samachara
www.samachara.com
ವಂಚನೆ ಆರೋಪ: ಹೀರಾ ಗೋಲ್ಡ್‌ನ ‘ಬೂಬಮ್ಮ’ ಬಂಧನ
ಸುದ್ದಿ ಸಾರ

ವಂಚನೆ ಆರೋಪ: ಹೀರಾ ಗೋಲ್ಡ್‌ನ ‘ಬೂಬಮ್ಮ’ ಬಂಧನ

ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ನೀಡುವುದಾಗಿ ದೇಶದಾದ್ಯಂತ ಹಣ ಸಂಗ್ರಹಿಸಿದ ಆರೋಪವೂ ಅವರ ಮೇಲಿತ್ತು. ಹೀರಾ ಗೋಲ್ಡ್ ಕಂಪನಿಯಿಂದ ಮೋಸಕ್ಕೊಳಗಾದವರು ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.

ವಂಚನೆ ಪ್ರಕರಣದ ಆರೋಪದಲ್ಲಿ ಆಲ್ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ (ಎಂಇಪಿ) ಪಕ್ಷದ ಮುಖ್ಯಸ್ಥೆ ನೌಹೀರಾ ಶೇಖ್ ತೆಲಂಗಾಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

ಕರ್ನಾಟಕದ ಜನರಿಗೆ ಕಳೆದ ಚುನಾವಣೆ ಸಮಯದಲ್ಲಿ ಪರಿಚಯವಾದ ನೌಹೀರಾ, ಹೀರಾ ಗೋಲ್ಡ್ ಎಂಬ ಉದ್ಯಮದ ಒಡತಿ. ಎಂಇಪಿ ಹೆಸರಿನಲ್ಲಿ ಪಕ್ಷವೊಂದನ್ನು ಸ್ಥಾಪಿಸಿದ್ದ ಅವರು, ಚುನಾವಣೆ ವೇಳೆಯಲ್ಲಿ ಕರ್ನಾಟಕದ 222 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಫಲಿತಾಂಶ ಬಂದಾಗ ಸುಮಾರು 85 ಸಾವಿರ ಮತಗಳನ್ನು ಪಕ್ಷದ ಅಭ್ಯರ್ಥಿಗಳು ಪಡೆದುಕೊಂಡಿದ್ದರು.

ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ನೀಡುವುದಾಗಿ ದೇಶದಾದ್ಯಂತ ಹಣ ಸಂಗ್ರಹಿಸಿದ ಆರೋಪವೂ ಅವರ ಮೇಲಿತ್ತು. ಹೀರಾ ಗೋಲ್ಡ್ ಕಂಪನಿಯಿಂದ ಮೋಸಕ್ಕೊಳಗಾದವರು ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಅಂದಹಾಗೆ, ತೆಲಂಗಾಣ ಚುನಾವಣೆಗೆ ಸಜ್ಜಾಗುತ್ತಿದ್ದು, ಎಂಇಪಿ ಕಣಕ್ಕಿಳಿಯವು ಸಾಧ್ಯತೆಗಳಿದ್ದವು. ಹಾಗೇನಾದರೂ ಆದರೆ, ಆಡಳಿತರೂಢ ಟಿಆರ್‌ಎಸ್‌ಗೆ ಸಮಸ್ಯೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೌಹೀರಾ ಬಂಧನ ರಾಜಕೀಯ ದಾಳವೂ ಆಗಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಯಾರು ಈ ನೌಹೀರಾ?:

ನೌಹೀರಾ ಶೇಖ್‌ ಮೂಲತಃ ಆಂಧ್ರ ಪ್ರದೇಶದ ತಿರುಪತಿಯವರು. 1973ರಲ್ಲಿ ಶೇಖ್‌ ಮೋಹಿಯುದ್ದೀನ್‌ ಸಾಹೇಬ್‌ ಕೋಲ್ಕರ್‌ ಮತ್ತು ಶೇಖ್‌ ಬಾಲ್ಕಿಜ್‌ ದಂಪತಿಗೆ ಜನಿಸಿದ ನೌಹೀರಾ, ಸಣ್ಣ ವಯಸ್ಸಿನಲ್ಲೇ ತಂದೆ ನಡೆಸುತ್ತಿದ್ದ ಉದ್ಯಮಗಳಲ್ಲಿ ತೊಡಗಿಕೊಂಡರು. ಇಸ್ಲಾಂ ಧರ್ಮದ ಬಗ್ಗೆ ಆಸಕ್ತಿ ಹೊಂದಿದ್ದ ನೌಹೀರಾ, ಧರ್ಮದ ಬಗ್ಗೆ ಹೆಚ್ಚು ಸಂಶೋಧನೆಗಳನ್ನು ಮಾಡಿದರು. ನಂತರ ಇಸ್ಲಾಂ ವೈಜ್ಞಾನಿಕ ಸಂಶೋಧನೆಯಲ್ಲಿ ಪದವೀಧರೆಯಾದರು. ಜತೆಗೆ ಇಸ್ಲಾಂ ಕುರಿತಾಗಿ ಮಹಿಳೆಯರಿಗೆ ಪ್ರವಚನವನ್ನೂ ನೌಹೀರಾ ನೀಡುತ್ತಿದ್ದರು, ಎನ್ನುತ್ತದೆ ಅವರದ್ದೇ ಎಂಇಪಿ ಪಕ್ಷದ ವೆಬ್‌ಸೈಟ್‌. ಕೊಲಂಬೋ ಅಂತರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್‌ ನೌಹೀರಾಗೆ ಲಭಿಸಿದೆ ಎಂಬ ಮಾಹಿತಿಯೂ ಇದೆ. ಹೆಚ್ಚಿನ ಮಾಹಿತಿ ‘ಸಮಾಚಾರ’ದ ಕೆಳಗಿನ ವರದಿಯಲ್ಲಿದೆ.

Also read: ‘ಉದ್ಯಮ, ಹವಾಲಾ, ಮಹಿಳಾ ಸಬಲೀಕರಣ’: ರಾಜಕೀಯ ಅಖಾಡದ ಹೊಸ ಮುಖ ನೌಹೀರಾ ಶೇಖ್‌

ಕರ್ನಾಟಕ ಚುನಾವಣೆ ಅಖಾಡಕ್ಕೆ ಇಳಿದ ನೌಹೀರಾ, ಸ್ವರಾಜ್ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಸುದ್ದಿವಾಹಿನಿಯೊಂದನ್ನು ಆರಂಭಿಸಿದ್ದರು. ಆದರೆ ವಾಹಿನಿ ಚುನಾವಣೆ ಮುಗಿದು ಹೊಸ ಸರಕಾರ ಸ್ಥಾಪನೆಯಾಗುತ್ತಲೇ ಬಾಗಿಲು ಮುಚ್ಚಿಕೊಂಡಿತ್ತು.

Also read: ಬಾಗಿಲು ಮುಚ್ಚಿದ ಬೂಬಮ್ಮನ ‘ಸ್ವರಾಜ್ ಎಕ್ಸ್‌ಪ್ರೆಸ್’; ಆಡುಗೋಡಿಯಲ್ಲಿ ದೂರು ದಾಖಲು