ಶಾಂತಿ ನೊಬೆಲ್: ಐಸಿಸ್‌ ಲೈಂಗಿಕ ಜೀತದಿಂದ  ಪ್ರಶಸ್ತಿಯವರೆಗೆ ನಡೆದು ಬಂದ ಮುರಾದ್
ಸುದ್ದಿ ಸಾರ

ಶಾಂತಿ ನೊಬೆಲ್: ಐಸಿಸ್‌ ಲೈಂಗಿಕ ಜೀತದಿಂದ ಪ್ರಶಸ್ತಿಯವರೆಗೆ ನಡೆದು ಬಂದ ಮುರಾದ್

ಐಸಿಸ್‌ ಲೈಂಗಿಕ ಜೀತದಿಂದ ಹೊರ ಬಂದ ಮುರಾದ್ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ ಆರಂಭಿಸಿದರು. ಪರಿಣಾಮ ಅವರಿವತ್ತು ನೊಬೆಲ್‌ ಪಾರಿತೋಷಕ ಪಡೆಯುವ ಸಮಯ ಬಂದಿದೆ.

ಆಗಸ್ಟ್‌ 3, 2014. ನಾಡಿಯಾ ಮುರಾದ್‌ ಕುಟುಂಬ ವಾಸವಿದ್ದ ಇರಾಕ್‌ನ ನಗರ ಯಝಿದಿಯ ಮೇಲೆ ಐಸಿಸ್‌ ಉಗ್ರರು ದಾಳಿ ನಡೆಸಿದ್ದರು. ಸುಮಾರು 6500 ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿದ ಐಸಿಸ್‌ ಉಗ್ರರು ಅವರಲ್ಲಿ 5,000 ಜನರನ್ನು ಅದೇ ದಿನ ಕೊಂದು ಹಾಕಿದರು.

“ಸುಮಾರು 8 ತಿಂಗಳು ಅವರು ನಮ್ಮನ್ನು ತಾಯಿ, ಸಹೋದರ ಮತ್ತು ಸಹೋದರಿಯರಿಂದ ದೂರ ಮಾಡಿದರು. ಅದರಲ್ಲಿ ಕೆಲವರನ್ನು ಕೊಂದರು. ಇನ್ನು ಕೆಲವರು ನಾಪತ್ತೆಯಾದರು,” ಎನ್ನುತ್ತಾರೆ ನಾಡಿಯಾ ಮುರಾದ್‌. ಅವರ ತಾಯಿ ಮತ್ತು 6 ಜನ ಸಹೋದರರನ್ನು ಅಂದೇ ಕೊಲ್ಲಲಾಯಿತು. ಮುರಾದ್‌ ಸೇರಿ ಮದುವೆಯಾಗದಿದ್ದ ಹದಿ ಹರಯದ ಹುಡುಗಿಯರನ್ನು ಮಾತ್ರ ಐಸಿಸ್‌ ಉಗ್ರರು ಉಳಿಸಿದ್ದರು. ಅವರನ್ನೆಲ್ಲಾ ಲೈಂಗಿಕ ಜೀತದಾಳುಗಳಾಗಿ ಇಟ್ಟುಕೊಳ್ಳಲಾಯಿತು.

ಮುಂದಿನದು ಇವರ ಪಾಲಿಗೆ ನರಕ ಯಾತನೆ. ಸುಮಾರು 8 ತಿಂಗಳ ಕಾಲ ನೂರಾರು ಐಸಿಸ್‌ ಉಗ್ರರು ತಮ್ಮ ಕಾಮ ತೃಷೆಗಾಗಿ ಇವರನ್ನು ಬಳಸಿಕೊಂಡರು. ಅದು ಮುರಾದ್‌ ತರಹದವರಿಗೆ ನರಕ ಯಾತನೆಯಾಗಿತ್ತು. ಭಯಾನಕ ದಿನಗಳನ್ನು ನೋಡುತ್ತಿದ್ದ ಮುರಾದ್‌ ಆಘಾತಕ್ಕೆ ಒಳಗಾಗಿದ್ದರು. ಅದರಿಂದ ಅವರಿಗೆ ಹೊರ ಬರುವುದೇ ಪ್ರಯಾಸವಾಗಿತ್ತು. ಈ ಆಘಾತದ ನಡುವೆಯೂ ಧೈರ್ಯ ತಂದುಕೊಂಡ ಮುರಾದ್‌ ಸುಮಾರು 8 ತಿಂಗಳ ನಂತರ ದೌರ್ಜನ್ಯದ ಸಂಕೊಲೆಯಿಂದ ತಪ್ಪಿಸಿಕೊಂಡು ಹೊರ ಜಗತ್ತಿಗೆ ಓಡಿ ಬಂದರು.

ಹಾಗೆ ಹೊರ ಬಂದವರೇ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ ಆರಂಭಿಸಿದರು. ಪರಿಣಾಮ ಅವರಿವತ್ತು ನೊಬೆಲ್‌ ಪಾರಿತೋಷಕ ಪಡೆಯುವ ಸಮಯ ಬಂದಿದೆ. ಲೈಂಗಿಕ ಜೀತದಾಳುವಿನಿಂದ ಮುಕ್ತಿ ಪಡೆದು ಅದೇ ಜನರಿಗಾಗಿ ಹೋರಾಡಿದ, ಇಂಥದ್ದೇ ಜೀತದಾಳುಗಳಿಗೆ ಸ್ಫೂರ್ತಿಯ ಕಥೆಯಾದ ಇರಾಕ್‌ನ ನಾಡಿಯಾ ಮುರಾದ್‌ಗೆ ನಾರ್ವೆಯ ನೊಬೆಲ್‌ ಸಮಿತಿ 2018ನೇ ಸಾಲಿನ ಶಾಂತಿ ಪ್ರಶಸ್ತಿ ಘೋಷಿಸಿದೆ.

ಅವರ ಜತೆಗೆ ರಿಪಬ್ಲಿಕ್‌ ಆಫ್‌ ಕಾಂಗೋದ ವೈದ್ಯ ಡೆನಿಸ್‌ ಮುವ್ಚೆಜ್‌ ಕೂಡ ಶಾಂತಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮುವ್ಚೆಜ್‌ ಕೂಡ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತಾ ಬಂದವರು. ಸ್ತ್ರೀರೋಗತಜ್ಞ ಮತ್ತು ಶಸ್ತ್ರಚಿಕಿತ್ಸಕರಾದ ಅವರು ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಸಾವಿರಾರು ಮಹಿಳೆಯರಿಗೆ ಚಿಕಿತ್ಸೆ ನೀಡುತ್ತಾ ತಮ್ಮದೇ ಆದ ರೀತಿಯಲ್ಲಿ ಈ ಪಿಡುಗಿನ ವಿರುದ್ಧ ಹೋರಾಡುತ್ತಾ ಬಂದಿದ್ದಾರೆ.

20 ವರ್ಷಗಳ ಕೆಳಗೆ ಪೂರ್ವ ಕಾಂಗೋದಲ್ಲಿ ‘ಪಂಝಿ ಆಸ್ಪತ್ರೆ’ ಕಟ್ಟಿದ ಅವರು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದವರಿಗೆ ಚಿಕಿತ್ಸೆ ನೀಡಿದ್ದಲ್ಲದೆ, ಯದ್ಧದಲ್ಲಿ ಮತ್ತು ಸಶಸ್ತ್ರ ಸಂಘರ್ಷದಲ್ಲಿ ಲೈಂಗಿಕ ಹಿಂಸೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋರಾಟವನ್ನು ಕೂಡ ಸಂಘಟಿಸಿದ್ದಾರೆ.

ಇದೀಗ ಇವರುಗಳ ಧೈರ್ಯ, ಸಹಾನುಭೂತಿ ಮತ್ತು ಮಾನವೀಯತೆಗೆ ವಿಶ್ವದ ಅತ್ಯಂತ ಶ್ರೀಮಂತ ಮತ್ತು ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿ ಒಲಿದು ಬಂದಿದೆ. ಇಬ್ಬರೂ ವಿಜೇತರು, “ತಮ್ಮ ವೈಯಕ್ತಿಕ ಭದ್ರತೆಯನ್ನು ಅಪಾಯದಲ್ಲಿಟ್ಟುಕೊಂಡು ಧೈರ್ಯದಿಂದ ಯುದ್ಧ ಅಪರಾಧಗಳನ್ನು ಎದುರಿಸಿ ಮತ್ತು ಬಲಿಪಶುಗಳಿಗೆ ನ್ಯಾಯಕ್ಕಾಗಿ ಹೋರಾಡಿದ್ದಾರೆ,” ಎಂದು ನೊಬೆಲ್‌ ಸಮಿತಿಯ ರಯಿಸ್ ಆಂಡರ್ಸನ್‌ ಪ್ರಶಸ್ತಿ ಘೋಷಣೆ ವೇಳೆ ಮುವ್ಚೆಜ್‌ ಮತ್ತು ಮುರಾದ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅಂದ ಹಾಗೆ ಈ ಬಾರಿ ಒಟ್ಟು 331 ಜನರು ಮತ್ತು ಸಂಸ್ಥೆಗಳ ಹೆಸರು ನೊಬೆಲ್‌ ಶಾಂತಿ ಪ್ರಶಸ್ತಿ ಆಯ್ಕೆ ಸಮಿತಿಯ ಮುಂದಿತ್ತು. ಅವರಲ್ಲಿ ಇವರಿಬ್ಬರು ಅಪರೂಪದ ವ್ಯಕ್ತಿಗಳು ಪ್ರಶಸ್ತಿಯ ಗೌರವಕ್ಕೆ ಪಾತ್ರಾಗಿದ್ದಾರೆ.