ಮೈತ್ರಿಕೂಟ ಬಯಸಿದರೆ ನಾನೇ ಪ್ರಧಾನಿ ಅಭ್ಯರ್ಥಿ: ರಾಹುಲ್‌ ಗಾಂಧಿ
ಸುದ್ದಿ ಸಾರ

ಮೈತ್ರಿಕೂಟ ಬಯಸಿದರೆ ನಾನೇ ಪ್ರಧಾನಿ ಅಭ್ಯರ್ಥಿ: ರಾಹುಲ್‌ ಗಾಂಧಿ

“ಲೋಕಸಭಾ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್‌ ಜತೆಗೆ ಸೇರಲಿರುವ ಮೈತ್ರಿಕೂಟದ ಪಕ್ಷಗಳೆಲ್ಲವೂ ಬಯಸಿದರೆ ಪ್ರಧಾನಿ ಅಭ್ಯರ್ಥಿಯಾಗಲು ನಾನು ಸಿದ್ಧ” ಎಂದು ರಾಹುಲ್‌ ಹೇಳಿದ್ದಾರೆ.

“ಸದ್ಯದ ಪರಿಸ್ಥಿತಿಯಲ್ಲಿ ಮುಂದೆ ಏನಾಗಲಿದೆ ಎಂದು ಹೇಳುವುದು ಕಷ್ಟ. ಒಂದು ವೇಳೆ ಮೈತ್ರಿಕೂಟಗಳು ನಾನೇ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಬಯಸಿದರೆ ಅದಕ್ಕೆ ನಾನು ಸಿದ್ಧ” ಎಂದಿದ್ದಾರೆ ರಾಹುಲ್.

ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆ ಆಯೋಜಿಸಿದ್ದ 16ನೇ ನಾಯಕತ್ವ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ರಾಹುಲ್‌, “ರಾಜ್ಯಮಟ್ಟದ ಚುನಾವಣೆಗೂ ಲೋಕಸಭಾ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಕಾಂಗ್ರೆಸ್‌ ಜತೆಗೆ ಇರಲಿದೆ” ಎಂದಿದ್ದಾರೆ.

ವಿಪಕ್ಷಗಳ ಮಹಾಮೈತ್ರಿಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಬುಧವಾರ ಕೊಟ್ಟ ದೊಡ್ಡ ಪೆಟ್ಟಿಗೆ ಮುಲಾಮು ಹಚ್ಚುವ ಕೆಲಸಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂದಾಗಿದ್ದಾರೆ. “ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳಲಿದೆ” ಎಂದು ಹೇಳುವ ಮೂಲಕ ಬಿಎಸ್‌ಪಿ– ಕಾಂಗ್ರೆಸ್ ಸಂಬಂಧ ಇನ್ನೂ ಪೂರ್ತಿಯಾಗಿ ಮುರಿದಿಲ್ಲ ಎಂದು ರಾಹುಲ್‌ ಹೇಳಿದ್ದಾರೆ.

“ಮುಂಬರುವ ಮಧ್ಯಪ್ರದೇಶ, ರಾಜಸ್ತಾನ, ಚತ್ತೀಸ್‌ಗಡ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ಬಿಎಸ್‌ಪಿ ಮೈತ್ರಿ ಕಡಿದುಕೊಂಡಿರುವುದು ಕಾಂಗ್ರೆಸ್‌ ಗೆಲುವಿನ ಮೇಲೆ ಹೆಚ್ಚಿನ ಪರಿಣಾಮ ಬೀರದು” ಎಂದು ರಾಹುಲ್‌ ಹೇಳಿದ್ದಾರೆ.