ಶಬರಿಮಲೆಯಲ್ಲಿ ಪತ್ರಕರ್ತೆಯರ ಮೇಲೆ ದಾಳಿ; ಗುಂಡಾಗಿರಿಗೆ ಇಳಿದ ಹಿಂದೂ ಸಂಘಟನೆಗಳು
ಸುದ್ದಿ ಸಾರ

ಶಬರಿಮಲೆಯಲ್ಲಿ ಪತ್ರಕರ್ತೆಯರ ಮೇಲೆ ದಾಳಿ; ಗುಂಡಾಗಿರಿಗೆ ಇಳಿದ ಹಿಂದೂ ಸಂಘಟನೆಗಳು

‘ದಿ ನ್ಯೂಸ್‌ ಮಿನಟ್‌’ನ ಸರಿತಾ ಬಾಲನ್‌, ‘ರಿಪಬ್ಲಿಕ್‌ ಟಿವಿ’ಯ ಪೂಜಾ ಪ್ರಸನ್ನ ಹಾಗೂ ‘ನ್ಯೂಸ್‌ 18’ ಸುದ್ದಿಸಂಸ್ಥೆಯ ಪತ್ರಕರ್ತೆ ಶಬರಿಮಲೆಗೆ ಹೋಗದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದಿದ್ದಾರೆ.

ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸುತ್ತಿದ್ದುದನ್ನು ವಿರೋಧಿಸುತ್ತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ವರದಿಗೆ ತೆರಳಿದ್ದ ಪತ್ರಕರ್ತೆಯರ ಮೇಲೆ ಗುಂಡಾಗಿರಿ ನಡೆಸಿದ್ದಾರೆ.

‘ದಿ ನ್ಯೂಸ್‌ ಮಿನಟ್‌’ನ ಸರಿತಾ ಬಾಲನ್‌, ‘ರಿಪಬ್ಲಿಕ್‌ ಟಿವಿ’ಯ ಪೂಜಾ ಪ್ರಸನ್ನ ಹಾಗೂ ‘ನ್ಯೂಸ್‌ 18’ ಸುದ್ದಿಸಂಸ್ಥೆಯ ಪತ್ರಕರ್ತೆ ಶಬರಿಮಲೆಗೆ ಹೋಗದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದಿದ್ದಾರೆ. ಈ ವೇಳೆ ಕಾರ್ಯಕರ್ತರು ಇವರಿದ್ದ ವಾಹನಗಳನ್ನು ಜಖಂಗೊಳಿಸಿ, ಅವರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆ.

ಸರಿತಾ ಪ್ರಯಾಣಿಸುತ್ತಿದ್ದ ಕೇರಳ ಸಾರಿಗೆ ಸಂಸ್ಥೆಯ ಬಸ್ ತಡೆದಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಗುಂಪು ಅವರನ್ನು ಬಸ್‌ನಿಂದ ಬಲವಂತವಾಗಿ ಕೆಳಗಿಳಿಸಿ ಹಲ್ಲೆ ನಡೆಸಿದೆ. ಈ ಗುಂಪು ಸರಿತಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಪಸ್‌ ಹೋಗುವಂತೆ ಬೆದರಿಕೆ ಹಾಕಿದೆ ಎಂದು ‘ದಿ ನ್ಯೂಸ್‌ ಮಿನಟ್‌’ ವರದಿ ಮಾಡಿದೆ.

‘ರಿಪಬ್ಲಿಕ್‌ ಟಿವಿ’ ಹಾಗೂ ‘ನ್ಯೂಸ್‌ 18’ ಸುದ್ದಿಸಂಸ್ಥೆಗಳ ಕಾರುಗಳ ಮೇಲೆ ದಾಳಿ ನಡೆಸಿರುವ ಪ್ರತಿಭಟನಾಕಾರರ ಗುಂಪು ಕಾರಿನ ಗಾಜನ್ನು ಒಡೆದು, ಜಖಂಗೊಳಿಸಿದೆ. ಕ್ಯಾಮೆರಾ ಹಾಗೂ ಇತರೆ ಉಪಕರಣಗಳಿಗೂ ಪ್ರತಿಭಟನಾಕಾರರು ಹಾನಿ ಮಾಡಿದ್ದಾರೆ ಎನ್ನಲಾಗಿದೆ.

“ಪತ್ರಕರ್ತೆಯರು ಶಬರಿಮಲೆ ದೇಗುಲ ಪ್ರವೇಶಕ್ಕೆ ಹೋದವರಲ್ಲ. ವರದಿಗಾಗಿ ಹೋಗಿದ್ದ ಪತ್ರಕರ್ತೆಯರ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿರುವುದು ಖಂಡನಾರ್ಹ. ಲಿಂಗತ್ವದ ಆಧಾರದ ಮೇಲೆ ನಮ್ಮ ಕೆಲಸಕ್ಕೆ ಅಡ್ಡಿಪಡಿಸುವುದನ್ನು ನಾವು ಸಹಿಸುವುದಿಲ್ಲ” ಎಂದು ‘ದಿ ನ್ಯೂಸ್‌ ಮಿನಟ್‌’ನ ಸಂಪಾದಕಿ ಧನ್ಯಾ ರಾಜೇಂದ್ರನ್‌ ಹೇಳಿದ್ದಾರೆ.

ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವುದರಿಂದ ‘ಶಬರಿಮಲೆ ಉಳಿಸಿ’ ಅಭಿಯಾನದ ಮುಖ್ಯಸ್ಥ ರಾಹುಲ್ ಈಶ್ವರ್ ಅವರನ್ನು ಕೇರಳ ಪೊಲೀಸರು ಪಂಪಾದಲ್ಲಿ ಬಂಧಿಸಿದ್ದಾರೆ.