ಪೆಟ್ರೋಲ್‌-ಡೀಸೆಲ್‌ ಬಳಕೆದಾರರಿಗೆ ತುಸು ನೆಮ್ಮದಿ; ₹2.5 ಬೆಲೆ ಇಳಿಸಿದ ಕೇಂದ್ರ ಸರಕಾರ
ಸುದ್ದಿ ಸಾರ

ಪೆಟ್ರೋಲ್‌-ಡೀಸೆಲ್‌ ಬಳಕೆದಾರರಿಗೆ ತುಸು ನೆಮ್ಮದಿ; ₹2.5 ಬೆಲೆ ಇಳಿಸಿದ ಕೇಂದ್ರ ಸರಕಾರ

ತಕ್ಷಣದಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರಕಾರ 1.50 ರೂಪಾಯಿಯಷ್ಟು ಇಳಿಕೆ ಮಾಡಿದೆ. ಇನ್ನುಳಿದ ಒಂದು ರೂಪಾಯಿ ನಷ್ಟವನ್ನು ತೈಲ ಮಾರುಕಟ್ಟೆ ಕಂಪನಿಗಳು ಭರಿಸಲಿವೆ.

ಕೊನೆಗೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಕೇಂದ್ರ ಸರಕಾರ ತುಸು ನೆಮ್ಮದಿ ನೀಡಿದೆ. ತೈಲದ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರಕಾರ ಇಳಿಕೆ ಮಾಡಿದ್ದು ಒಟ್ಟಾರೆ ಪೆಟ್ರೋಲ್‌-ಡೀಸೆಲ್‌ ದರದಲ್ಲಿ 2.50 ರೂಪಾಯಿ ಇಳಿಕೆಯಾಗಲಿದೆ.

ತಕ್ಷಣದಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರಕಾರ 1.50 ರೂಪಾಯಿಯಷ್ಟು ಇಳಿಕೆ ಮಾಡಿದೆ. ಇನ್ನುಳಿದ ಒಂದು ರೂಪಾಯಿ ನಷ್ಟವನ್ನು ತೈಲ ಮಾರುಕಟ್ಟೆ ಕಂಪನಿಗಳು ಭರಿಸಲಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಘೋಷಿಸಿದ್ದಾರೆ. ಅಬಕಾರಿ ಸುಂಕವನ್ನು ಇಳಿಕೆ ಮಾಡಿರುವುದರಿಂದ ಕೇಂದ್ರ ಸರಕಾರಕ್ಕೆ ವಾರ್ಷಿಕ 10,500 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಅವರು ವಿವರಿಸಿದ್ದಾರೆ.

ಇದೀಗ ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಇಳಿಕೆ ಮಾಡಿರುವುದರಿಂದ ರಾಜ್ಯ ಸರಕಾರಗಳೂ ಇದೇ ಕ್ರಮಕ್ಕೆ ಮುಂದಾಗಬೇಕು ಎಂದು ಅರುಣ್ ಜೇಟ್ಲಿ ಒತ್ತಾಯಿಸಿದ್ದಾರೆ. ಮತ್ತು ಈ ಸಂಬಂಧ ರಾಜ್ಯಗಳಿಗೆ ಪತ್ರ ಬರೆಯುತ್ತಿರುವುದಾಗಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಪೆಟ್ರೋಲ್‌-ಡೀಸೆಲ್‌ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಳೆಯನ್ನು ಇಳಿಕೆ ಮಾಡಬೇಕು ಎಂದು ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಭಾರತ್‌ ಬಂದ್‌ಗೂ ದೇಶ ಸಾಕ್ಷಿಯಾಗಿತ್ತು. ಇತ್ತೀಚೆಗೆ ದೆಹಲಿಗೆ ಪಾದಯಾತ್ರೆ ಬಂದಿದ್ದ ರೈತರು ಕೂಡ ಡೀಸೆಲ್‌ ಬೆಲೆ ಇಳಿಕೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದರು. ಇವೆಲ್ಲದರ ಒಟ್ಟು ಪರಿಣಾಮ ಎಂಬಂತೆ ತಡವಾಗಿಯಾದರೂ ಅಬಕಾರಿ ಸುಂಕವನ್ನು ಕೇಂದ್ರ ಸರಕಾರ ಸ್ವಲ್ಪ ಇಳಿಕೆ ಮಾಡಿದೆ.

ಅಂದಹಾಗೆ ಗುರುವಾರ ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ದರ 84.72 ರೂಪಾಯಿ ಇದ್ದರೆ, ಡೀಸೆಲ್‌ ದರ 75.89 ರೂಪಾಯಿ ಇದೆ. ಇದರಲ್ಲಿ 2.50 ರೂಪಾಯಿಗಳ ಇಳಿಕೆಯನ್ನು ನಾಳೆಯಿಂದ ನಿರೀಕ್ಷಿಸಬಹುದಾಗಿದೆ.