samachara
www.samachara.com
ಮಾಧ್ಯಮ ದೈತ್ಯ ರಾಘವ್‌ ಬಹಲ್‌ ಮನೆ, ಕಚೇರಿ ಮೇಲೆ ಐಟಿ ದಾಳಿ
ಸುದ್ದಿ ಸಾರ

ಮಾಧ್ಯಮ ದೈತ್ಯ ರಾಘವ್‌ ಬಹಲ್‌ ಮನೆ, ಕಚೇರಿ ಮೇಲೆ ಐಟಿ ದಾಳಿ

ಪತ್ರಿಕೋದ್ಯಮಿಯಾಗಿ ಗುರುತಿಸಿಕೊಂಡಿರುವ ರಾಘವ್ ಬಹಲ್‌ ಕ್ವಿಂಟ್‌ ನ್ಯೂಸ್‌ ಪೋರ್ಟಲ್‌, ನೆಟ್‌ವರ್ಕ್‌ 18 ಗ್ರೂಪ್‌ ಸಂಸ್ಥಾಪಕರಾಗಿದ್ದಾರೆ. ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಅವರು ನಿರ್ದೇಶಕರಾಗಿದ್ದಾರೆ.

Team Samachara

ಭಾರತೀಯ ಪತ್ರಿಕೋದ್ಯಮದ ದೈತ್ಯ ರಾಘವ್‌ ಬಹಲ್‌ ಮನೆ ಮತ್ತು ಕಚೇರಿಗಳ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಚಾಲ್ತಿಯಲ್ಲಿರುವ ತನಿಖೆಯ ಭಾಗವಾಗಿ ನೋಯ್ಡಾದ ಸಮೀಪದಲ್ಲಿರುವ ಬಹಲ್‌ ಮನೆ ಮತ್ತು ‘ದಿ ಕ್ವಿಂಟ್‌’ ಕಚೇರಿ ಮೇಲೆ ಇಂದು ಮುಂಜಾನೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಸದ್ಯ ನಾನು ಮುಂಬೈನಲ್ಲಿದ್ದು, ನನ್ನ ಮನೆ ಮತ್ತು ‘ದಿ ಕ್ವಿಂಟ್‌’ನ ಕಚೇರಿಗಳ ಮೇಲೆ ದಾಳಿ ನಡೆದಿರುವುದಾಗಿ ‘ಎಡಿಟರ್ಸ್‌ ಗಿಲ್ಡ್‌’ಗೆ ಬಹಲ್‌ ಪ್ರತಿಕ್ರಿಯೆ ನೀಡಿದ್ದಾರೆ. ನಾನೀಗ ದೆಹಲಿಗೆ ವಾಪಾಸಾಗುತ್ತಿದ್ದೇನೆ ಎಂದವರು ಮಾಹಿತಿ ನೀಡಿದ್ದಾರೆ.

ಬಹಲ್‌ ಅವರ ನಿವಾಸ ಮತ್ತು ಕ್ವಿಂಟ್‌ ಕಚೇರಿಗಳಲ್ಲದೆ ಪ್ರಕರಣಕ್ಕೆ ಸಂಬಂಧಿಸಿದ ಇತರ ವ್ಯಕ್ತಿಗಳ ಮನೆಗಳಲ್ಲೂ ಪರಿಶೀಲನೆ ನಡೆದಿದೆ ಎಂದು ತಿಳಿದು ಬಂದಿದೆ. ರಾಘವ್‌ ಬಹಲ್‌ ಅವರಿಗೆ ಸೇರಿದ ಕ್ವಿಂಟೈಪ್‌ ಕಚೇರಿ ಬೆಂಗಳೂರಿನಲ್ಲಿದ್ದು, ಇಲ್ಲಿ ಯಾವುದೇ ರೀತಿಯ ದಾಳಿ ಅಥವಾ ಪರಿಶೀಲನೆಗಳು ನಡೆದಿಲ್ಲ ಎಂದು ತಿಳಿದು ಬಂದಿದೆ.

ರಾಘವ್‌ ಬಹಲ್‌ ಮೇಲಿನ ದಾಳಿಗೆ ಹಲವರು ಪ್ರತಿಕ್ರಿಯೆ ನೀಡಿದ್ದು ಸರಕಾರದ ನಡೆಯನ್ನು ಟೀಕಿಸಿದ್ದಾರೆ. “ಕ್ವಿಂಟ್‌ ಕಚೇರಿಗಳು ಮತ್ತು ಅದರ ಸ್ಥಾಪಕ ರಾಘವ್ ಬಹಲ್ ಮನೆಯ ಮೇಲಿನ ಐಟಿ ದಾಳಿ ಗಂಭೀರ ಪ್ರಕರಣವಾಗಿದೆ. ಎಲ್ಲಾ ಪ್ರಶ್ನೆಗಳನ್ನು ಕೇಳಲು ತೆರಿಗೆದಾರನಿಗೆ ಹಕ್ಕು ಇದೆ, ಆದರೆ ದಾಳಿಗಳು ಬೆದರಿಕೆಯಂತೆ ಕಾಣಿಸುತ್ತಿವೆ. ಸಮರ್ಥನೆ ಇದ್ದರೆ, ಸರ್ಕಾರ ತ್ವರಿತವಾಗಿ ವಿವರಿಸಬೇಕು. ಇಲ್ಲದಿದ್ದಲ್ಲಿ ವಿರೋಧಿ ಮಾಧ್ಯಮಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದಂತೆ ಇದು ಕಾಣಿಸುತ್ತದೆ,” ಎಂದು ಖ್ಯಾತ ಪತ್ರಕರ್ತ ಶೇಖರ್‌ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.

ಇನ್ನು ಕೆಲವೇ ದಿನಗಳ ಹಿಂದೆ ಎಎಪಿ ತೊರೆದಿರುವ ಪತ್ರಕರ್ತ ಆಶೀಷ್‌ ಖೇತನ್‌, “ರಾಘವ್ ಅತ್ಯಂತ ವಿಶ್ವಾಸಾರ್ಹ ಮಾಧ್ಯಮ ವ್ಯಕ್ತಿಗಳಲ್ಲಿ ಒಬ್ಬರು. ಮೋದಿ ಸರಕಾರವನ್ನು ಟೀಕಿಸುವ ಮೂಲಕ ಅವರು ಸ್ಥಾಪಿತ ಸರಕಾರದ ವಿರೋಧಿಯಾಗಿದ್ದಕ್ಕೆ ಈಗ ಬೆಲೆಯನ್ನು ತೆರುತ್ತಿದ್ದಾರೆ,” ಎಂದು ಕಿಡಿಕಾರಿದ್ದಾರೆ.

ಪತ್ರಿಕೋದ್ಯಮಿಯಾಗಿ ಗುರುತಿಸಿಕೊಂಡಿರುವ ಬಹಲ್‌ ಕ್ವಿಂಟ್‌ ನ್ಯೂಸ್‌ ಪೋರ್ಟಲ್‌, ನೆಟ್‌ವರ್ಕ್‌ 18 ಗ್ರೂಪ್‌ ಸಂಸ್ಥಾಪಕರಾಗಿದ್ದಾರೆ. ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಅವರು ನಿರ್ದೇಶಕರಾಗಿದ್ದಾರೆ. ಅವರ ಒಡೆತನದ ‘ಕ್ವಿಂಟೈಪ್‌’ ಸಂಸ್ಥೆಯಿಂದ ‘ಸಮಾಚಾರ’ವೂ ತಾಂತ್ರಿಕ ನೆರವನ್ನು ಪಡೆದುಕೊಳ್ಳುತ್ತಿದೆ. ಇದಕ್ಕಾಗಿ ನಿಗದಿತ ಹಣವನ್ನು ಪಾವತಿಸುತ್ತಿದೆ.