ಮಾಜಿ ಸಚಿವರು ಸೇರಿ 19 ಜನರಿಗೆ ಮರಣ ದಂಡನೆ:  ಢಾಕಾದಿಂದ ಬಂದ ಶಾಕಿಂಗ್ ಸುದ್ದಿ
ಸುದ್ದಿ ಸಾರ

ಮಾಜಿ ಸಚಿವರು ಸೇರಿ 19 ಜನರಿಗೆ ಮರಣ ದಂಡನೆ: ಢಾಕಾದಿಂದ ಬಂದ ಶಾಕಿಂಗ್ ಸುದ್ದಿ

2004ರಲ್ಲಿ ಶೇಖ್‌ ಹಸೀನಾ ವಿರೋಧ ಪಕ್ಷದ ನಾಯಕಿಯಾಗಿದ್ದಾಗ ಢಾಕಾದಲ್ಲಿ ಅವರ ಪಕ್ಷ ಅವಾಮಿ ಲೀಗ್‌ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಗ್ರೆನೇಡ್‌ ದಾಳಿ ನಡೆದಿತ್ತು.

ಬಾಂಗ್ಲಾದೇಶದ ಇಬ್ಬರು ಮಾಜಿ ಸಚಿವರು ಸೇರಿ 19 ಜನರಿಗೆ ಢಾಕಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಪ್ರಮುಖ ವಿರೋಧ ಪಕ್ಷದ ನಾಯಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2004ರಲ್ಲಿ ಹಾಲಿ ಪ್ರಧಾನಿ ಶೇಖ್‌ ಹಸೀನಾ ರ್ಯಾಲಿ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಈ ಶಿಕ್ಷೆ ವಿಧಿಸಲಾಗಿದೆ.

ವಿಶೇಷ ನ್ಯಾಯಾಲಯ ನ್ಯಾಯಾಧೀಶ ನ್ಯಾ. ಶಹೀದ್‌ ನುರುದ್ಧೀನ್‌ ಈ ಆದೇಶ ನೀಡಿದ್ದಾರೆ. ಮಾಜಿ ಪ್ರಧಾನಿ ಖಲೀದಾ ಜೀಯಾ ಅವರ ಪುತ್ರ, ಸದ್ಯ ಗಡಿಪಾರಾಗಿ ವಿದೇಶದಲ್ಲಿ ನೆಲೆಸಿರುವ ವಿರೋಧ ಪಕ್ಷ ಬಾಂಗ್ಲಾದೇಶ್‌ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ)ಯ ನಾಯಕ ತಾರಿಕ್‌ ರೆಹ್ಮಾನ್‌ ಜೀವಾವಧಿ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಈಗಾಗಲೇ ಅವರ ತಾಯಿ ಖಾಲಿದಾ ಜೀಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಢಾಕಾದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೀಗ ಅವರ ಪುತ್ರನೂ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಈ ವರ್ಷದ ಅಂತ್ಯದಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಅದಕ್ಕೂ ಮೊದಲು ವಿರೋಧ ಪಕ್ಷದ ಅಧ್ಯಕ್ಷ ರಹ್ಮಾನ್‌ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. 2008ರಿಂದ ಗಡಿಪಾರಾಗಿ ಲಂಡನ್‌ನಲ್ಲಿರುವ ಅವರು ಸದ್ಯ ದೇಶಕ್ಕೆ ವಾಪಸ್‌ ಬರುವ ಸಾಧ್ಯತೆ ಇಲ್ಲ. ಅವರ ತಾಯಿ ಇನ್ನೂ ಜೈಲಿನಲ್ಲಿದ್ದು ನಾಯಕರೇ ಇಲ್ಲದ ವಿರೋಧ ಪಕ್ಷಗಳನ್ನು ಚುನಾವಣೆಯಲ್ಲಿ ಎದುರಿಸುವ ಶೇಖ್‌ ಹಸೀನಾ ಸಜ್ಜಾಗಿದ್ದಾರೆ.

ಇದೇ ವೇಳೆ ರೆಹ್ಮಾನ್‌ ಅವರಿಗೂ ಗಲ್ಲು ಶಿಕ್ಷೆ ನೀಡುವಂತೆ ಮೇಲಿನ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಬಾಂಗ್ಲಾದೇಶ ಕಾನೂನು ಸಚಿವ ಅನಿಸುಲ್‌ ಹಕ್‌ ಹೇಳಿದ್ದಾರೆ.

ಅದು 2004ರ ದಾಳಿ

2004ರಲ್ಲಿ ಶೇಖ್‌ ಹಸೀನಾ ವಿರೋಧ ಪಕ್ಷದ ನಾಯಕಿಯಾಗಿದ್ದಾಗ ಢಾಕಾದಲ್ಲಿ ಅವರ ಪಕ್ಷ ಅವಾಮಿ ಲೀಗ್‌ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಗ್ರೆನೇಡ್‌ ದಾಳಿ ನಡೆದಿತ್ತು. ದಾಳಿಯಲ್ಲಿ ಕೂದಲೆಳೆ ಅಂತರದಿಂದ ಹಸೀನಾ ಬದುಕುಳಿದಿದ್ದರು. ಅವರ ಸುತ್ತ ಅಭಿಮಾನಿಗಳು ಕೋಟೆ ಕಟ್ಟಿ ಅವರನ್ನು ರಕ್ಷಿಸಿದ್ದರು. ಆದರೆ ಬಾಂಗ್ಲಾದೇಶ ಇತಿಹಾಸದಲ್ಲಿ ರಾಜಕೀಯ ರ್ಯಾಲಿಯೊಂದರ ಮೇಲೆ ನಡೆದ ಈ ಕ್ರೂರ ದಾಳಿಯಲ್ಲಿ ಒಟ್ಟು 20 ಜನರು ಸಾವನ್ನಪ್ಪಿ ನೂರಾರು ಜನರು ಗಾಯಗೊಂಡಿದ್ದರು. ಅವಾಮಿ ಲೀಗ್ ನಾಯಕ ಇವಿ ರೆಹ್ಮಾನ್‌ ಕೂಡ ಈ ದಾಳಿಯಲ್ಲಿ ಮರಣ ಹೊಂದಿದ್ದರು.

ಈ ಪ್ರಕರಣದ ತನಿಖೆ ವೇಳೆ ಇದು ಹಸೀನಾ ಹತ್ಯೆಗೆ ಬಿಎನ್‌ಪಿ ನಾಯಕರು ಹೂಡಿದ ಸಂಚು ಎಂಬುದು ತಿಳಿದು ಬಂದಿತ್ತು. ಈ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಎನ್‌ಪಿ ಮತ್ತು ಜಮಾತ್‌ ಇ ಇಸ್ಲಾಮಿ ಸರಕಾರ ತನಗೆ ಬೇಕಾದವರನ್ನು ರಕ್ಷಣೆ ಮಾಡಲು ತನಿಖೆಯ ದಿಕ್ಕು ತಪ್ಪಿಸುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿತ್ತು. ಆದರೆ ಸರಕಾರ ಬದಲಾಗುತ್ತಲೇ ತನಿಖೆ ಚುರುಕುಗೊಂಡಿತ್ತು.

ಹರ್ಕತ್‌ ಉಲ್‌ ಜಿಹಾದ್‌ ಎಂಬ ಬಂಡುಕೋರ ಸಂಘಟನೆ ಈ ದಾಳಿ ನಡೆಸಿರುವುದು ತನಿಖೆ ವೇಳೆ ತಿಳಿದು ಬಂದಿತ್ತು. ಬಾಂಗ್ಲಾದೇಶದಲ್ಲಿ ಹಲವು ದಾಳಿಗಳನ್ನು ನಡೆಸಿದ ಇತಿಹಾಸ ಈ ಸಂಘಟನೆಗಿದ್ದು ಇದರ ಮುಖ್ಯಸ್ಥ ಅಬ್ದುಲ್‌ ಹನ್ನನ್‌ನ್ನು ಕಳೆದ ವರ್ಷ ಗಲ್ಲಿಗೇರಿಸಲಾಗಿತ್ತು. ಇದೀಗ ಇದೇ ಸಂಘಟನೆ ರಾಜಕೀಯ ಪ್ರೇರಿತವಾಗಿ ಈ ದಾಳಿ ನಡೆಸಿರುವುದಾಗಿ ತೀರ್ಪು ಹೊರ ಬಿದ್ದಿದ್ದು, ಸಂಚು ರೂಪಿಸಿದ 19 ಜನರಿಗೆ ಗಲ್ಲು ಶಿಕ್ಷೆ ನೀಡಲಾಗಿದೆ. ವಿರೋಧ ಪಕ್ಷದ ನಾಯಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.