samachara
www.samachara.com
ಪಬ್‌ಜಿ ಹೆಸರಿನಲ್ಲಿ ಭಾರತದಲ್ಲಿ ನಡೆಯಿತು ಮೊದಲ ಅಪರಾಧ; ಆನ್‌ಲೈನ್‌ ಗೇಮಿಂಗ್‌ ಲೋಕದ ಸುತ್ತ...
ಸುದ್ದಿ ಸಾರ

ಪಬ್‌ಜಿ ಹೆಸರಿನಲ್ಲಿ ಭಾರತದಲ್ಲಿ ನಡೆಯಿತು ಮೊದಲ ಅಪರಾಧ; ಆನ್‌ಲೈನ್‌ ಗೇಮಿಂಗ್‌ ಲೋಕದ ಸುತ್ತ...

ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ಆಟವಾಡಲು ಮೀಸಲಿಟ್ಟ. ಅದರಲ್ಲಿ ಆಟವಾಡಲು ತನ್ನ ಗೆಳೆಯರದೊಂದು ವಾಟ್ಸಾಪ್‌ ಸಂಘ ಕಟ್ಟಿಕೊಂಡ. ಅದರಲ್ಲಿ ಹುಡುಗ-ಹುಡುಗಿಯರು ಸೇರಿ 9-10 ಜನರಿದ್ದರು. 

Team Samachara

ಕೋಟ್ಯಾಂತರ ಜನರನ್ನು ತನ್ನ ಮಾಯಾ ಜಾಲದೊಳಕ್ಕೆ ಬೀಳಿಸಿಕೊಳ್ಳುತ್ತಿರುವ ಗೇಮಿಂಗ್‌ ಆಪ್‌ ಪಬ್‌ಜಿ ಹೆಸರಿನಲ್ಲಿ ಮೊದಲ ದುರಂತವೊಂದು ದೇಶದಲ್ಲಿ ನಡೆದು ಹೋಗಿದೆ. ದೆಹಲಿಯಲ್ಲಿ ಪಬ್‌ಜಿ ಆಟದ ಗೀಳಿಗೆ ಬಿದ್ದ ಯುವಕನೊಬ್ಬ ಕುಟುಂಬದವರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದು ವರದಿಯಾಗಿದೆ.

ಕೇಳಲು ವಿಚಿತ್ರ ಅಂತ ಅನ್ನಿಸುವ ಈ ಸುದ್ದಿ ಮೊದಲು ವರದಿಯಾಗಿದ್ದು ಒಂದೇ ಕುಟುಂಬದ ಮೂವರ ಕೊಲೆ ಪ್ರಕರಣವಾಗಿ. ತನಿಖೆ ಕೈಗೊಂಡ ಪೊಲೀಸರಿಗೆ ಅದೇ ಕುಟುಂಬದ 19 ವರ್ಷದ ಯುವಕನ ಮೇಲೆ ಅನುಮಾನ ಮೂಡಿತು. ವಿಚಾರಣೆ ವೇಳೆ ಆತ ಅನ್‌ಲೈನ್‌ನಲ್ಲಿ ಸದ್ಯ ಭಾರಿ ಬೇಡಿಕೆಯಲ್ಲಿರುವ ಪಬ್ಜ್‌ ಗೇಮ್‌ಗಾಗಿ ಕೊಲೆ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಗಳು ಹೇಳುತ್ತಿವೆ.

ಏನಿದು ಪ್ರಕರಣ?:

ದೆಹಲಿಯ ವಸಂತ್‌ಗಂಜ್‌ ಪ್ರದೇಶದಲ್ಲಿ ಅಕ್ಟೋಬರ್‌ 10ರಂದು ಬುಧವಾರ ಒಂದೇ ಕುಟುಂಬದ ಮೂವರ ಕೊಲೆ ನಡೆದಿತ್ತು. ನೋಡಲು ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ದರೋಡೆ ನಡೆದಂತೆ ಭಾಸವಾಗುತ್ತಿತ್ತು. ಅದೇ ದಿನ ಸಂಜೆ ಕುಟುಂಬದಲ್ಲಿ ಉಳಿದಿದ್ದ ಏಕೈಕ ವ್ಯಕ್ತಿ 19 ವರ್ಷದ ಸೂರಜ್‌ ಅಲಿಯಾಸ್‌ ಸರ್ನಮ್‌ ವರ್ಮಾನನ್ನು ಪೊಲೀಸರು ಬಂಧಿಸಿದರು.

“ಸೂರಜ್‌ನಲ್ಲಿ ಕೊಲೆಯ ಯಾವ ಕುರುಹುಗಳಾಗಲೀ, ನಡವಳಿಕೆಗಳಾಗಲಿ ಇರಲಿಲ್ಲ. ಆರಂಭದಲ್ಲಿ ಆತನನ್ನು ಒಳ್ಳೆ ಹುಡುಗ ಎಂದೇ ಕುಟುಂಬದವರೂ ಹೇಳಿದರು,” ಎನ್ನುತ್ತಾರೆ ಪೊಲೀಸರು. ಆದರೆ ಅಕ್ಕ ಪಕ್ಕದ ಮನೆಯವರು ಮಾತ್ರ ‘ಆತನ ನಡವಳಿಕೆ ಬಗ್ಗೆ ಪ್ರತಿದಿನವೂ ಅವರ ಮನೆಯಲ್ಲಿ ಗಲಾಟೆಗಳಾಗುತ್ತಿತ್ತು’ ಎಂದಿದ್ದರು. ಇದರ ಬೆನ್ನತ್ತಿದ ಪೊಲೀಸರಿಗೆ ಬೆಚ್ಚಿಬೀಳಿಸುವ ಸತ್ಯಗಳು ಗೊತ್ತಾಗಿವೆ.

ಸೂರಜ್‌ ಆಟವೊಂದರ ಕಾರಣಕ್ಕೆ ಮತ್ತು ಮನಯವರ ಮೇಲಿನ ಸಿಟ್ಟಿಗೆ ತಂದೆ ಮಿಥಿಲೇಶ್‌, ತಾಯಿ ಸಿಯಾ ಮತ್ತು ತಂಗಿಯನ್ನು ಬುಧವಾರ ಮುಂಜಾನೆ ಕೊಲೆ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಪೊಲೀಸ್‌ ಮೂಲಗಳ ಪ್ರಕಾರ, ಮೊದಲಿಗೆ ಆತ ಸ್ವಾತಂತ್ರ್ಯ ದಿನದಂದು ಗಾಳಿಪಟ ಹಾರಿಸಲು ಹೋಗಿ ಮನೆಯವರಿಂದ ಬೈಸಿಕೊಂಡಿದ್ದ. ಈ ಕಾರಣಕ್ಕೆ ಮನೆಯವರಿಗೆ ಪಾಠ ಕಲಿಸಬೇಕು ಎಂದು ನಿರ್ಧರಿಸಿದ್ದ. ಇದೇ ವೇಳೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಯೂ ಅನುತ್ತೀರ್ಣನಾಗಿ ಮನೆಯವರ ವಿರೋಧ ಕಟ್ಟಿಕೊಂಡಿದ್ದ. ಅದರಲ್ಲೂ ತನ್ನ ಗೌಪ್ಯ ವಾರ್ತೆಗಳನ್ನು ಮನೆಯವರಿಗೆ ತಲುಪಿಸುವ ತಂಗಿ ಬಗ್ಗೆ ಆತ ಹತಾಶನಾಗಿದ್ದ ಎಂದು ವರದಿಯಾಗಿದೆ.

ಪಿಯುಸಿ ಪರೀಕ್ಷೆ ಫೈಲಾಗಿದ್ದ ಕಾರಣ ಆತನ ತಂದೆ ತಾನು ಕಟ್ಟಿಸುತ್ತಿದ್ದ ಮನೆಯ ಉಸ್ತುವಾರಿ ನೋಡಿಕೊಳ್ಳುವಂತೆ ಆತನಿಗೆ ಸೂಚಿಸಿದ್ದರು. ಆದರೆ ಅದನ್ನೂ ಆತ ನಿರ್ವಹಿಸದ ಹಿನ್ನಲೆಯಲ್ಲಿ ಖಾಸಗಿ ಕಾಲೇಜಿನಲ್ಲಿ ಸಿವಿಲ್‌ ಇಂಜಿನಿರಿಂಗ್‌ ಡಿಪ್ಲೊಮೋಗೆ ಸೇರಿಸಿದ್ದರು. ತನ್ನ ಹಾಗೆಯೇ ಮಗನೂ ಕಾಂಟ್ರಾಕ್ಟರ್‌ ಆಗಬೇಕೆನ್ನುವುದು ಅವರ ಇಚ್ಛೆಯಾಗಿತ್ತು ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ.

ಸೂರಜ್‌ನ ಯುವ ಮನಸ್ಸನ್ನು ಸೆಳೆದಿತ್ತು ಪಬ್‌ಜಿ ಎಂಬ ಮೊಬೈಲ್‌ ಗೇಮ್‌. ಗುರ್ಗಾಂವ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಆತ ಮೆಹ್ರೌಲಿಯಲ್ಲಿ ಯಾರಿಗೂ ತಿಳಿಯದ ಹಾಗೆ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದ. ಅದರಲ್ಲಿ ಆಟವಾಡಲು ತನ್ನ ಗೆಳೆಯರದೊಂದು ವಾಟ್ಸಾಪ್‌ ಸಂಘ ಕಟ್ಟಿಕೊಂಡಿದ್ದ. ಅದರಲ್ಲಿ ಹುಡುಗರು-ಹುಡುಗಿಯರು ಸೇರಿ 9-10 ಜನರಿದ್ದರು. ‘ಈ ಗ್ರೂಪ್‌ಗಳ ತುಂಬಾ ಕ್ಲಾಸ್‌ಗಳಿಗೆ ಗೈರು ಹಾಜರಾಗುವುದು, ಆಟವಾಡುವುದರ ಬಗ್ಗೆಯೇ ಚರ್ಚೆಗಳು ನಡೆಯುತ್ತಿದ್ದವು’ ಎಂದು ಪೊಲೀಸರು ಹೇಳಿದ್ದಾರೆ.

ಆತ ಬಾಡಿಗೆಗೆ ಪಡೆದ ರೂಮಿನಲ್ಲಿ ಟಿವಿ ಬಿಟ್ಟರೆ ಬೇರೇನೂ ಇಲ್ಲ. ಅವರೆಲ್ಲಾ ಒಟ್ಟಾಗಿ ತರಗತಿಗೆ ಗೈರಾಗಿ ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಕಾಲೇಜಿಗೆ ಹೋಗದೆ ಪಬ್‌ಜಿ ಗೇಮ್‌ ಆಡುತ್ತಾ ಕುಳಿತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದು ಮನೆಯವರಿಗೆ ತಿಳಿದು ಅವರು ಆತನನ್ನು ಪ್ರಶ್ನಿಸಿದ್ದರು. ಆಗ ಮೊದಲೇ ಇದ್ದ ಸಿಟ್ಟನ್ನು ಸೇರಿಸಿ ಆತ ವಿಪರೀತದ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳವಾರ ರಾತ್ರಿ ಕುಟುಂಬದವರ ಜತೆ ಕುಳಿತು ಫೋಟೋ ಆಲ್ಬಂ ನೋಡುತ್ತಿದ್ದವ ರಾತ್ರಿ ಹೊತ್ತು ಕುಟುಂಬದವರನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ‘ಬುಧವಾರ ಮುಂಜಾನೆ 3 ಗಂಟೆ ಹೊತ್ತಿಗೆ ಹೋಗಿ ತಂದೆಗೆ ಚೂರಿಯಿಂದ ಇರಿದಿದ್ದಾನೆ. ಇದನ್ನು ಕಂಡ ತಾಯಿ ಕಿರುಚಿಕೊಳ್ಳಲು ಯತ್ನಿಸಿದಾಗ ಆಕೆಗೂ ಚೂರಿಯಿಂದ ಚುಚ್ಚಿ ನೇರ ತಂಗಿ ರೂಮಿಗೆ ನುಗ್ಗಿದ್ದಾನೆ. ಅಲ್ಲಿ ಆಕೆಯ ಕತ್ತು ಸೀಳಲು ಯತ್ನಿಸಿದ್ದ. ಆಗ ಮಗಳನ್ನು ರಕ್ಷಿಸಲು ತಾಯಿ ಓಡಿ ಬಂದಿದ್ದರು. ಆ ಸಂದರ್ಭದಲ್ಲಿ ಇಬ್ಬರ ಹೊಟ್ಟೆಗೂ ಚುಚ್ಚಿ ಕೊಲೆ ಮಾಡಿದ್ದಾನೆ,” ಎಂದು ಪೊಲೀಸರು ವಿವರಿಸಿದ್ದಾರೆ.

ಸೂರಜ್‌ ಕುಟುಂಬ
ಸೂರಜ್‌ ಕುಟುಂಬ
/ಇಂಡಿಯನ್ ಎಕ್ಸ್‌ಪ್ರೆಸ್‌

ಕೊಲೆ ನಡೆದ ನಂತರ ಬೆರಳಚ್ಚುಗಳನ್ನು ಅಳಿಸಿ ಹಾಕಲು ಮತ್ತು ತಾನೇ ಕೊಲೆ ಮಾಡಿದ್ದೇನೆ ಎಂಬುದು ತಿಳಿಯದಂತೆ ಮಾಡಲು ಆತ ಮನೆಯಲ್ಲಿ ದರೋಡೆ ನಡೆದಿರುವ ದೃಶ್ಯಗಳನ್ನು ಸೃಷ್ಟಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗೆ ತ್ರಿವಳಿ ಕೊಲೆಗೆ ಯುವಕನ ಆಟದ ಗೀಳು ಕಾರಣ ಎಂಬುದಾಗಿ ಪೊಲೀಸರು ವಿವರಿಸಿದ್ದಾರೆ.

ಏನಿದು ಪಬ್‌ಜಿ?:

ಪಬ್‌ಜಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಆನ್‌ಲೈನ್‌ ಗೇಮ್‌. ಕಳೆದ ಕೆಲವು ದಿನಗಳ ಹಿಂದೆ ಕೇವಲ 50 ಲಕ್ಷ ಸುಮಾರಿನಲ್ಲಿದ್ದ ಇದರ ಡೌನ್ಲೋಡ್‌ ಸಂಖ್ಯೆ ಗೂಗಲ್‌ ಪ್ಲೇ ಸ್ಟೋರ್‌ ಒಂದರಲ್ಲೇ ಇದೀಗ 5 ಕೋಟಿ ದಾಟಿ ಮುನ್ನುಗ್ಗುತ್ತಿದೆ. ಸದ್ಯ ಇದಕ್ಕೆ ರೇಟಿಂಗ್‌ ನೀಡಿರುವವರ ಸಂಖ್ಯೆಯೇ 55 ಲಕ್ಷ ದಾಟಿದೆ. ಬರೋಬ್ಬರಿ 1.4 ಜಿಬಿ ಇರುವ ಈ ಗೇಮ್‌, 'ಆಪ್‌ಗಳ ಕಾಲ ಮುಗಿಯಿತು’ ಎಂಬ ಕಾಲದಲ್ಲಿ ಆಕರ್ಷಣೆಗೆ ಒಳಗಾಗಿದೆ.

ಪಬ್‌ಜಿ ಎನ್ನುವುದು ಒಂದು ಯುದ್ಧಭೂಮಿಯ ಆಟ. ನಾಲ್ವರು ವಿಮಾನದಿಂದ ಕೆಳಗೆ ಜಂಪ್ ಮಾಡುವುದು, ಕೆಳಗಿಳಿದು ಮನೆಗಳತ್ತ ಓಡುವುದು. ಅಲ್ಲಿ ಸಿಕ್ಕ ಶಸ್ತ್ರಗಳನ್ನು, ಮೆಡಿಕಲ್ ಕಿಟ್‌ಗಳನ್ನು, ಇನ್ನಿತರ ಯುದ್ಧಕ್ಕೆ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದುವರಿಯುತ್ತಾರೆ. ಅವರ ಇಳಿದ ಜಾಗದ ಸುತ್ತ ವೃತ್ತವೊಂದು ಸಣ್ಣದಾಗುತ್ತ ಬರುತ್ತದೆ. ಅಲ್ಲಿರುವ ನೂರು ಜನರ ನಡುವೆ ಹೋರಾಡಿ ಕೊನೆಯಲ್ಲಿ ಉಳಿದವರು ಗೆದ್ದಂತೆ.

ವಿಶೇಷ ಅಂದರೆ ಈ ಯುದ್ಧ ಭೂಮಿಯ ಆಟದಲ್ಲಿ ಪರಸ್ಪರ ಮಾತನಾಡಿಕೊಳ್ಳಬಹುದು. ಮುಂದಿನ ನಡೆಗಳ ಬಗ್ಗೆ ಚರ್ಚಿಸಬಹುದು. ಲೈವ್‌ ಸಂಪರ್ಕಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಬಹುಶಃ ತಂತ್ರಜ್ಞಾನವನ್ನು ದೊಡ್ಡಮಟ್ಟಕ್ಕೆ ಸದುಪಯೋಗ ಪಡಿಸಿಕೊಂಡ ಆಟವಿದು.

ಬೆಂಗಳೂರು, ಕರ್ನಾಟಕದ ಮೂಲೆ ಮೂಲೆಯೂ ಸೇರಿದಂತೆ ಇವತ್ತು ದೇಶದಲ್ಲಿ ಪಬ್‌ಜಿ ಆಡುವವರ ಸಂಖ್ಯೆ ಗಣನೀಯವಾಗಿ ಏರಿಯಾಗುತ್ತಿದೆ. 16 ರಿಂದ 25 ವರ್ಷ ಒಳಗಿನ ಯುವ ಸಮುದಾಯ ದಿನದಲ್ಲಿ ಹೆಚ್ಚು ಕಾಲವನ್ನು ಇದಕ್ಕಾಗಿಯೇ ಮೀಸಡಲಿಡುತ್ತಿದ್ದಾರೆ. 35ರ ಆಸುಪಾಸಿನರ ಸಂಖ್ಯೆಯೂ ಕಡಿಮೆ ಏನಿಲ್ಲ. ಭಾರತದಲ್ಲಿ ಇದು ಅಪರಾಧದ ಕಾರಣಕ್ಕೆ ಸದ್ದು ಮಾಡುವ ಮುನ್ನವೇ ಜಗತ್ತಿನಾದ್ಯಂತ ಪಬ್‌ಜಿ ಸದ್ದು ಮಾಡಿ ಆಗಿದೆ ಕೂಡ.

ಪಬ್‌ಜಿ ಅಪರಾಧ ಲೋಕ:

ಒಳಗೊಂಡಿರುವ ತಾಂತ್ರಿಕ ಕೌಶಲ್ಯದ ಕಾರಣಕ್ಕೆ ಇರಬಹುದು, ಪಬ್‌ಜಿ ಸುತ್ತ ಗೇಮರ್‌ಗಳ ಜಾಲವೇ ನಿರ್ಮಾಣವಾಗಿದೆ. ಆಟದಲ್ಲಿ ಮಹಿಂದ್ರಾ ಟ್ರಾಕ್ಟರ್‌ ಬಂದಿದ್ದು ಅದರ ಮಾಲಿಕರಿಗೇ ಗೊತ್ತಿರಲಿಲ್ಲ ಎನ್ನುವಲ್ಲಿಂದ ಕಥೆಗಳು ಆರಂಭವಾಗುತ್ತವೆ. ಚೀನಾದಲ್ಲಿ ಗೇಮ್‌ ಒಳಗೆ ವೈರಸ್‌ ಬಿಟ್ಟು ವಂಚನೆ ಎಸಗುವ ಪ್ರೋಗ್ರಾಮ್‌ಗಳನ್ನು ಕಂಡು ಹಿಡಿದ ಕಾರಣಕ್ಕೆ 141 ಜನ ಬಂಧನಕ್ಕೆ ಒಳಗಾಗಿದ್ದಾರೆ. ವಾಷಿಂಗ್ಟನ್‌ನಲ್ಲಿ ಹೆಚ್ಚು ಆಟವಾಡುತ್ತಾನೆ ಎಂದು ಬಾಯ್‌ಫ್ರೆಂಡ್‌ನ್ನು ಗೆಳತಿ ಹತ್ಯೆ ಮಾಡಿದ ಘಟನೆ ನಡೆದಿದೆ. ಚೀನಾದ ಹೀಮನ್‌ ನಗರದಲ್ಲಿ ಪಬ್‌ಜಿ ಮೂಡ್‌ನಲ್ಲಿ ಬಾಲಕನೊಬ್ಬ ಕಟ್ಟಡದಿಂದ ಹಾರಿ ಅಸುನೀಗಿದ್ದಾನೆ. ಇಂತಹದ್ದೇ ಘಟನೆ ಈಗ ಭಾರತದಲ್ಲಿಯೂ ಕೇಳಿಬಂದಿದೆ. ಆದರೆ ಆಗಿರುವ ಡೌನ್‌ಲೋಡ್‌ಗಳಿಗೆ ಹೋಲಿಸಿದರೆ, ಪಬ್‌ಜಿಯನ್ನು ಚಟವಾಗಿಸಿಕೊಂಡು, ಭೀಕರ ಅನ್ನಿಸುವ ತೀರ್ಮಾನಕ್ಕೆ ಹೋದವರ ಸಂಖ್ಯೆ ಅತ್ಯಲ್ಪ. ಆದರೂ, ಇವತ್ತಿಗೆ ಆನ್‌ಲೈನ್‌ ಗೇಮಿಂಗ್‌ ಬಗೆಗೆ ಆಸಕ್ತಿ ಇರುವವರು ಪಬ್‌ಜಿಯನ್ನು ನಿರ್ಲಕ್ಷ್ಯ ಮಾಡುವುದು ಕಷ್ಟ.

ಪಬ್‌ಜಿ ಮಾತ್ರವಲ್ಲ, ಫೋರ್ಟ್‌ನೈಟ್‌ ಹೆಸರಿನ ಮತ್ತೊಂದು ಗೇಮ್‌ ಕೂಡ ಟ್ರೆಂಡಿಂಗ್‌ನಲ್ಲಿದೆ. ಸದ್ಯ ಈ ಗೇಮ್‌ ಕೂಡ ವಿವಾದಕ್ಕೆ ಕಾರಣವಾಗಿದ್ದು ಬ್ರಿಟನ್‌ ದೇಶವೊಂದರಲ್ಲೇ 200ಕ್ಕೂ ಹೆಚ್ಚು ವಿಚ್ಛೇದನಗಳಿಗೆ ಕಾರಣವಾಗಿದೆ ಎಂದು ವರದಿಗಳು ಹೇಳುತ್ತಿವೆ.

ಇಷ್ಟರ ನಡುವೆ ಆನ್‌ಲೈನ್‌ ಗೇಮ್‌ಗೆ ಮೀಸಲಿಡುವ ಸಮಯವನ್ನು ಕಡಿಮೆ ಮಾಡುವುದು ಹೇಗೆ ಎಂಬುದನ್ನು ಸಮುದಾಯವಾಗಿ ಆಲೋಚನೆ ಮಾಡಬೇಕಾದ ಅಗತ್ಯ ಈಗ ಬಂದಿದೆ.

Also read: ‘ಪಬ್‌ಜಿ ಯುದ್ಧಭೂಮಿ’ಯಲ್ಲಿ ಯುವಜನತೆ; ಆನ್‌ಲೈನ್‌ ಗೇಮಿಂಗ್ ಲೋಕದಲ್ಲೊಂದು ಹೊಸ ಟ್ರೆಂಡ್‌!