#Me Too ತಲೆದಂಡ; ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ರಾಜೀನಾಮೆ?
ಸುದ್ದಿ ಸಾರ

#Me Too ತಲೆದಂಡ; ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ರಾಜೀನಾಮೆ?

ಮುಂಬರಲಿರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳ ಮೇಲೆ ಲೈಂಗಿಕ ಕಿರುಕುಳದ ಆರೋಪ ಪ್ರಭಾವ ಬೀರಬಹುದೆಂಬ ಕಾರಣಕ್ಕೆ ಮೋದಿ, ಅಕ್ಬರ್‌ ಅವರ ರಾಜೀನಾಮೆ ಕೇಳಿದ್ದಾರೆ ಎನ್ನಲಾಗಿದೆ.

Me Too ಅಭಿಯಾನ ಭಾರತದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು, ಈ ಅಭಿಯಾನದ ಪರಿಣಾಮವಾಗಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ರಾಜೀನಾಮೆ ನೀಡಿದ್ದಾರೆ ಎಂದು ಕೆಲ ಸುದ್ದಿವಾಹಿನಿಗಳು ವರದಿ ಮಾಡಿವೆ. ಆದರೆ, ಸರಕಾರದ ಮೂಲಗಳು ಇನ್ನೂ ಅಕ್ಬರ್‌ ರಾಜೀನಾಮೆಯನ್ನು ಖಚಿತಪಡಿಸಿಲ್ಲ.

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಎಂ.ಜೆ. ಅಕ್ಬರ್ ನೈಜೀರಿಯಾ ಪ್ರವಾಸದಲ್ಲಿದ್ದರು. ಭಾನುವಾರ ಪ್ರವಾಸದಿಂದ ಹಿಂದಿರುಗಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಲು ನಿರಾಕರಿಸಿದ್ದರು. ತಮ್ಮ ಮೇಲಿನ ಆರೋಪದ ವಿಚಾರವಾಗಿ ಮುಂದೆ ಹೇಳಿಕೆ ಕೊಡುತ್ತೇನೆ ಎಂದಷ್ಟೇ ಅಕ್ಬರ್‌ ಹೇಳಿದ್ದರು.

ಭಾರತಕ್ಕೆ ಹಿಂದಿರುಗಿದ ಬೆನ್ನಲ್ಲೇ ಅಕ್ಬರ್‌ ಪ್ರಧಾನ ಮಂತ್ರಿಯವರ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರಿಗೆ ಅಕ್ಬರ್‌ ರಾಜೀನಾಮೆ ಪತ್ರ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ರಾಜೀನಾಮೆ ಪತ್ರ ಕಳಿಸಿರುವ ಜತೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಭೇಟಿಗೆ ಸಮಯ ಕೋರಿದ್ದಾರೆ ಎಂದು 'ನ್ಯೂಸ್18' ಸುದ್ದಿ ವಾಹಿನಿ ವರದಿ ಮಾಡಿದೆ.

Also read: #MeToo: ಸೆಲೆಬ್ರಿಟಿಗಳು ಮಾತ್ರವಲ್ಲ, ಸಾಮಾನ್ಯ ಮಹಿಳೆಯರ ನೋವಿಗೂ ದನಿಯಾಗಬೇಕು...

ಆದರೆ, ಅಕ್ಬರ್‌ ಅವರು ರಾಜೀನಾಮೆ ನೀಡಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿರುವುದಾಗಿ 'ಟೈಮ್ಸ್ ನೌ' ಸುದ್ದಿ ವಾಹಿನಿ ವರದಿ ಮಾಡಿದೆ. ಹೀಗಾಗಿ ಅಕ್ಬರ್‌ ರಾಜೀನಾಮೆ ವಿಚಾರ ಇನ್ನೂ ಖಚಿತವಾಗಿಲ್ಲ. ಭಾರತದಲ್ಲಿ #Me Too ಅಭಿಯಾನ ದೊಡ್ಡದಾದ ಬೆನ್ನಲ್ಲೇ ಎಂ.ಜೆ. ಅಕ್ಬರ್ ವಿರುದ್ಧ ಹಲವು ಪತ್ರಕರ್ತೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅಕ್ಬರ್‌ ವಿರುದ್ಧ ಆರೋಪ ಹೆಚ್ಚಾದ ಬಳಿಕ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು.

ಭಾನುವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಪತ್ರಕರ್ತೆಯರು ಅಕ್ಬರ್‌ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದರು. ಪ್ರತಿಭಟನೆ ಹಾಗೂ ರಾಜೀನಾಮೆಗಾಗಿ ಒತ್ತಡ ಹೆಚ್ಚಾಗಿದ್ದು ಈ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಕ್ಬರ್‌ ಅವರಿಂದ ವಿವರ ಪಡೆಯುವ ಸಾಧ್ಯತೆ ಇದೆ. ಮುಂಬರಲಿರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳ ಮೇಲೆ ಈ ಲೈಂಗಿಕ ಕಿರುಕುಳದ ಆರೋಪ ಪ್ರಭಾವ ಬೀರಬಹುದೆಂಬ ಕಾರಣಕ್ಕೆ ಮೋದಿ ಅಕ್ಬರ್‌ ಅವರಿಂದ ರಾಜೀನಾಮೆ ಕೇಳಿದ್ದಾರೆ ಎನ್ನಲಾಗಿದೆ.

Also read: #MeToo: ಮೇಕಪ್ ರೂಮಿನ ಮುಂದೆ ತುಟಿ ಕಚ್ಚಲಾ ಅಂದ ಮಳ್ಳ ‘ಅನುಭವಿ ಪತ್ರಕರ್ತ’ನಾಗಿದ್ದ!