ಸಚಿವ ಸ್ಥಾನಕ್ಕೆ ಎನ್‌. ಮಹೇಶ್‌ ರಾಜೀನಾಮೆ; ಪತ್ರದಲ್ಲಿ ಹೇಳಿದ್ದೇನು? 
ಸುದ್ದಿ ಸಾರ

ಸಚಿವ ಸ್ಥಾನಕ್ಕೆ ಎನ್‌. ಮಹೇಶ್‌ ರಾಜೀನಾಮೆ; ಪತ್ರದಲ್ಲಿ ಹೇಳಿದ್ದೇನು? 

ಸಚಿವರಾದ ಕೇವಲ ನಾಲ್ಕು ತಿಂಗಳೊಳಗೆ ಎನ್‌. ಮಹೇಶ್‌ ತಮ್ಮ ಸಚಿವ ಸ್ಥಾನಕ್ಕೆ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು ರಾಜೀನಾಮೆ ನೀಡಿದ್ದಾರೆ.

ಗುರುವಾರ ಹಠಾತ್‌ ಆಗಿ ನಡೆದ ರಾಜಕೀಯ ಬೆಳೆವಣಿಗೆಯೊಂದರಲ್ಲಿ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟಿದ್ದಾರೆ.

ಬಿಎಸ್‌ಪಿ ಪಕ್ಷದಿಂದ ಸ್ಪರ್ಧಿಸಿ ಅವರು ಕೊಳ್ಳೇಗಾಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಗೆದ್ದ ಮೊದಲ ಅವಧಿಯಲ್ಲೇ ಅವರಿಗೆ ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನ ಸಿಕ್ಕಿತ್ತು.

ಇಂದು ಬೆಳಿಗ್ಗೆ ಬಿಎಸ್‌ಪಿ ಪಕ್ಷದ ಸಂಸದ ಅಶೋಕ್‌ ಸಿದ್ಧಾರ್ಥ್‌ (ಇವರು ಬಿಎಸ್‌ಪಿ ಕರ್ನಾಟಕ ಇನ್‌- ಚಾಜ್‌ ಕೂಡ) ಬೆಂಗಳೂರಿಗೆ ಬಂದಿದ್ದರು. ಅವರ ಆಗಮನದ ಬೆನ್ನಲ್ಲೇ ಸಂಜೆ ಎನ್‌. ಮಹೇಶ್‌ ರಾಜೀನಾಮೆ ಹೊರ ಬಿದ್ದಿದೆ. “ಇದು ವೈಯಕ್ತಿಕ ಕಾರಣಗಳಿಗಾಗಿ ನೀಡುತ್ತಿರುವ ರಾಜೀನಾಮೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕೆಲಸಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ,’’ ಎಂದು ಎನ್. ಮಹೇಶ್ ಮಾಧ್ಯಮಗಳಿಗೆ ವಿವರಿಸಿದರು. ಹಾಗೂ, ಈ ವಿಚಾರ ಪಕ್ಷದ ರಾಷ್ಟ್ರಾಧ್ಯಕ್ಷೆ ಮಾಯಾವತಿಯವರ ಗಮನದಲ್ಲಿ ಇಲ್ಲ ಎಂದರು.

ಆದರೆ, ‘ಸಮಾಚಾರ’ ಅಶೋಕ್ ಸಿದ್ಧಾರ್ಥ್ ಅವರನ್ನು ಸಂಪರ್ಕಿಸಿದಾಗ, ಎನ್. ಮಹೇಶ್ ತೀರ್ಮಾನ ಪಕ್ಷದ ವರಿಷ್ಠರ ಗಮನದಲ್ಲಿದೆ ಎಂದರು. “ರಾಜೀನಾಮೆ ನೀಡಿರುವುದು ನಿಜ. ಯಾಕೆ ಅನ್ನುವುದನ್ನು ಅವರೇ ವಿವರಿಸಿದ್ದಾರೆ. ಎನ್‌. ಮಹೇಶ್‌ ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಬೇಕಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರದಲ್ಲಿರುವುದಕ್ಕಿಂತ ರಾಜೀನಾಮೆ ನೀಡಿ ಪಕ್ಷದ ಕೆಲಸ ಮಾಡಬೇಕಾಗಿದೆ,” ಎಂದರು. ಈ ಮೂಲಕ ರಾಜ್ಯದಲ್ಲಿ ಬಿಎಸ್‌ಪಿ ಪಕ್ಷ ಲೋಕಸಭೆ ವಿಚಾರದಲ್ಲಿ ಗಂಭೀರವಾಗಿ ಸೆಣಸಾಟಕ್ಕೆ ಅಣಿಯಾದ ಮುನ್ಸೂಚನೆಯನ್ನು ನೀಡಿದರು.

ಈ ನಡುವೆ, ಎನ್. ಮಹೇಶ್ ರಾಜೀನಾಮೆಗೆ ಒಂದು ಗಂಟೆ ಮುಂಚೆ ಚಾಮರಾಜನಗರ ಜಿಲ್ಲೆಯಲ್ಲಿ ಬಿಎಸ್‌ಪಿ ಕಾರ್ಯಕರ್ತರು ಮೈಸೂರು ದಸರಾ ವಿಚಾರದಲ್ಲಿ ಎನ್. ಮಹೇಶ್ ಕಡೆಗಣನೆ ಮಾಡಿದ್ದಾರೆ ಎಂದು ಪ್ರತಿಭಟನೆ ನಡೆಸಿದ ಮಾಹಿತಿ ಬಂದಿದೆ.

ಎನ್. ಮಹೇಶ್ ರಾಜೀನಾಮೆ ಪತ್ರ. 
ಎನ್. ಮಹೇಶ್ ರಾಜೀನಾಮೆ ಪತ್ರ.