತಪ್ಪು ಎನ್ನುವಂತೆ ಮಾತನಾಡಿದ್ದಾರೆ. ಅವರ ಪ್ರವೇಶ ತಮಗೆ ಅನುಕೂಲಕರವಾಗಲಿದೆ ಎಂದು ಕಾಂಗ್ರೆಸ್‌ ಲೆಕ್ಕಾಚಾರ ಹಾಕಿದೆ. ಆದರೆ ‘ಅವರ ನಿರ್ಗಮನದಿಂದ ಬರ್ಮೇರ್‌-ಜೈಸಲ್ಮೇರ್‌ ಭಾಗದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್‌ ಅಸಹಾಯಕವಾಗಿದ್ದು ತೆರೆ ಮರೆಗೆ ಸರಿದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ’ ಎಂದು ಬಿಜೆಪಿ ನಾಯಕ ರಾಜೇಂದ್ರ ರಾಥೋಡ್‌ ಹೇಳಿದ್ದಾರೆ.

ಇದನ್ನು ಅಲ್ಲಗಳೆದಿರುವ ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಚಿನ್‌ ಪೈಲಟ್‌, ಅವರ ಆಗಮನ ಪಕ್ಷಕ್ಕೆ ಲಾಭ ತಂದುಕೊಡಲಿದೆ ಎಂದಿದ್ದಾರೆ. ಜತೆಗೆ ಬಿಜೆಪಿ ಪಕ್ಷ ಬಿಡುವವರ ಪಟ್ಟಿ ದೊಡ್ಡದಿದೆ ಎಂಬ ಸ್ಫೋಟಕ ಸುದ್ದಿ ನೀಡಿದ್ದಾರೆ.

ಪಶ್ಚಿಮ ರಾಜಸ್ಥಾನ ಭಾಗದಲ್ಲಿ ರಜಪೂತರ ಮತಗಳು ನಿರ್ಣಾಯಕವಾಗಿದ್ದು, ಮನ್ವೇಂದ್ರ ಸಿಂಗ್‌ ಪ್ರವೇಶ ಕಾಂಗ್ರೆಸ್‌ಗೆ ಲಾಭ ತರಲಿದೆ ಎಂದು ಚುನಾವಣಾ ಪಂಡಿತರೂ ಹೇಳುತ್ತಿದ್ದಾರೆ. ಇದೇ ವೇಳೆ ಸಿಂಗ್‌ ಜತೆ ರಜಪುರೋಹಿತ, ಚರಣ, ಪ್ರಜಾಪತಿ ಸಮುದಾಯದವರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ಕಾಂಗ್ರೆಸ್ ನಂಬಿಕೊಂಡಿದೆ. ಈ ಲೆಕ್ಕಾಚಾರಗಳು ಎಷ್ಟರಮಟ್ಟಿಗೆ ನಿಜವಾಗಲಿದೆ ಎಂಬುದಕ್ಕೆ ಡಿಸೆಂಬರ್ 7ರಂದು ರಾಜ್ಯದಲ್ಲಿ ನಡೆಯಲಿರುವ ಚುನಾವಣೆ ಉತ್ತರ ನೀಡಲಿದ್ದು, ಡಿಸೆಂಬರ್‌ 11ರ ಫಲಿತಾಂಶ ಸಮಗ್ರ ಚಿತ್ರಣವನ್ನು ತೆರೆದಿಡಲಿದೆ.