ಉತ್ತರ ಪ್ರದೇಶದ ಕೇಸರೀಕರಣಕ್ಕೆ ಹೊಸ ಸೇರ್ಪಡೆ; ಅಲಹಾಬಾದ್‌ ಇನ್ನು ‘ಪ್ರಯಾಗ್‌ರಾಜ್’
ಸುದ್ದಿ ಸಾರ

ಉತ್ತರ ಪ್ರದೇಶದ ಕೇಸರೀಕರಣಕ್ಕೆ ಹೊಸ ಸೇರ್ಪಡೆ; ಅಲಹಾಬಾದ್‌ ಇನ್ನು ‘ಪ್ರಯಾಗ್‌ರಾಜ್’

ಕುಂಭಮೇಳಕ್ಕೂ ಮುನ್ನವೇ ಅಲಹಾಬಾದ್‌ ಹೆಸರನ್ನು ಪ್ರಯಾಗ್‌ರಾಜ್‌ ಎಂದು ಬದಲಿಸಲು ಆದಿತ್ಯನಾಥ್‌ ಉತ್ಸುಕತೆ ತೋರಿದ್ದಾರೆ.

ಉತ್ತರ ಪ್ರದೇಶದ ಅಲಹಾಬಾದ್‌ ಹೆಸರು ಇನ್ನು ಮುಂದೆ ‘ಪ್ರಯಾಗ್‌ರಾಜ್‌’ ಎಂದು ಬದಲಾಗಲಿದೆ. ಇಂಥದ್ದೊಂದು ನಿರ್ಧಾರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮುಂದಾಗಿದ್ದಾರೆ.

“ಅಲಹಾಬಾದ್‌ ಹೆಸರನ್ನು ಪ್ರಯಾಗ್‌ರಾಜ್‌ ಎಂದು ಬದಲಿಸಬೇಕೆಂಬುದು ಹಲವರ ಬಯಕೆಯಾಗಿದೆ. ಹೆಸರಿನ ಬದಲಾವಣೆಯು ಉತ್ತಮ ಸಂದೇಶ ರವಾನಿಸುತ್ತದೆ” ಎಂದು ಆಗಿತ್ಯನಾಥ್‌ ಹೇಳಿದ್ದಾರೆ. ಹೆಸರಿನ ಬದಲಾವಣೆಯು ಯಾರಿಗೆ, ಯಾವ ರೀತಿ ಉತ್ತಮ ಸಂದೇಶವನ್ನು ರವಾನಿಸುತ್ತದೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ಕುಂಭಮೇಳಕ್ಕೂ ಮುನ್ನವೇ ಅಲಹಾಬಾದ್‌ ಹೆಸರನ್ನು ಪ್ರಯಾಗ್‌ರಾಜ್‌ ಎಂದು ಬದಲಿಸಲು ಆದಿತ್ಯನಾಥ್‌ ಉತ್ಸುಕತೆ ತೋರಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು ಮೂರು ತಿಂಗಳೊಳಗೆ ಅಲಹಾಬಾದ್ ಹೆಸರು ಬದಲಾಗಲಿದೆ.

ಅಲಹಾಬಾದ್‌ ಹೆಸರು ಬದಲಾವಣೆಯ ಬಗ್ಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಐತಿಹಾಸಿಕ ದಾಖಲೆಯಾಗಿರುವ ಅಲಹಾಬಾದ್‌ನ ಹೆಸರು ಬದಲಿಸುವುದು ಸರಿಯಲ್ಲ. ಅಲಹಾಬಾದ್‌ನ ಹೆಸರು ಬದಲಿಸುವುದಕ್ಕಿಂತ ಪ್ರಯಾಗ್‌ರಾಜ್‌ ಹೆಸರಿನ ಹೊಸ ನಗರವನ್ನು ನಿರ್ಮಿಸುವುದು ಉತ್ತಮ” ಎಂದು ಕಾಂಗ್ರೆಸ್‌ ಮುಖಂಡ ಓಂಕಾರ್‌ ಸಿಂಗ್‌ ಹೇಳಿದ್ದಾರೆ.

ಉತ್ತರ ಪ್ರದೇಶದ ಐತಿಹಾಸಿಕ ನಗರವಾದ ಅಲಹಾಬಾದ್‌ನ ಪೌರಾಣಿಕ ಹೆಸರು ಪ್ರಯಾಗ. 1575ರಲ್ಲಿ ಅಕ್ಬರ್‌ ಈ ನಗರಕ್ಕೆ ‘ಇಲಹಾಬಾದ್‌’ (ದೇವರ ನಿವಾಸ) ಎಂಬ ಹೆಸರಿಟ್ಟ ಎನ್ನುತ್ತದೆ ಇತಿಹಾಸ. ಅಲಹಾಬಾದ್‌ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮವಾಗುತ್ತವೆ.