ಮಂಡ್ಯದ ಹಂಗರಹಳ್ಳಿಯಲ್ಲಿ ಜೀತದಾಳು ಸಾವು; ಕ್ವಾರಿಯಲ್ಲಿ ನಡೆಯಿತೇ ಬಡಪಾಯಿಯ ಕೊಲೆ?
ಸುದ್ದಿ ಸಾರ

ಮಂಡ್ಯದ ಹಂಗರಹಳ್ಳಿಯಲ್ಲಿ ಜೀತದಾಳು ಸಾವು; ಕ್ವಾರಿಯಲ್ಲಿ ನಡೆಯಿತೇ ಬಡಪಾಯಿಯ ಕೊಲೆ?

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿಯ ಕಲ್ಲು ಕ್ವಾರಿಯಲ್ಲಿ ಕರಿಯಪ್ಪ ಮಾದರ್ ಎಂಬ ಜೀತದಾಳು ಮೃತಪಟ್ಟಿದ್ದು, ಕುಟುಂಬಸ್ಥರಿಂದ ಕೊಲೆಯ ಶಂಕೆ ವ್ಯಕ್ತವಾಗಿದೆ.

ಅಮಾನವೀಯ ಜೀತ ಪದ್ಧತಿಯನ್ನು ಜೀವಂತವಾಗಿಟ್ಟಿದ್ದ, ಜೀತಗಾರರ ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸುತ್ತಿದ್ದ ಪ್ರಕರಣದಿಂದ ಸುದ್ದಿಯಾಗಿದ್ದ ಮಂಡ್ಯ ಜಿಲ್ಲೆಯ ಹಂಗರಹಳ್ಳಿ ಈಗ ಜೀತದಾಳು ಸಾವಿನಿಂದ ಮತ್ತೆ ಸುದ್ದಿಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿಯ ಕಲ್ಲು ಕ್ವಾರಿಯಲ್ಲಿ ಕರಿಯಪ್ಪ ಮಾದರ್ ಎಂಬ ಜೀತದಾಳು ಮೃತಪಟ್ಟಿದ್ದು, ಕುಟುಂಬಸ್ಥರಿಂದ ಕೊಲೆಯ ಶಂಕೆ ವ್ಯಕ್ತವಾಗಿದೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಓಬಳಾಪುರ ಮೂಲದ ಕರಿಯಪ್ಪ ಮಾದರ್, ಆತನ ಪತ್ನಿ ಕಾಕವ್ವ ಮತ್ತು ಆತನ ತಮ್ಮ ಮಹದೇವ ಮಾದರ್ ಕಾರ್ಮಿಕರ ಗುತ್ತಿಗೆದಾರ ಉಮೇಶ್‌ ಎಂಬಾತನ ಮೂಲಕ ವರ್ಷದ ಹಿಂದೆ ಹಂಗರಹಳ್ಳಿಯ ಕ್ವಾರಿಗೆ ಕೆಲಸಕ್ಕೆ ಬಂದಿದ್ದರು. 70 ಸಾವಿರ ಹಣ ಪಡೆದದ್ದಕ್ಕೆ ಈ ಮೂವರೂ ಅಲ್ಲಿ ಜೀತ ಮಾಡುತ್ತಿದ್ದರು. ಅವರು ಮಾಡಿಕೊಂಡಿದ್ದ ಒಪ್ಪಂದದಂತೆ ಒಂದು ವರ್ಷದ ಅವಧಿ ಮಂಗಳವಾರಕ್ಕೆ ಮುಗಿದಿತ್ತು.

ತಮ್ಮ ಒಪ್ಪಂದದ ಅವಧಿ ಮುಗಿದ ಬಗ್ಗೆ ಈ ಕುಟುಂಬ ಕ್ವಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೇಸ್ತ್ರಿ ಪುನೀತ್‌ ಎಂಬಾತನ ಬಳಿ ಹೇಳಿಕೊಂಡಿದೆ. ಪುನೀತ್‌ ಇವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕರಿಯಪ್ಪ ಮಾದರ್‌ಗೆ ಹೆಂಡತಿಯ ಎದುರೇ ಥಳಿಸಿದ್ದಾನೆ. ಬಳಿಕ ಲೆಕ್ಕ ತೋರಿಸುವುದಾಗಿ ತನ್ನೊಂದಿಗೆ ಕರಿಯಪ್ಪನನ್ನು ಕರೆದುಕೊಂಡು ಹೋಗಿದ್ದಾನೆ. ಸ್ವಲ್ಪ ಹೊತ್ತಿನ ನಂತರ ವ್ಯಕ್ತಿಯೊಬ್ಬರು ಕರಿಯಪ್ಪ ಸಾವನ್ನಪ್ಪಿರುವ ವಿಷಯವನ್ನು ಈ ಕುಟುಂಬಕ್ಕೆ ತಿಳಿಸಿದ್ದಾನೆ. ಕುಟುಂಬಸ್ಥರು ಹೋಗಿ ನೋಡಿದಾಗ ಕರಿಯಪ್ಪನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕರಿಯಪ್ಪ ಕುಟುಂಬ ಸದಸ್ಯರು ಇದು ಕೊಲೆ ಎಂದು ಆರೋಪಿಸಿದ್ದಾರೆ.

ಕ್ವಾರಿ ಮಾಲೀಕರೇ ಈ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿರುವ ಮಂಡ್ಯದ ದಲಿತ ಮುಖಂಡರು, ಪ್ರಕರಣದ ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಮಂಡ್ಯದಲ್ಲಿ ಇನ್ನೂ ಜೀತಪದ್ಧತಿ ಜೀವಂತವಾಗಿದ್ದು ಇದನ್ನು ತಡೆಯಲು ಹೋರಾಟ ರೂಪಿಸುವುದಾಗಿ ದಲಿತ ಸಂಘಟನೆಗಳು ಹೇಳಿವೆ.