‘ಸಮಸ್ಯೆ ಮರೆಮಾಚಲು ಪೊರಕೆ ಪ್ರಚಾರ ತಂತ್ರ’: ಕೇಂದ್ರದ ವಿರುದ್ಧ ಬಿಜೆಪಿ ಸಂಸದೆ ಸಾವಿತ್ರಿ ಫುಲೆ ಕಿಡಿ
ಸುದ್ದಿ ಸಾರ

‘ಸಮಸ್ಯೆ ಮರೆಮಾಚಲು ಪೊರಕೆ ಪ್ರಚಾರ ತಂತ್ರ’: ಕೇಂದ್ರದ ವಿರುದ್ಧ ಬಿಜೆಪಿ ಸಂಸದೆ ಸಾವಿತ್ರಿ ಫುಲೆ ಕಿಡಿ

“ಬೀದಿಯಲ್ಲಿ ಪೊರಕೆ ಹಿಡಿದು ಕ್ಯಾಮೆರಾಗಳಿಗೆ ಫೋಸ್‌ ಕೊಡುವುದು ಪ್ರಚಾರದ ತಂತ್ರ. ಯಾರು ಮೀಸಲಾತಿ ಹಾಗೂ ಸಂವಿಧಾನವನ್ನು ವಿರೋಧಿಸುತ್ತಿದ್ದಾರೋ ಅವರು ಕಸ ಗುಡಿಸಲಿ...

ಕೇಂದ್ರ ಸರಕಾರದ ವಿರುದ್ಧ ಟೀಕೆಯ ಪ್ರಹಾರ ನಡೆಸಿರುವ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ, “ಸಾರ್ವಜನಿಕವಾಗಿ ಪೊರಕೆ ಹಿಡಿದು ಕಸ ಗುಡಿಸುವುದು ಕೇವಲ ಪ್ರಚಾರದ ತಂತ್ರ. ದೇಶದ ಗಂಭೀರ ಸಮಸ್ಯೆಗಳನ್ನು ಜನರಿಂದ ಮರೆಮಾಚಲು ಸ್ವಚ್ಛತಾ ಅಭಿಯಾನವನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ” ಎಂದಿದ್ದಾರೆ.

ಗಾಂಧಿ ಜಯಂತಿಯ ಮುನ್ನಾದಿನವಾದ ಸೋಮವಾರ ಜಿಂಗಾಘಾಟ್‌ ಬಳಿ ನಡೆಯಲಿದ್ದ ಸ್ವಚ್ಛತಾ ಕಾರ್ಯಕ್ಕೆ ಫುಲೆ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಅವರು, “ಬೀದಿಯಲ್ಲಿ ಪೊರಕೆ ಹಿಡಿದು ಕ್ಯಾಮೆರಾಗಳಿಗೆ ಫೋಸ್‌ ಕೊಡುವುದು ಪ್ರಚಾರದ ತಂತ್ರ. ಯಾರು ಮೀಸಲಾತಿ ಹಾಗೂ ಸಂವಿಧಾನವನ್ನು ವಿರೋಧಿಸುತ್ತಿದ್ದಾರೋ ಅವರು ಕಸ ಗುಡಿಸಲಿ” ಎಂದಿದ್ದಾರೆ.

“‘ಬಹುಜನ ಸಮಾಜ’ದ ಜನರು ಪೊರಕೆ ಹಿಡಿದು ಸ್ವಚ್ಛತೆಯ ಕೆಲಸದಲ್ಲಿ ಭಾಗುವ ದಿನಗಳು ಬಹುಬೇಗ ಅಂತ್ಯ ಕಾಣಲಿವೆ. ಪರಿಶಿಷ್ಟ ಜಾತಿ ಹಾಗೂ ಬಡ ಮುಸ್ಲಿಂ ಜನರಿಗೆ ಸರಿಯಾದ ಉದ್ಯೋಗ, ಜೀವನ ಭದ್ರತೆ ಹಾಗೂ ಸಾಮಾಜಿಕ ಘನತೆಯ ಅಗತ್ಯವಿದೆ” ಎಂದಿದ್ದಾರೆ.

“ಪೊರಕೆ ಹಿಡಿದು ಫೋಸ್ ಕೊಟ್ಟು ಪ್ರಚಾರ ಪಡೆಯುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ನಾನು ಪೊರಕೆ ಹಿಡಿಯಲಿಲ್ಲ. ಸ್ವಚ್ಛತಾ ಕಾರ್ಯಕ್ಕಾಗಿ ಸರಕಾರ ಅಧಿಕಾರಿಗಳನ್ನೇ ನೇಮಿಸಿರುವಾಗ ನಾನು ಪೊರಕೆ ಹಿಡಿದು ಫೋಸ್‌ ಕೊಡುವ ಅಗತ್ಯವೇನಿದೆ” ಎಂದು ಫುಲೆ ಮಂಗಳವಾರ ಸುದ್ದಿಗಾರರೊಂದಿಗೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

“ನಾನು ಮೀಸಲು ಕ್ಷೇತ್ರದಿಂದ ಆರಿಸಿಬಂದಿರುವ ಜನಪ್ರತಿನಿಧಿ. ನಾನು ಪೊರಕೆ ಹಿಡಿದ ಮಾತ್ರಕ್ಕೆ ಆ ಪ್ರದೇಶ ಸ್ವಚ್ಛವಾಗುತ್ತದೆಯೇ? ಸಮಾಜದ ಸ್ವಚ್ಛತೆಗಿಂತ ಮೊದಲು ನಿಜವಾಗಿ ಕಾರ್ಯಾಂಗ ಮತ್ತು ಶಾಸಕಾಂಗ ಮನಸ್ಸು ಸ್ವಚ್ಛವಾಗಬೇಕು” ಎಂದಿದ್ದಾರೆ.

“ಪೊರಕೆ ಹಿಡಿದು ಫೋಸ್‌ ಕೊಡುವುದಕ್ಕಿಂತ ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದ ಅಧಿಕಾರಿಗಳು ಚರಂಡಿಗೆ ಇಳಿದು ಶುಚಿಗೊಳಿಸಿ ತಮ್ಮ ಸ್ವಚ್ಛತೆಯ ಬಗೆಗಿನ ಬದ್ಧತೆ ತೋರಿಸಲಿ. ಇಂದು ದೇಶದಲ್ಲಿ ಸ್ವಚ್ಛತೆ ಎಂಬುದು ಇದ್ದರೆ ಅದಕ್ಕೆ ‘ಬಹುಜನ ಸಮಾಜ’ದ ಜನರೇ ಕಾರಣ. ಈಗ ಅಗತ್ಯವಿರುವುದು ಪೊರಕೆ ಹಿಡಿದು ಫೋಸ್‌ ಕೊಡುವುದಲ್ಲ. ಬದಲಾಗಿ ಸಮಾನ ಅವಕಾಶ, ಸಮಾನತೆಯ ಹಕ್ಕನ್ನು ‘ಬಹುಜನ ಸಮಾಜ’ದ ಜನರಿಗೆ ಕೊಡಬೇಕಿದೆ” ಎಂದು ಫುಲೆ ಅಭಿಪ್ರಾಯಪಟ್ಟಿದ್ದಾರೆ.