ಮತ್ತೆ ರಾಮಚಂದ್ರಾಪುರ ಮಠದ ಆಡಳಿತಕ್ಕೆ ಗೋಕರ್ಣ: ಸುಪ್ರೀಂ ಆದೇಶ
ಸುದ್ದಿ ಸಾರ

ಮತ್ತೆ ರಾಮಚಂದ್ರಾಪುರ ಮಠದ ಆಡಳಿತಕ್ಕೆ ಗೋಕರ್ಣ: ಸುಪ್ರೀಂ ಆದೇಶ

ಸೆಪ್ಟೆಂಬರ್ 19ರಂದು ಹೈಕೋರ್ಟ್‌ ಆದೇಶದ ಮೇರೆಗೆ ಗೋಕರ್ಣ ದೇವಸ್ಥಾನದ ಆಡಳಿತವನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಎ.ಎಸ್‌. ನಕುಲ್‌ ಅವರಿದ್ದ ಮೇಲುಸ್ತುವಾರಿ ಸಮಿತಿ ತನ್ನ ವಶಕ್ಕೆ ಪಡೆದುಕೊಂಡಿತ್ತು.

ವಿವಾದಿತ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಮತ್ತೆ ಹೊಸನಗರದ ರಾಮಚಂದ್ರಾಪುರ ಮಠದ ಸುಪರ್ದಿಗೆ ಬಂದಿದೆ. ದೇವಸ್ಥಾನವನ್ನು ಮಠಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ಮತ್ತು ಎ.ಎಂ. ಖನ್ವಿಲ್ಕರ್‌ ಅವರಿದ್ದ ಪೀಠ ಆದೇಶ ನೀಡಿದೆ.

ಸೆಪ್ಟೆಂಬರ್ 19ರಂದು ಹೈಕೋರ್ಟ್‌ ಆದೇಶದ ಮೇರೆಗೆ ಗೋಕರ್ಣ ದೇವಸ್ಥಾನದ ಆಡಳಿತವನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಎ. ಎಸ್‌. ನಕುಲ್‌ ಅವರಿದ್ದ ಮೇಲುಸ್ತುವಾರಿ ಸಮಿತಿ ತನ್ನ ವಶಕ್ಕೆ ಪಡೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ರಾಮಚಂದ್ರಾಪುರ ಮಠದ ವಕೀಲರು ಸುಪ್ರೀಂ ಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್‌, ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿರುವುದರಿಂದ ನ್ಯಾಯಾಂಗ ನಿಂದನೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿತು.

ಆದರೆ, ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ನೀಡುವ ಮೊದಲು ಇದ್ದ ಸ್ಥಿತಿ, ಪೂಜಾ ವಿಧಾನಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸರ್ಕಾರ, ಮಠ ಮತ್ತು ದೇಗುಲದ ವಿಶ್ವಸ್ಥ ಮಂಡಳಿಗೆ ಕೋರ್ಟ್‌ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ನವೆಂಬರ್‌ಗೆ ಮುಂದೂಡಿದೆ.

ಇದಕ್ಕೂ ಮೊದಲು ಆಗಸ್ಟ್‌ 10ರಂದು ರಾಜ್ಯ ಹೈಕೋರ್ಟ್‌, 2008ರಲ್ಲಿ ಅಂದಿನ ಯಡಿಯೂರಪ್ಪ ಸರಕಾರ ದೇವಸ್ಥಾನವನ್ನು ಮಠಕ್ಕೆ ನೀಡಿದ್ದ ತೀರ್ಮಾನವನ್ನು ರದ್ದುಗೊಳಿಸಿತ್ತು. ಮತ್ತು ದೇವಸ್ಥಾನವನ್ನು ಮತ್ತೆ ಸರಕಾರದ ವಶಕ್ಕೆ ನೀಡಬೇಕೆಂದು ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಮಠದ ವಕೀಲರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ಬಗ್ಗೆ ಸೆಪ್ಟೆಂಬರ್‌ 7ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಹೈಕೋರ್ಟ್‌ ತೀರ್ಪಿಗೆ ತಡೆ ನೀಡಲು ನಿರಾಕರಿಸಿತ್ತು. ಈ ಸಂದರ್ಭದಲ್ಲಿ ಯಾರ ಪರ ತೀರ್ಪು ಎಂಬ ಗೊಂದಲ ನಿರ್ಮಾಣವಾಗಿತ್ತು. ಕೊನೆಗೆ ಜಿಲ್ಲಾಧಿಕಾರಿ ದೇವಸ್ಥಾನವನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಮತ್ತೆ ಜಿಲ್ಲಾಧಿಕಾರಿಗಳು ದೇವಸ್ಥಾನವನ್ನು ಮಠಕ್ಕೆ ವಾಪಸ್‌ ನೀಡಬೇಕಾಗಿದೆ.

ಸುಪ್ರೀಂ ಕೋರ್ಟ್‌ ಆದೇಶದ ನಂತರ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಮಠದ ವಕೀಲ ಅರುಣ ಶ್ಯಾಂ, “ಸುಪ್ರೀಂ ಕೋರ್ಟ್‌ ಆದೇಶವನ್ನು ತಿರುಚಿದ್ದ ಸರಕಾರ ದೇವಾಲಯದ ಆಡಳಿತವನ್ನು ವಶಕ್ಕೆ ಪಡೆಯಲು ಪ್ರಯತ್ನ ನಡೆಸಿತ್ತು. ಇದೀಗ ಸುಪ್ರೀಂ ಕೋರ್ಟ್‌ ಆದೇಶದಿಂದಾಗಿ ತಕ್ಷಣ ದೇವಸ್ಥಾನದ ಆಡಳಿತ ಮಠದ ಸುಪರ್ದಿಗೆ ನೀಡುವಂತಾಗಿದೆ,” ಎಂದಿದ್ದಾರೆ.

Also read: ‘ಕ್ಯಾತೆ, ಎಚ್ಚರಿಕೆ, ಹಸ್ತಾಂತರ’: ರಾಘವೇಶ್ವರ ಸ್ವಾಮಿ ತೆಕ್ಕೆಯಿಂದ ಜಾರಿದ ಗೋಕರ್ಣ...