ರಫೇಲ್‌ ತಯಾರಿಸುವ ಸಾಮರ್ಥ್ಯ ಎಚ್‌ಎಎಲ್‌ಗೆ ಇಲ್ಲವಾದರೆ ಮತ್ಯಾರಿಗಿದೆ?: ರಾಹುಲ್ ಗಾಂಧಿ ಪ್ರಶ್ನೆ
ಸುದ್ದಿ ಸಾರ

ರಫೇಲ್‌ ತಯಾರಿಸುವ ಸಾಮರ್ಥ್ಯ ಎಚ್‌ಎಎಲ್‌ಗೆ ಇಲ್ಲವಾದರೆ ಮತ್ಯಾರಿಗಿದೆ?: ರಾಹುಲ್ ಗಾಂಧಿ ಪ್ರಶ್ನೆ

“ಎಚ್ಎಎಲ್‌ ಸಾಮರ್ಥ್ಯದ ಬಗ್ಗೆ ಮಾತನಾಡುವ ರಕ್ಷಣಾ ಸಚಿವೆ ಅಂಬಾನಿ ಕಂಪನಿಯ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿಲ್ಲ....”

“ರಕ್ಷಣಾ ಸಚಿವರು ಎಚ್‌ಎಎಲ್‌ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಯುದ್ಧ ವಿಮಾನಗಳ ತಯಾರಿಕೆಯಲ್ಲಿ 70 ವರ್ಷಗಳ ಅನುಭವಿರುವ ಎಚ್‌ಎಎಲ್‌ ಯಾವುದೇ ಸಾಲದ ಸುಳಿಯಲ್ಲಿಲ್ಲ. ಆದರೆ, 45 ಸಾವಿರ ಕೋಟಿ ಸಾಲವಿರುವ ಹಾಗೂ ಯುದ್ಧ ವಿಮಾನ ತಯಾರಿಕೆಯಲ್ಲಿ ಅನುಭವವೇ ಇಲ್ಲದಿರುವ ಅನಿಲ್‌ ಅಂಬಾನಿ ಕಂಪನಿಗೆ ರಫೇಲ್‌ನ ಗುತ್ತಿಗೆ ಕೊಟ್ಟಿರುವುದು ಏಕೆ? ಎಚ್‌ಎಎಲ್‌ಗೆ ರಫೇಲ್‌ ತಯಾರಿಸುವ ಸಾಮರ್ಥ್ಯ ಇಲ್ಲವಾದರೆ ಮತ್ಯಾರಿಗಿದೆ?” ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಮಿನ್ಸ್ಕ್‌ ವೃತ್ತದಲ್ಲಿ ನಡೆದ ಎಚ್‌ಎಎಲ್‌ ಸಿಬ್ಬಂದಿಯೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, “ರಫೇಲ್‌ ಡೀಲ್‌ ಹಾಗೂ ಎಚ್‌ಎಎಲ್‌ ವಿಚಾರದಲ್ಲಿ ರಕ್ಷಣಾ ಸಚಿವರು ಸುಳ್ಳು ಹೇಳುತ್ತಿದ್ದಾರೆ. ರಫೇಲ್‌ ಒಪ್ಪಂದದ ಭಾಗವಾಗಿ ನರೇಂದ್ರ ಮೋದಿ ಸರಕಾರ 30 ಸಾವಿರ ಕೋಟಿ ರೂಪಾಯಿಯನ್ನು ಅನಿಲ್‌ ಅಂಬಾನಿ ಕಂಪನಿಗೆ ಕೊಟ್ಟಿದೆ. ಎಚ್ಎಎಲ್‌ ಸಾಮರ್ಥ್ಯದ ಬಗ್ಗೆ ಮಾತನಾಡುವ ರಕ್ಷಣಾ ಸಚಿವೆ ಅಂಬಾನಿ ಕಂಪನಿಯ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿಲ್ಲ” ಎಂದರು.

“ಸಾರ್ವಜನಿಕ ಉದ್ದಿಮೆಯನ್ನು ಆಧುನಿಕ ಭಾರತದ ದೇವಾಲಯಗಳು ಎನ್ನಲಾಗುತ್ತಿದೆ. ಈ ದೇವಾಲಯಗಳನ್ನು ಕೆಡವುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಆದರೆ, ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಸರಕಾರದ ನಡೆಯಿಂದ ಎಚ್‌ಎಎಲ್‌ ಸಿಬ್ಬಂದಿಗೆ ನೋವಾಗಿದೆ. ಎಚ್‌ಎಎಲ್‌ ಸಿಬ್ಬಂದಿಯ ನೋವಿನ ಜತೆಗೆ ನಾನಿದ್ದೇನೆ” ಎಂದು ಹೇಳಿದರು.

“ಸಾರ್ವಜನಿಕ ಉದ್ದಿಮೆ ದೇಶದ ಬೆನ್ನೆಲುಬು, ದೇಶದ ಸೇನೆಯ ಹಾಗೂ ರಕ್ಷಣಾ ವಲಯದ ಬೆನ್ನೆಲುಬು. ರಫೇಲ್‌ ನಿರ್ಮಿಸಲು ಸಾಮರ್ಥ್ಯವಿರುವ ದೇಶದ ಏಕೈಕ ಕಂಪನಿ ಎಚ್‌ಎಎಲ್‌ ಮಾತ್ರ. ಆದರೆ, ಎಚ್‌ಎಎಲ್‌ ಸಿಬ್ಬಂದಿಯ ಮಾತನ್ನು ಮಾಧ್ಯಮಗಳು ಕೇಳುತ್ತಿಲ್ಲ ಎನ್ನುತ್ತಿದ್ದೀರಿ. ಈಗ ಮಾಧ್ಯಮಗಳೂ ನಮ್ಮ ಮಾತನ್ನು ಕೇಳುತ್ತಿಲ್ಲ. ಇದು ದೇಶದ ವರ್ತಮಾನದ ಸ್ಥಿತಿ” ಎಂದರು.

ಸಂವಾದದಲ್ಲಿ ಮಾತನಾಡಿದ ಎಚ್‌ಎಎಲ್‌ ಎಸ್‌ಸಿ ಎಸ್‌ಟಿ ಉದ್ಯೋಗಿಗಳ ಸಂಘದ ಅಧ್ಯಕ್ಷ ಶಿವಲಿಂಗಯ್ಯ, “ಎಚ್‌ಎಎಲ್‌ನಲ್ಲಿ ಖಾಯಂ ಉದ್ಯೋಗ ವ್ಯವಸ್ಥೆ ಬಹುತೇಕ ನಿಂತಿದೆ. 4 ವರ್ಷದ ಗುತ್ತಿಗೆ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದಾರೆ. 4 ವರ್ಷ ಕಳೆದ ಮೇಲೆ ಕೆಲಸದಿಂದ ತೆಗೆದು ಹಾಕುತ್ತಾರೆ. ಖಾಯಂ ಉದ್ಯೋಗವಿಲ್ಲದೆ ಎಚ್‌ಎಎಲ್‌ ಅನ್ನು ಮುಗಿಸುವ ಹುನ್ನಾರ ನಡೆಯುತ್ತಿದೆ” ಎಂದು ಹೇಳಿದರು.

“ರಫೇಲ್‌ ಹಗರಣ ಕೇವಲ ಭ್ರಷ್ಟಾಚಾರದ ವಿಷಯ ಮಾತ್ರವಲ್ಲ, ಈ ಮೂಲಕ ಸಾರ್ವಜನಿಕ ಉದ್ದಿಮೆಯ ಬಲ ಕುಗ್ಗಿಸುವ ಕೆಲಸ ನಡೆಯುತ್ತಿದೆ” ಎಂದು ನಿವೃತ್ತ ನೌಕರ ಉಮೇಶ್ ಕಳವಳ ವ್ಯಕ್ತಪಡಿಸಿದರು.

“ಇಸ್ರೊ ಉಪಗ್ರಹ ಉಡಾವಣೆಯ ಲಾಂಚರ್, ಬೂಸ್ಟರ್‌ ಸೇರಿದಂತೆ ಹಲವು ಭಾಗಗಳನ್ನು ಒದಗಿಸುವುದು ಎಚ್‌ಎಎಲ್‌. ಆದರೆ, ಕೇಂದ್ರ ಸರಕಾರ ಎಚ್‌ಎಎಲ್‌ನ ಸಾಮರ್ಥ್ಯವನ್ನೇ ಅಪಮಾನಿಸುತ್ತಿದೆ” ಎಂದು ಮತ್ತೊಬ್ಬ ನಿವೃತ್ತ ನೌಕರ ಅನಂತ ಪದ್ಮನಾಭನ್ ಹೇಳಿದರು.

ಎಚ್‌ಎಎಲ್‌ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಆಡಳಿತ ಮಂಡಳಿ ಸುತ್ತೋಲೆ ಹೊರಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ, “ಈ ಕ್ರಮಕ್ಕಾಗಿ ಆಡಳಿತ ಮಂಡಳಿಯನ್ನು ದೂರುವುದರಲ್ಲಿ ಅರ್ಥವಿಲ್ಲ. ಆಡಳಿತ ಮಂಡಳಿಯ ಮೇಲೂ ಒತ್ತಡವಿದೆ. ಹೀಗಾಗಿ ಸುತ್ತೋಲೆ ಹೊರಡಿಸಿದ್ದಾರೆ. ಆದರೆ, ನೊಂದ ಸಿಬ್ಬಂದಿಯ ಜತೆಗೆ ನಾವಿದ್ದೇವೆ” ಎಂದರು.