ಶಬರಿಮಲೆ ಮಹಿಳೆಯರಿಗೆ ಮುಕ್ತ; ಮರುಪರಿಶೀಲನೆ ಅರ್ಜಿ ಸಲ್ಲಿಸದಿರಲು ಕೇರಳ ನಿರ್ಧಾರ
ಸುದ್ದಿ ಸಾರ

ಶಬರಿಮಲೆ ಮಹಿಳೆಯರಿಗೆ ಮುಕ್ತ; ಮರುಪರಿಶೀಲನೆ ಅರ್ಜಿ ಸಲ್ಲಿಸದಿರಲು ಕೇರಳ ನಿರ್ಧಾರ

ಎಲ್ಲಾ ವಯೋಮಾನದ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಅವಕಾಶ ಕೊಡಬೇಕೆಂಬ ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಮರುಪರಿಶೀಲನೆ ಅರ್ಜಿ ಸಲ್ಲಿಸದಿರಲು ಕೇರಳ ಸರ್ಕಾರ ತೀರ್ಮಾನಿಸಿದೆ.

ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೂ ಅವಕಾಶ ಕೊಡಬೇಕು ಎಂಬ ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಕೇರಳ ಸರಕಾರ ಮರುಪರಿಶೀಲನೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಕೇರಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲು ಸೋಮವಾರ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಗೆ ಅಯ್ಯಪ್ಪ ದೇಗುಲದ ಪ್ರಧಾನ ತಂತ್ರಿ ಕರಂತರಾರು ಮೋಹನಾರು ಅವರನ್ನೂ ಆಹ್ವಾನಿಸಲಾಗಿತ್ತು.

ಆದರೆ, ತಾವು ಹಿಂದೆಯೇ ಹೇಳಿದ್ದಂತೆ ಮೋಹನಾರು ಸೋಮವಾರದ ಸಭೆಗೆ ಗೈರಾಗಿದ್ದಾರೆ. ದೇಗುಲದ ವಾರಸುದಾರರಾಗಿರುವ ಪಂದಲಂ ರಾಜ ವಂಶಸ್ಥರೂ ಈ ಸಭೆಯಲ್ಲಿ ಭಾಗವಹಿಸಿಲ್ಲ. ತೀರ್ಪು ಹೊರ ಬಿದ್ದ ಬಳಿಕ ಕೇರಳದಲ್ಲಿ ಮಹಿಳೆಯರನ್ನೇ ಮುಂದಿಟ್ಟುಕೊಂಡು ಧಾರ್ಮಿಕ ಭಾವನೆಗಳ ಹೆಸರಿನಲ್ಲಿ ಹಿಂದೂಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ.

Also read: ಮಹಿಳೆಯರ ಹಣಿಯಲು ಮಹಿಳೆಯರೇ ಗುರಾಣಿ; ಸುಪ್ರೀಂ ತೀರ್ಪಿನ ವಿರುದ್ಧ ಬೀದಿಗಿಳಿದವರು ಯಾರು?

ಸೋಮವಾರ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್‌, “ಶಬರಿಮಲೆ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಹಿಂದೂ ಸಂಘಟನೆಗಳು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನ ನಡೆಸುತ್ತಿವೆ” ಎಂದಿದ್ದಾರೆ.

ಶಬರಿಮಲೆ ವಿಚಾರದ ಬಗ್ಗೆ ಸುಪ್ರೀಂಕೋರ್ಟ್‌ ಸೆಪ್ಟೆಂಬರ್‌ 28ರಂದು ನೀಡಿರುವ ತೀರ್ಪಿನ ವಿರುದ್ಧ ಹಿಂದೂಪರ ಸಂಘಟನೆಗಳು ಸೋಮವಾರ ಸುಪ್ರೀಂಕೋರ್ಟ್‌ಗೆ ಮರುಪರಿಶೀಲನೆ ಅರ್ಜಿ ಸಲ್ಲಿಸಿವೆ. ಇದರ ಬೆನ್ನಲ್ಲೇ ಸರಕಾರದ ನಿಲುವನ್ನು ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದ್ದಾರೆ.

“ಸುಪ್ರೀಂಕೋರ್ಟ್‌ ತೀರ್ಪನ್ನು ಪಾಲಿಸುವುದು ರಾಜ್ಯ ಸರಕಾರದ ಕರ್ತವ್ಯ. ಸುಪ್ರೀಂಕೋರ್ಟ್‌ ತೀರ್ಪನ್ನು ರಾಜ್ಯ ಸರಕಾರ ಜಾರಿಗೆ ತರಲಿದೆ. ಧಾರ್ಮಿಕ ವಿಚಾರಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಹಿಂದೂ ಸಂಘಟನೆಗಳು ಕಾನೂನು- ಸುವ್ಯವಸ್ಥೆಗೆ ಭಂಗ ತರುತ್ತಿವೆ. ಆರ್‌ಎಸ್‌ಎಸ್‌ ಈ ವಿಚಾರದಲ್ಲಿ ಅನಗತ್ಯ ವಿವಾದ ಹುಟ್ಟುಹಾಕುತ್ತಿದೆ” ಎಂದು ವಿಜಯನ್‌ ಹೇಳಿದ್ದಾರೆ.

“ದೇಶದಲ್ಲಿ ಸಾಮಾಜಿಕ ಸುಧಾರಣೆಯ ಸಂದರ್ಭ ಬಂದಿದೆ. ಕೇರಳ ಸರಕಾರ ಸುಧಾರಣೆಯ ಪರವಾಗಿ ಇರಲಿದೆ. ಹೀಗಾಗಿ ನಾವು ನಮ್ಮ ನಿಲುವು ಬದಲಿಸುವುದಿಲ್ಲ. ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವುದಿಲ್ಲ” ಎಂದಿದ್ದಾರೆ.

“ಶಬರಿಮಲೆ ತೀರ್ಪು ಬಂದಾಗ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷದ ಮುಖಂಡರು ಇದು ಐತಿಹಾಸಿಕ ತೀರ್ಪು ಎಂದು ಹೇಳಿದ್ದರು. ಆದರೆ, ಈಗ ಧಾರ್ಮಿಕ ಭಾವನೆಗಳ ರಾಜಕೀಯ ಲಾಭಕ್ಕೆ ಎರಡೂ ಪಕ್ಷಗಳ ಮುಖಂಡರು ಮುಂದಾಗಿದ್ದಾರೆ. ಭಕ್ತರಿಗೆ ಅವರ ಮೂರ್ಖನತ ಆದಷ್ಟು ಬೇಗ ಅರಿವಿಗೆ ಬರಲಿದೆ” ಎಂದು ವಿಜಯನ್ ತಿಳಿಸಿದ್ದಾರೆ.