ಆಪರೇಷನ್‌ ಕಮಲ: ಗೋವಾ ಕಾಂಗ್ರೆಸ್‌ ಶಾಸಕರಿಬ್ಬರು ಬಿಜೆಪಿ ಸೇರ್ಪಡೆ
ಸುದ್ದಿ ಸಾರ

ಆಪರೇಷನ್‌ ಕಮಲ: ಗೋವಾ ಕಾಂಗ್ರೆಸ್‌ ಶಾಸಕರಿಬ್ಬರು ಬಿಜೆಪಿ ಸೇರ್ಪಡೆ

ದೆಹಲಿಯಲ್ಲಿ ಬಿಜೆಪಿ ಪಕ್ಷ ಸೇರಿರುವ ದಯಾನಂದ್‌ ಸೋಪ್ಟೆ ಮತ್ತು ಸುಭಾಷ್‌ ಶಿರೋಡ್ಕರ್‌ ನಮ್ಮ ಹಿಂದೆಯೇ ಇನ್ನೂ ಎರಡರಿಂದ ಮೂರು ಜನ ಶಾಸಕರು ಪಕ್ಷಕ್ಕೆ ಬರಲಿದ್ದಾರೆ ಎಂದು ಹೇಳಿದ್ದಾರೆ.

ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಬಿಜೆಪಿ ಬಹುದೊಡ್ಡ ಆಪರೇಷನ್‌ ನಡೆಸಿ ಯಶಸ್ವಿಯಾಗಿದೆ. ಕಾಂಗ್ರೆಸ್‌ ಪಾಳಯ ತೊರೆದು ಗೋವಾದ ಶಾಸಕರಿಬ್ಬರು ಬಿಜೆಪಿಗೆ ಸೇರಿದ್ದಾರೆ.

ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾರನ್ನು ಭೇಟಿಯಾದ ಶಾಸಕರಿಬ್ಬರು ತಾವು ಪಕ್ಷ ನಿಷ್ಠೆ ಬದಲಿಸುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದರು. ಬಳಿಕ ಸಂಜೆ ಹೊತ್ತಿಗೆ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ಯಾಂಕ್ರಿಯಾಟಿಕ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇನ್ನೊಂದೆಡೆ ಗೋವಾದಲ್ಲಿ ಬಿಜೆಪಿ ಸ್ಪಷ್ಟ ಬಹುಮತವಿಲ್ಲದೆ ಒದ್ದಾಡುತ್ತಿದೆ. ಪರಿಕ್ಕರ್‌ ಹೇಗೋ ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗುತ್ತಿದ್ದರಿಂದ ಸಮಸ್ಯೆ ಇರಲಿಲ್ಲ. ಆದರೆ ಅವರು ಅನಾರೋಗ್ಯ ಬೀಳುತ್ತಿದ್ದಂತೆ ಪಕ್ಷಕ್ಕೆ ಮ್ಯಾಜಿಕ್‌ ನಂಬರ್ ಚಿಂತೆ ಕಾಡತೊಡಗಿದೆ. ಅದರ ಬೆನ್ನಿಗೆ ಈ ಆಪರೇಷನ್‌ ನಡೆದಿದೆ.

ದಯಾನಂದ್‌ ಸೋಪ್ಟೆ ಮತ್ತು ಸುಭಾಷ್‌ ಶಿರೋಡ್ಕರ್‌ ಬಿಜೆಪಿಗೆ ಪಕ್ಷಾಂತರ ಮಾಡಿದ ನಾಯಕರಾಗಿದ್ದಾರೆ. ದೆಹಲಿಯಲ್ಲಿ ಪಕ್ಷ ಸೇರಿರುವ ಇವರುಗಳು ನಮ್ಮ ಹಿಂದೆಯೇ ಇನ್ನೂ ಎರಡರಿಂದ ಮೂರು ಜನ ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಹೇಳಿದ್ದಾರೆ.

ಸೋಮವಾರ ದೆಹಲಿಯತ್ತ ವಿಮಾನದಲ್ಲಿ ಹೊರಟಿದ್ದ ಸೋಪ್ಟೆ ‘ತಾವು ಬಿಸಿನೆಸ್‌ ಟ್ರಿಪ್‌’ಗೆ ಹೋಗುತ್ತಿರುವುದಾಗಿ ಹೇಳಿದ್ದರು. ಶಿರೋಡ್ಕರ್‌ ಕೂಡ ಬಿಜೆಪಿ ಸೇರುವ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೇ ಸಂದರ್ಭದಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ಎ. ಚೆಲ್ಲಕುಮಾರ್‌, ‘ಇಬ್ಬರೂ ಶಾಸಕರ ಜತೆ ಮಾತನಾಡಿದ್ದೇನೆ. ಅವರು ಪಕ್ಷ ಬಿಡುತ್ತಿಲ್ಲ’ ಎಂದು ಭರವಸೆ ನೀಡಿದ್ದಾರೆ ಎಂದಿದ್ದರು.

ಆದರೆ ಬೆಳಗಾಗುತ್ತಲೇ ಎಲ್ಲವೂ ತಿರುವು ಮುರುವಾಗಿದ್ದು ಇಬ್ಬರೂ ಶಾಸಕರು ಬಿಜೆಪಿ ಪಾಳಯ ಸೇರಿದ್ದಾರೆ. ಇವರಿಬ್ಬರ ಕುದುರೆ ವ್ಯಾಪಾರದ ಹಿಂದೆ ಗೋವಾದ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಕೈವಾಡ ಇದೆ ಎಂದು ಚೆಲ್ಲಕುಮಾರ್ ಆರೋಪಿಸಿದ್ದಾರೆ. ಇವರಿಬ್ಬರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ತಮ್ಮನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂಬ ಭರವಸೆ ಮೆಲೆ ಅವರು ಈ ಆಪರೇಷನ್‌ ಕಮಲ ನಡೆಸಿದ್ದಾರೆ ಎಂದು ದೂರಿದ್ದಾರೆ.

ಈ ಆಪರೇಷನ್‌ ಅಂತ್ಯದಲ್ಲಿ 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಬಲ 16ರಿಂದ 14ಕ್ಕೆ ಕುಸಿದಿದೆ. ಜತೆಗೆ ಅತೀ ದೊಡ್ಡ ಪಕ್ಷ ಎಂಬ ಹೆಗ್ಗಳಿಕೆಯನ್ನೂ ಅದು ಕಳೆದುಕೊಂಡಿದೆ. ಸದ್ಯ 14 ಶಾಸಕರನ್ನು ಹೊಂದಿರುವ ಬಿಜೆಪಿ ಇಲ್ಲಿ ಮಹಾರಾಷ್ಟ್ರವಾದಿ ಗೋಮಂತಕ್‌ ಪಾರ್ಟಿ ಮತ್ತು ಗೋವಾ ಫಾರ್ವರ್ಡ್‌ ಪಕ್ಷದ ಬೆಂಬಲದೊಂದಿಗೆ ಸರಕಾರ ನಡೆಸುತ್ತಿದೆ. ಇವರಿಗೆ ಮೂವರು ಪಕ್ಷೇತರರ ಬೆಂಬಲವೂ ಇದೆ.