ದಯವಿಟ್ಟು ಗಮನಿಸಿ, ನೀವು ಪ್ರಯಾಣಿಸುತ್ತಿರುವ ರಫೇಲ್ ವಿಮಾನವು ಸುಪ್ರಿಂ ಕೋರ್ಟ್‌ನಲ್ಲಿ ಲ್ಯಾಂಡ್ ಆಗುತ್ತಿದೆ...
ಸುದ್ದಿ ಸಾರ

ದಯವಿಟ್ಟು ಗಮನಿಸಿ, ನೀವು ಪ್ರಯಾಣಿಸುತ್ತಿರುವ ರಫೇಲ್ ವಿಮಾನವು ಸುಪ್ರಿಂ ಕೋರ್ಟ್‌ನಲ್ಲಿ ಲ್ಯಾಂಡ್ ಆಗುತ್ತಿದೆ...

ಇದೇ ಮೊದಲ ಬಾರಿ ಕೇಂದ್ರ ಸರಕಾರ ರಫೇಲ್ ಮಾಹಿತಿಯನ್ನು ಹೊರಗಿನ ಸಂಸ್ಥೆಯೊಂದಕ್ಕೆ ನೀಡಬೇಕಾಗಿ ಬಂದಿದೆ. ಆದರೆ ಈಗ ನ್ಯಾಯಾಲಯ ಬಾಯಿ ಮಾತಿನಲ್ಲಿ ಮಾಹಿತಿ ನೀಡುವಂತೆ ಕೋರಿದೆ.

ಎಲ್ಲವೂ ಸುಖಾಂತ್ಯವೇ ಆಗುವುದಾದರೆ, ಇದೇ ತಿಂಗಳ ಕೊನೆಯ ದಿನ ಸುಪ್ರಿಂ ಕೋರ್ಟ್ ‘ರಫೇಲ್ ಡೀಲ್‌’ ಬಗ್ಗೆ ಸಮಾಧಾನ ವ್ಯಕ್ತಪಡಿಸಲಿದೆ!

ಆದರೆ, ಅದಕ್ಕಾಗಿ ಅಕ್ಟೋಬರ್ 29ರೊಳಗೆ ಮುಚ್ಚಿದ ಲಕೋಟೆಯಲ್ಲಿ ಫ್ರಾನ್ಸ್‌ನ ಡಸಾಲ್ಟ್ ಕಂಪನಿ ಜತೆ ಯುದ್ಧ ವಿಮಾನಗಳ ಖರೀದಿ ಸಂಬಂಧ ನಡೆಸಿದ ನಡಾವಳಿಗಳ ಮಾಹಿತಿ ನೀಡುವಂತೆ ತಿಳಿಸಿದೆ; ಅದೂ ಮುಚ್ಚಿದ ಲಕೋಟೆಯಲ್ಲಿ. ಅದಕ್ಕಾಗಿ ಇದೇ ಮೊದಲ ಬಾರಿ ಕೇಂದ್ರ ಸರಕಾರ ರಫೇಲ್ ಮಾಹಿತಿಯನ್ನು ಹೊರಗಿನ ಸಂಸ್ಥೆಯೊಂದಕ್ಕೆ ನೀಡಬೇಕಾಗಿ ಬಂದಿದೆ. ಇಷ್ಟು ದಿನಗಳ ಕಾಲ ಗೌಪ್ಯತಾ ಕಾಯ್ದೆ, ರಕ್ಷಣಾ ಇಲಾಖೆಯ ವಿಚಾರ ಎಂಬ ಕಾರಣಗಳನ್ನು ನೀಡಿ, ರಾಷ್ಟ್ರೀಯ ಭದ್ರತೆಯ ನೆಪ ಮುಂದಿಟ್ಟು ಮಾಹಿತಿ ನಿರಾಕರಿಸಿಕೊಂಡು ಬರಲಾಗಿತ್ತು. ಆದರೆ ಈಗ ನ್ಯಾಯಾಲಯ ಬಾಯಿ ಮಾತಿನಲ್ಲಿ ಮಾಹಿತಿ ನೀಡುವಂತೆ ಕೋರಿದೆ.

ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಸುಪ್ರಿಂ ಕೋರ್ಟ್‌ಗೆ ಈ ಕುರಿತು ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಜತೆಗೆ ಹೊರಗೂ, ರಾಜಕೀಯ ವಲಯದಲ್ಲೂ ಇದು ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗುತ್ತಿರುವ ವಿಚಾರವಾಗಿ ಬದಲಾಗಿದೆ. ಫ್ರಾನ್ಸ್ ದೇಶದ ಜತೆ ನಡೆಸಿದ ಈ ವ್ಯವಹಾರದಲ್ಲಿ ದೇಶದ ನಂಬರ್ 25 ಶ್ರೀಮಂತ, ರಿಲಯನ್ಸ್‌ ಸಮೂಹದ ಅನಿಲ್ ಅಂಬಾನಿ ಒಡೆತನದ ಕಂಪನಿ ಅಗತ್ಯ ಮೀರಿ ಲಾಭ ಮಾಡಿಕೊಂಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕಾಗಿ ಫ್ರಾನ್ಸ್‌ನ ಅಂದಿನ ಅಧ್ಯಕ್ಷರ ಪತ್ನಿಯ ಸಿನಿಮಾಗೆ ಹಣ ಹೂಡಿಕೆ ನಡೆದಿತ್ತು ಎಂಬ ಆರೋಪ ಅಂತಾರಾಷ್ಟ್ರೀಯ ಗಮನ ಸೆಳೆದಿತ್ತು. ಈಗಾಗಲೇ ರಫೇಲ್ ಡೀಲ್‌ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ದೂರನ್ನೂ ನೀಡಲಾಗಿದೆ.

Also read: ರಫೇಲ್ ಡೀಲ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಬಿಐಗೆ ದೂರು

Also read: 1989ರಲ್ಲಿ ಬೋಫೋರ್ಸ್, 2019ರಲ್ಲಿ ರಫೇಲ್; ರಾಜೀವ್ ಗಾಂಧಿಯಂತೆ ಮಕಾಡೆ ಮಲಗ್ತಾರಾ ಮೋದಿ?

ಇದರ ಮುಂದುವರಿದ ಭಾಗವಾಗಿ ರಫೇಲ್‌ ಡೀಲ್‌ನಲ್ಲಿ ಕೇಂದ್ರ ಸರಕಾರದ ಪಾತ್ರವೂ ಇದೆ ಎಂದು ಆರೋಪಿಸಿ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ಕಾಂಗ್ರೆಸ್ ಮುಖಂಡರು ಸಲ್ಲಿಸಿದ್ದ ಅರ್ಜಿ ಹಿಂತೆಗೆದುಕೊಂಡಿದ್ದಾರೆ. ಉಳಿದ ಎರಡು ಅರ್ಜಿಗಳ ಕುರಿತು ಬುಧವಾರ ವಿಚಾರಣೆ ನಡೆದಿದೆ.

ವಿಚಾರಣೆಯ ವೇಳೆಯಲ್ಲಿ:

ಸುಪ್ರಿಂ ಕೋರ್ಟ್‌ನಲ್ಲಿ ನಡೆದ ವಾದ ವಿವಾದದಲ್ಲಿ ಅರ್ಜಿದಾರರ ಪರವಾಗಿ ಪ್ರತ್ಯೇಕ ವಾದಗಳು ಮಂಡನೆಯಾದವು. ಇವುಗಳಲ್ಲಿ ಒಬ್ಬರ ಪರ ವಕೀಲರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನೇ ಪ್ರಸ್ತಾಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ಈ ಹಂತದಲ್ಲಿ ವೃಥಾ ಆರೋಪಗಳನ್ನು ಮಾಡಬೇಡಿ ಎಂದರು. ನಂತರ ಸರಕಾರದ ಪರವಾಗಿ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಹೇಳಿಕೆ ದಾಖಲಿಸಿದರು.

“ಇದರಲ್ಲಿ ರಾಷ್ಟ್ರೀಯ ಭದ್ರತೆಯ ವಿಚಾರ ಅಡಗಿದೆ. ಚುನಾವಣೆ ಸಮೀಪದಲ್ಲಿರುವಾಗ ನ್ಯಾಯಾಲಯವನ್ನು ಬಳಸಿಕೊಂಡು ವಿರೋಧ ಪಕ್ಷಗಳು ಕೆಟ್ಟ ಯುದ್ಧದ ಮೂಲಕ ಲಾಭ ಮಾಡಿಕೊಳ್ಳಲು ಹೊರಟಿವೆ,’’ ಎಂದರು ವೇಣುಗೋಪಾಲ್. ಆದರೆ ಸುಪ್ರಿಂ ಕೋರ್ಟ್, ‘ತನ್ನ ಸಮಾಧಾನಕ್ಕಾಗಿ’ ಯುದ್ಧ ವಿಮಾನ ಖರೀದಿ ಸಮಯದಲ್ಲಿ ಅನುಸರಿಸಿದ ಸರಕಾರದ ನಡಾವಳಿಗಳನ್ನು ನೀಡುವಂತೆ ಕೇಳಿದೆ. ಅದಕ್ಕಾಗಿ ಯಾವುದೇ ನೋಟಿಸ್, ಸೂಚನೆ ನೀಡುವುದಿಲ್ಲ ಎಂದು ಹೇಳಿತು. ಇದೀಗ ಸರಕಾರ ಮುಚ್ಚಿದ ಲಕೋಟೆಯಲ್ಲಿ ಮಾಹಿತಿಯನ್ನು ಮೊದಲ ಬಾರಿ ಹೊರಗೆಡಹಬೇಕಾಗಿ ಬಂದಿದೆ. ಈ ಮೂಲಕ ರಫೇಲ್ ಯುದ್ಧ ವಿಮಾನ ಖರೀದಿ ಕೇಸ್ ಅಧಿಕೃತವಾಗಿ ಸುಪ್ರಿಂ ಅಂಗಳಕ್ಕೆ ಈ ತಿಂಗಳಾಂತ್ಯಕ್ಕೆ ಬಂದಿಳಿಯುವುದು ಖಾತ್ರಿಯಾಗಿದೆ.

Also read: ‘ರಫೇಲ್ ಅಕಾ ಮೋದಿ ಬೋಫೋರ್ಸ್‌’: ಹಗರಣ ಅರ್ಥಮಾಡಿಕೊಳ್ಳಲು ಮುಂದಿಟ್ಟ ಆ 22 ಅಂಶಗಳು...

Also read: ‘ಇನ್ ಡೀಟೆಲ್’: 21ನೇ ಶತಮಾನದ ಮೆಘಾ ಡೀಲ್; ಏನಿದು ರಫೇಲ್‌?