ಬೆಂಗಳೂರು ವೀಕೆಂಡ್‌ನಲ್ಲಿ ‘ಹೊಂಗಿರಣೋತ್ಸವ’ ಹಾಸ್ಯ ನಾಟಕಗಳ ಸಂಭ್ರಮ
ಸುದ್ದಿ ಸಾರ

ಬೆಂಗಳೂರು ವೀಕೆಂಡ್‌ನಲ್ಲಿ ‘ಹೊಂಗಿರಣೋತ್ಸವ’ ಹಾಸ್ಯ ನಾಟಕಗಳ ಸಂಭ್ರಮ

ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಲ್ಲತ್ತಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಶಿವಮೊಗ್ಗದ ಹೊಂಗಿರಣ ತಂಡದಿಂದ ಹಾಸ್ಯ ನಾಟಕಗಳ ಪ್ರದರ್ಶನ ನಡೆಯಲಿವೆ.

ಬೆಂಗಳೂರು ನಗರದ ಜನರಿಗೆ ವೀಕೆಂಡ್‌ನಲ್ಲಿ ಮನರಂಜನೆ ನೀಡಲು ಹೊಂಗಿರಣ ತಂಡ ಮೂರು ಹಾಸ್ಯ ನಾಟಕಗಳ ಪ್ರದರ್ಶನ ಆಯೋಜಿಸಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಲ್ಲತ್ತಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಈ ನಾಟಕಗಳ ಪ್ರದರ್ಶನ ನಡೆಯಲಿವೆ.

ಶುಕ್ರವಾರ ಎಸ್‌.ಆರ್‌. ಗಿರೀಶ್‌ ರಚಿಸಿರುವ, ಸಾಸ್ವೆಹಳ್ಳಿ ಸತೀಶ್‌ ನಿರ್ದೇಶನದ ‘ನನ್ನ ಪ್ರೀತಿಯ ನರಕ’ ಎಂಬ ನಾಟಕದ ಪ್ರದರ್ಶನ ನಡೆಯಲಿದೆ. ಹೊಂಗಿರಣದ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ.

ಶನಿವಾರ ಚಂದ್ರೇಗೌಡ ರಚಿಸಿರುವ ‘ಬಯಲು ಸೀಮೆ ಕಟ್ಟೆ ಪುರಾಣ’ ಎಂಬ ನಾಟಕದ ಪ್ರದರ್ಶನ ನಡೆಯಲಿದೆ. ಎಸ್‌.ಆರ್. ಗಿರೀಶ್‌ ನಿರ್ದೇಶನದಲ್ಲಿ ಶಿವಮೊಗ್ಗದ ‘ನಮ್‌ ಟೀಮ್‌’ ಕಲಾವಿದರು ಇದರಲ್ಲಿ ನಟಿಸಲಿದ್ದಾರೆ.

ಭಾನುವಾರ ಕೊನೆಯ ನಾಟಕದ ಪ್ರದರ್ಶನ ನಡೆಯಲಿದ್ದು ಇದನ್ನು ಸಾಸ್ವೆಹಳ್ಳಿ ಸತೀಶ್‌ ರಚಿಸಿ, ನಿರ್ದೇಶಿಸಿದ್ದಾರೆ. ‘ವೀರ ಉತ್ತರ ಕುಮಾರ’ ಹೆಸರಿನ ಈ ನಾಟಕದ ಪಾತ್ರಗಳಿಗೆ ಹೊಂಗಿರಣ ತಂಡದ ಕಲಾವಿದರು ಜೀವ ತುಂಬಲಿದ್ದಾರೆ.

ಕಳೆದ ಹಲವು ವರ್ಷಗಳಿಂದ ‘ಹೊಂಗಿರಣೋತ್ಸವ’ದ ಹೆಸರಿನಲ್ಲಿ ಮೂರು ದಿನಗಳ ಅವಧಿಯ ಈ ಹಾಸ್ಯ ನಾಟಕಗಳ ಸಂಭ್ರಮ ನಡೆಯುತ್ತಾ ಬಂದಿದೆ. ಈ ವರ್ಷ ನಡೆಯುತ್ತಿರುವುದು 7ನೇ ಹಾಸ್ಯ ರಂಗೋತ್ಸವವಾಗಿದೆ. ಪ್ರತಿದಿನ ಸಂಜೆ 7 ಗಂಟೆಗೆ ಸರಿಯಾಗಿ ನಾಟಕ ಆರಂಭವಾಗಲಿದೆ. ಆಸಕ್ತರು ‘ಬುಕ್‌ ಮೈ ಶೋ’ದಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಲು ಅವಕಾಶವಿದೆ. ಒಂದು ನಾಟಕಕ್ಕೆ 100 ರೂ. ಮತ್ತು ಮೂರು ನಾಟಕಗಳಿಗೆ ಒಟ್ಟಾಗಿ 250 ರೂಪಾಯಿ ದರವಿದೆ.

ಬೆಂಗಳೂರು ವೀಕೆಂಡ್‌ನಲ್ಲಿ ‘ಹೊಂಗಿರಣೋತ್ಸವ’ ಹಾಸ್ಯ ನಾಟಕಗಳ ಸಂಭ್ರಮ