ರಫೇಲ್ ಡೀಲ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಬಿಐಗೆ ದೂರು
ಸುದ್ದಿ ಸಾರ

ರಫೇಲ್ ಡೀಲ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಬಿಐಗೆ ದೂರು

ಮಾಜಿ ಕೇಂದ್ರ ಸಚಿವರಾದ ಯಶವಂತ್‌ ಸಿನ್ಹಾ ಮತ್ತು ಅರುಣ್‌ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್‌ ಭೂಷಣ್ ರಫೇಲ್‌ ಡೀಲ್‌ ಸಂಬಂಧ ಸಿಬಿಐಗೆ ದೂರು ನೀಡಿದ್ದಾರೆ. 

ಫ್ರಾನ್ಸ್‌ನಿಂದ ಭಾರತ ಖರೀದಿಸಲು ಹೊರಟಿರುವ ರಫೇಲ್‌ ಯುದ್ಧ ವಿಮಾನಗಳ ವಿವಾದ ಸಿಬಿಐ ಅಂಗಳ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಬಿಐಗೆ ದೂರು ನೀಡಲಾಗಿದೆ.

ಮಾಜಿ ಕೇಂದ್ರ ಸಚಿವರಾದ ಯಶವಂತ್‌ ಸಿನ್ಹಾ ಮತ್ತು ಅರುಣ್‌ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್‌ ಭೂಷಣ್ ರಫೇಲ್‌ ಡೀಲ್‌ ಸಂಬಂಧ ಬುಧವಾರ ಸಿಬಿಐಗೆ ದೂರು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ರಿಲಯನ್ಸ್‌ ಗ್ರೂಪ್‌ ಅಧ್ಯಕ್ಷ ಅನಿಲ್‌ ಅಂಬಾನಿ , ಡಸಾಲ್ಟ್‌ ಏವಿಯೇಷನ್‌ ಮುಖ್ಯಸ್ಥ ಎರಿಕ್‌ ಟ್ರಾಪಿಯರ್‌ ವಿರುದ್ಧ ತನಿಖೆ ನಡೆಸುವಂತೆ ಅವರು ಕೋರಿದ್ದಾರೆ.

ದೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಅನಿಲ್‌ ಅಂಬಾನಿ ನಡುವೆ ರಹಸ್ಯ ಒಪ್ಪಂದ ನಡೆದಿದೆ ಎಂದು ಆರೋಪಿಸಲಾಗಿದೆ. “ಪ್ರಧಾನಿ ಮೋದಿ ಅಂಬಾನಿಯನ್ನು ಪಾಲುದಾರನಾಗಿ ಆಯ್ಕೆ ಮಾಡಲು ಡಸಾಲ್ಟ್‌ ಮೇಲೆ ಒತ್ತಡ ಹೇರುವ ಮೂಲಕ ಮುಂದಿನ 40 ವರ್ಷಗಳ ಕಾಲ ರಿಲಯನ್ಸ್‌ ಸಂಸ್ಥೆಗೆ ಅನಾಯಾಸ ಲಾಭ ಮಾಡಿಕೊಟ್ಟಿದ್ದಾರೆ,” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರಿಲಯನ್ಸ್‌ಗೆ ಲಾಭ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್‌ 7(ಎ)(ಬಿ)(ಸಿ) ಮತ್ತು ಸೆಕ್ಷನ್‌ 13(1)(ಡಿ)( ii) ಅಡಿಯಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಇದೇ ವೇಳೆ ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ಲಾಭವನ್ನು ಗಿಟ್ಟಿಸಿಕೊಳ್ಳಲು ಪ್ರಧಾನಿ ಜತೆ ಸಂಚು ರೂಪಿಸಿದ ಎರಿಕ್‌ ಟ್ರಾಪಿಯರ್‌ ಮತ್ತು ಅನಿಲ್‌ ಅಂಬಾನಿಯನ್ನೂ ಅದೇ ಎಫ್‌ಐಆರ್‌ ಅಡಿಯಲ್ಲಿ ತನಿಖೆಗೆ ಒಳಪಡಿಸಬೇಕು ಎಂದು ಅವರುಗಳು ಒತ್ತಾಯಿಸಿದ್ದಾರೆ.

ದೂರಿನಲ್ಲಿ ಅವರುಗಳು ಒಟ್ಟು 3 ಕಾರಣಗಳನ್ನು ಮುಂದಿಟ್ಟಿದ್ದು, ಇವುಗಳ ಕಾರಣಕ್ಕೆ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

1. ಪ್ರಧಾನಿಯಿಂದ ಅಧಿಕಾರ ದುರ್ಬಳಕೆ

36 ರಫೇಲ್‌ ಯುದ್ಧ ವಿಮಾನಗಳ ಖರೀದಿಯನ್ನು ವಾಯು ಸೇನೆಯಾಗಲಿ, ರಕ್ಷಣಾ ಸ್ವಾಧೀನ ಸಮಿತಿಯ ಗಮನಕ್ಕಾಗಲಿ ತರದೆ ಫ್ರಾನ್ಸ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

2. ಅನಿಲ್‌ ಅಂಬಾನಿ ಸಂಸ್ಥೆಗೆ ಲಾಭ ತಂದುಕೊಟ್ಟ ಪ್ರಧಾನಿ

ಅನಿಲ್‌ ಅಂಬಾನಿ ಸಂಸ್ಥೆಗೆ ಕಾಂಟ್ರಾಕ್ಟ್‌ ನೀಡಿದರೆ ಮಾತ್ರ 36 ಯುದ್ಧ ವಿಮಾನಗಳ ಖರೀದಿಯ ಡೀಲ್‌ನ್ನು ಡಸಾಲ್ಟ್‌ಗೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ ಸರಕಾರಕ್ಕೆ ಮತ್ತು ಡಸಾಲ್ಟ್‌ಗೆ ತಿಳಿಸಿದ್ದಾರೆ. ಈ ಮೂಲಕ ಅನಿಲ್‌ ಅಂಬಾನಿ ಸಂಸ್ಥೆಗೆ ಲಾಭ ಮಾಡಿಕೊಟ್ಟಿದ್ದು ಇದು ಅಧಿಕಾರದ ದುರುಪಯೋಗ.

3. ವಿಮಾನದ ಬೆಲೆ ಏರಿಕೆ

36 ವಿಮಾನಗಳ ಖರೀದಿ ಸಂದರ್ಭ ಈ ಹಿಂದೆ ಇದ್ದ ತಲಾ ವಿಮಾನದ ಬೆಲೆಯನ್ನು 715 ಕೋಟಿ ರೂಪಾಯಿಯಿಂದ 1660 ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಈ ಮೂಲಕ ಡಸಾಲ್ಟ್‌ ಮತ್ತು ಅನಿಲ್‌ ಅಂಬಾನಿಯ ಕಂಪನಿಗೆ ಲಾಭ ಮಾಡಿಕೊಟ್ಟಿದ್ದಾರೆ.

ಸಿಬಿಐಗೆ ತನಿಖೆ ನಡೆಸಲು ಇರುವ ಮಿತಿಯನ್ನೂ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ 17(ಎ) ಪ್ರಕಾರ ತನಿಖಾ ಸಂಸ್ಥೆ ಸರಕಾರಿ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸುವ ಮುನ್ನ ಸರಕಾರದ ಒಪ್ಪಿಗೆ ಪಡೆದುಕೊಳ್ಳಬೇಕಿದೆ. ಈ ದೂರಿನ ಪ್ರಕಾರ ಪ್ರಧಾನಿ ವಿರುದ್ಧ ತನಿಖೆ ಮಾಡಲು ಸ್ವತಃ ಪ್ರಧಾನಿಯ ಒಪ್ಪಿಗೆಯನ್ನೇ ಪಡೆಯಬೇಕಾದ ಸಂದಿಗ್ಧ ಪರಿಸ್ಥಿತಿ ಸಿಬಿಐಗೆ ಎದುರಾಗಿದೆ ಎಂಬುದು ನಮಗೆ ತಿಳಿದಿದೆ ಎಂದಿದ್ದಾರೆ. ಆದರೆ ಎರಿಕ್‌ ಟ್ರಾಪಿಯರ್ ಮತ್ತು ಅನಿಲ್‌ ಅಂಬಾನಿ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಮಾಡಲು ಸಿಬಿಐಗೆ ಯಾವುದೇ ಅಡ್ಡಿ ಇರುವುದಿಲ್ಲ. ಆ ಕೆಲಸವನ್ನು ಸಿಬಿಐ ಮಾಡುತ್ತದಾ ಎಂಬುದನ್ನು ಕಾದು ನೋಡಬೇಕಿದೆ.