‘ಶಬರಿಮಲೆಗೆ ಪ್ರವೇಶ ಬೇಡ’; ಅಯ್ಯಪ್ಪನ ಕೈಯ್ಯಲ್ಲಿ ಹಿಡಿದು ಘೋಷಣೆ ಕೂಗುತ್ತಿರುವ ಮಹಿಳೆಯರು!
ಸುದ್ದಿ ಸಾರ

‘ಶಬರಿಮಲೆಗೆ ಪ್ರವೇಶ ಬೇಡ’; ಅಯ್ಯಪ್ಪನ ಕೈಯ್ಯಲ್ಲಿ ಹಿಡಿದು ಘೋಷಣೆ ಕೂಗುತ್ತಿರುವ ಮಹಿಳೆಯರು!

ಕೇರಳದಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಮಹಿಳೆಯರ ಕೈಗೆ ಅಯ್ಯಪ್ಪನ ಫೋಟೊಗಳನ್ನು ಕೊಟ್ಟು ಅವರಿಂದಲೇ ‘ಶಬರಿಮಲೆಗೆ ಪ್ರವೇಶ ಬೇಡ’ ಎಂಬ ಘೋಷಣೆಗಳನ್ನು ಕೂಗಿಸುತ್ತಿವೆ.

‘ಶಬರಿಮಲೆ ಉಳಿಸಿ’ ಎಂಬ ಘೋಷಣೆಯೊಂದಿಗೆ ತಿರುವನಂತಪುರದಲ್ಲಿ ಸೋಮವಾರ ದೊಡ್ಡಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಮಹಿಳೆಯರು ಕೈಯಲ್ಲಿ ಅಯ್ಯಪ್ಪನ ಫೋಟೊ ಹಿಡಿದುಕೊಂಡೇ ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶ ಬೇಡ ಎಂದು ಒತ್ತಾಯಿಸುತ್ತಿದ್ದಾರೆ!

ಮಂಗಳವಾರ ಸಂಜೆ ವೇಳೆಗೆ ಶಬರಿಮಲೆ ಅಯ್ಯಪ್ಪ ದೇಗುಲದ ಬೀಗ ತೆರೆಯಲಿದೆ. ಬುಧವಾರ ಬೆಳಿಗ್ಗೆಯಿಂದ ದರ್ಶನ ಆರಂಭವಾಗಲಿದೆ. ದೇಗುಲ ತೆರೆಯುವುದಕ್ಕೂ ಒಂದು ದಿನ ಮುಂಚೆ ಕೇರಳದ ರಾಜಧಾನಿ ತಿರುವನಂತಪುರಲ್ಲಿ ಪ್ರತಿಭಟನೆ ಸಂಘಟಿಸಿರುವ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಮಹಿಳೆಯರ ಕೈಗೆ ಅಯ್ಯಪ್ಪನ ಫೋಟೊಗಳನ್ನು ಕೊಟ್ಟು ಅವರಿಂದ ‘ಶಬರಿಮಲೆ ಪ್ರವೇಶ ಮಹಿಳೆಯರಿಗೆ ಬೇಡ’ ಎಂಬ ಘೋಷಣೆಗಳನ್ನು ಕೂಗಿಸುತ್ತಿವೆ.

ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೂ ಅವಕಾಶ ನೀಡಬೇಕೆಂದು ಸುಪ್ರೀಂಕೋರ್ಟ್‌ ನೀಡಿದ್ದ ಆದೇಶದ ವಿರುದ್ಧ ಮಹಿಳೆಯರನ್ನೇ ಮುಂದಿಟ್ಟುಕೊಂಡು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಾ ಬಂದಿದೆ.

Also read: ಮಹಿಳೆಯರ ಹಣಿಯಲು ಮಹಿಳೆಯರೇ ಗುರಾಣಿ; ಸುಪ್ರೀಂ ತೀರ್ಪಿನ ವಿರುದ್ಧ ಬೀದಿಗಿಳಿದವರು ಯಾರು?

ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿವೆ. ಆದರೆ, ರಾಜ್ಯ ಸರಕಾರ ಸುಪ್ರೀಂಕೋರ್ಟ್‌ ಆದೇಶದ ಬಗ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ನ್ಯಾಯಾಲಯದ ಆದೇಶವನ್ನು ಸರಕಾರ ಅನುಷ್ಠಾನಕ್ಕೆ ತರಲಿದೆ ಎಂದಿದ್ದಾರೆ.

ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿರುವ ಅಯ್ಯಪ್ಪ ದೇಗುಲದ ಉಸ್ತುವಾರಿ ಪಂದಳಂ ರಾಜವಂಶಸ್ಥರು, ಎಲ್ಲಾ ವಯೋಮಾನದ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಅವಕಾಶ ನೀಡುವುದು ಸರಿಯಲ್ಲ ಎಂದಿದ್ದಾರೆ.

ಮುಂದಿನ ಮೂರು ತಿಂಗಳ ಕಾಲ ನಡೆಯುವ ಶಬರಿಮಲೆ ಯಾತ್ರೆಯ ಸಿದ್ಧತೆಗಳ ಬಗ್ಗೆ ಟ್ರವಾಂಕೋರ್‌ ದೇವಸ್ವಂ ಮಂಡಳಿ ನಾಳೆ ಸಭೆ ಕಡೆದಿದೆ. ಈ ಸಭೆಯಲ್ಲಿ ದೇಗುಲದ ಪ್ರಧಾನ ತಂತ್ರಿ ಹಾಗೂ ಪಂದಳಂ ರಾಜವಂಶಸ್ಥರು ಭಾಗವಹಿಸುವುದು ಖಚಿತವಾಗಿದೆ.

ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ, ಯಾವುದೇ ವಿಶೇಷ ಭದ್ರತೆಯನ್ನು ಒದಗಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.