ಅತ್ಯಾಚಾರ ಆರೋಪಿ ಬಿಷಪ್‌ ಮುಳಕ್ಕಲ್‌ಗೆ ಜಾಮೀನು, ಕೇರಳ ಪ್ರವೇಶಕ್ಕೆ ನಿರ್ಬಂಧ
ಸುದ್ದಿ ಸಾರ

ಅತ್ಯಾಚಾರ ಆರೋಪಿ ಬಿಷಪ್‌ ಮುಳಕ್ಕಲ್‌ಗೆ ಜಾಮೀನು, ಕೇರಳ ಪ್ರವೇಶಕ್ಕೆ ನಿರ್ಬಂಧ

ಪಾಸ್‌ಪೋರ್ಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಮತ್ತು ಎಸ್‌ಐಟಿ ಅಧಿಕಾರಿಯ ಮುಂದೆ ಹಾಜರಾಗಲು ಮಾತ್ರ ಕೇರಳವನ್ನು ಪ್ರವೇಶಿಸಬೇಕು ಎಂಬ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಲಾಗಿದೆ.

ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಕೇರಳ ಮೂಲದ ಹಿರಿಯ ಕ್ಯಾಥೋಲಿಕ್‌ ಧರ್ಮಗುರು ಫ್ರಾಂಕೋ ಮುಳಕ್ಕಲ್‌ಗೆ ಕೇರಳ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಮೂರು ವಾರಗಳ ಹಿಂದೆ ಹಲವು ಸುತ್ತಿನ ಹೈಡ್ರಾಮಗಳ ನಂತರ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧನದ ನಂತರ ಜಾಮೀನು ಕೋರಿ ಮುಳಕ್ಕಲ್‌ ಮೂರು ವಾರಗಳ ಹಿಂದೆಯೇ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಕೆಳ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಅವರು ಹೈಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮೊದಲು ಜಾಮೀನು ನೀಡಲು ನಿರಾಕರಿಸಿದ್ದ ನ್ಯಾಯಾಲಯ ಇದೀಗ 54 ವರ್ಷದ ಮುಳಕ್ಕಲ್‌ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪಾಸ್‌ಪೋರ್ಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಮತ್ತು ಎಸ್‌ಐಟಿ ಅಧಿಕಾರಿಯ ಮುಂದೆ ಹಾಜರಾಗಲು ಮಾತ್ರ ಕೇರಳವನ್ನು ಪ್ರವೇಶಿಸಬೇಕು. ಅದೂ ಎರಡು ವಾರಗಳಲ್ಲಿ ಒಂದು ಶನಿವಾರ ಮಾತ್ರ ಕೇರಳಕ್ಕೆ ಹೋಗಬಹುದು ಎಂದು ಅವರಿಗೆ ಷರತ್ತು ಹಾಕಲಾಗಿದೆ. ಚಾರ್ಜ್‌ಶೀಟ್‌ ಸಲ್ಲಿಕೆಯಾಗುವವರೆಗೂ ಈ ನಿರ್ಬಂಧಗಳು ಅನ್ವಯಿಸುತ್ತವೆ ಎಂದು ನ್ಯಾಯಾಲಯ ತಿಳಿಸಿದೆ.

ಜೂನ್‌ನಲ್ಲಿ ಬಿಷಪ್‌ ಫ್ರಾಂಕೋ ಮುಳಕ್ಕಲ್‌ ವಿರುದ್ಧ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರದ ಆರೋಪ ಮಾಡಿದ್ದರು. ಜೂನ್‌ನಲ್ಲಿ ದೂರು ಸಲ್ಲಿಸಿದ್ದ ಆಕೆ 2014 ರಿಂದ 2016ರ ಅವಧಿಯಲ್ಲಿ ಮುಳಕ್ಕಲ್‌ 13 ಬಾರಿ ಅತ್ಯಾಚಾರ ಎಸಗಿದ್ದರು ಎಂದು ದೂರಿದ್ದರು. ನಂತರ ಬಿಷಪ್‌ರನ್ನು ಸತತ ಮೂರು ದಿನಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅವರನ್ನು ಬಂಧಿಸುವಂತೆ ಪ್ರತಿಭಟನೆಗಳು ನಡೆದಿದ್ದವು. ಕೊನೆಗೆ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.

ಕೇರಳ ಸರ್ಕಾರ ಬಿಷಪ್‌ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ನೇಮಿಸಿದ್ದು, ‘ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ’ ಎಂದು ಸರಕಾರ ಭರವಸೆ ನೀಡಿದೆ.

ಸದ್ಯ ಜಲಂಧರ್‌ ಪ್ರಾಂತ್ಯದಲ್ಲಿ ಬಿಷಪ್‌ ಆಗಿರುವ ಮುಳಕ್ಕಲ್‌ ಅವರನ್ನು ಕ್ಯಾಥೋಲಿಕ್‌ ಚರ್ಚ್‌ನ ಜವಾಬ್ದಾರಿಗಳಿಂದ ವ್ಯಾಟಿಕನ್‌ ಮುಕ್ತಗೊಳಿಸಿದೆ.