samachara
www.samachara.com
ಸ್ವಘೋಷಿತ ದೇವಮಾನವ ಸಂತ ರಾಮ್‌ಪಾಲ್‌ಗೆ ಜೀವಾವಧಿ ಶಿಕ್ಷೆ
ಸುದ್ದಿ ಸಾರ

ಸ್ವಘೋಷಿತ ದೇವಮಾನವ ಸಂತ ರಾಮ್‌ಪಾಲ್‌ಗೆ ಜೀವಾವಧಿ ಶಿಕ್ಷೆ

ಇದು ಕೇವಲ ಒಂದು ಕೊಲೆ ಪ್ರಕರಣಕ್ಕೆ ನೀಡಿದ ಶಿಕ್ಷೆಯಾಗಿದ್ದು ಮತ್ತೋರ್ವ ಮಹಿಳೆಯ ಕೊಲೆ ಪ್ರಕರಣದ ಜೈಲು ಶಿಕ್ಷೆಯನ್ನು ನ್ಯಾಯಾಲಯ ಬುಧವಾರ ಘೋಷಣೆ ಮಾಡಲಿದೆ.

ಸ್ವಘೋಷಿತ ದೇವಮಾನವ ಸಂತ ರಾಮ್‌ಪಾಲ್‌ ಮತ್ತು 14 ಜನ ಇತರರು ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. 2014ರಲ್ಲಿ ನಡೆದ ನಾಲ್ವರು ಮಹಿಳೆಯರು ಮತ್ತು ಓರ್ವ ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢದ ಸ್ಥಳೀಯ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ಅಕ್ಟೋಬರ್‌ 11ರಂದು ಐಪಿಸಿ ಸೆಕ್ಷನ್‌ 302(ಕೊಲೆ), 343 (ಅಕ್ರಮ ಬಂಧನ) ಮತ್ತು 120 ಬಿ (ಸಂಚು) ಆರೋಪದ ಮೇಲೆ ರಾಮ್‌ಪಾಲ್‌ರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿತ್ತು. ಇದೀಗ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ಆರ್. ಚಾಲಿಯಾ ರಾಮ್‌ಪಾಲ್‌ ಸೇರಿ 15 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 2.05 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಇದು ಕೇವಲ ಒಂದು ಪ್ರಕರಣದಲ್ಲಿ ನೀಡಿದ ಶಿಕ್ಷೆಯಾಗಿದ್ದು ಮತ್ತೋರ್ವ ಮಹಿಳೆಯ ಕೊಲೆಗೆ ಸಂಬಂಧಿಸಿದ ಶಿಕ್ಷೆಯನ್ನು ನ್ಯಾಯಾಲಯ ಬುಧವಾರ ಘೋಷಣೆ ಮಾಡಲಿದೆ. ಈ ಪ್ರಕರಣದಲ್ಲಿ ರಾಮ್‌ಪಾಲ್‌ ಮತ್ತು 13 ಜನರು ಅಪರಾಧಿಗಳಾಗಿದ್ದಾರೆ.

ಸದ್ಯ ರಾಮ್‌ಪಾಲ್‌ ಹಿಸ್ಸಾರ್‌ ಕೇಂದ್ರ ಕಾರಾಗೃಹದಲ್ಲಿದ್ದಾರೆ. ದೊಡ್ಡ ಮಟ್ಟದ ಅನುಯಾಯಿಗಳನ್ನು ಹೊಂದಿರುವ ಅವರನ್ನು 2014ರಲ್ಲಿ ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ನ್ಯಾಯಾಲಯದ ವಿಚಾರಣೆಗೆ ಸತತವಾಗಿ ಗೈರು ಹಾಜರಾಗಿದ್ದ ಅವರನ್ನು ಬಂಧಿಸುವಂತೆ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಆದೇಶ ನೀಡಿತ್ತು.

ಈ ವೇಳೆ ರಾಮ್‌ಪಾಲ್‌ ಅವರನ್ನು ಬಂಧಿಸಲು ಹಿಸ್ಸಾರ್‌ಗೆ ತೆರಳಿದ ಪೊಲೀಸರಿಗೆ ಜನರು ಅಡ್ಡಿಯಾಗಿದ್ದರು. ಸುಮಾರು 12 ಕಿಲೋಮಿಟರ್‌ ಆವರಣದಲ್ಲಿರುವ ಬೃಹತ್ ಸತ್‌ಲೋಕ್‌ ಆಶ್ರಮದಲ್ಲಿ 20,000 ಕ್ಕೂ ಅಧಿಕ ಜನರು ಸೇರಿಕೊಂಡು ರಾಮ್‌ಪಾಲ್‌ ಕಾವಲಾಗಿ ನಿಂತಿದ್ದರು. ಕೊನೆಗೆ ಆಶ್ರಮಕ್ಕಿದ್ದ ನೀರು ಪೂರೈಕೆ ಮತ್ತು ವಿದ್ಯುತ್‌ ಪೂರೈಕೆಯನ್ನು ಪೊಲೀಸರು ನಿಲ್ಲಿಸಿ ಜನರು ಹೊರ ಬರುವಂತೆ ಮಾಡಿದ್ದರು. ಆಗಲೂ ಸುಲಭವಾಗಿ ಹೊರ ಬರದೆ ಅಲ್ಲಿದ್ದ 5,700 ಪೊಲೀಸರ ಜತೆ ರಂಪ ರಾಮಾಯಣ ನಡೆಸಿದ್ದರಿಂದ ಆರು ಜನರು ಅಸುನೀಗಿದ್ದರು. ಇವರಲ್ಲಿ ಐವರು ಮಹಿಳೆಯರಾದರೆ ಇನ್ನೊಂದು ಮಗುವಾಗಿತ್ತು. ಅಂತಿಮವಾಗಿ ನವೆಂಬರ್ 19, 2014ರಲ್ಲಿ ರಾಮ್‌ಪಾಲ್‌ರನ್ನು ಬಂಧಿಸಲಾಗಿತ್ತು. ಈ ಇಡೀ ಕಾರ್ಯಾಚರಣೆಗೆ 26 ಕೋಟಿ ರೂಪಾಯಿ ಖರ್ಚಾಗಿತ್ತು.

6 ಜನರು ಸಾವನ್ನಪ್ಪಿದ ಈ ಪ್ರಕರಣದಲ್ಲಿ ಸಂತ ರಾಮ್‌ಪಾಲ್‌ ಮತ್ತು 22 ಜನರು ದೋಷಿಗಳು ಎಂದು ನ್ಯಾಯಾಲಯ ಅಕ್ಟೋಬರ್‌ 11ರಂದು ತೀರ್ಪು ನೀಡಿತ್ತು. ಇದೀಗ ಇದರಲ್ಲೇ ಒಂದು ಪ್ರಕರಣದ ತೀರ್ಪು ಹೊರ ಬಿದ್ದಿದ್ದು ಸ್ವಘೋಷಿತ ದೇವಮಾನವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.