samachara
www.samachara.com
ಸಿಜೆಐ ಪ್ರಮಾಣ ಪತ್ರಕ್ಕೆ  ಸ್ವಂತ ಪೆನ್‌ನಿಂದಲೇ ಸಹಿ ಹಾಕಿದ ರಂಜನ್‌ ಗೊಗೋಯಿ
ಸುದ್ದಿ ಸಾರ

ಸಿಜೆಐ ಪ್ರಮಾಣ ಪತ್ರಕ್ಕೆ ಸ್ವಂತ ಪೆನ್‌ನಿಂದಲೇ ಸಹಿ ಹಾಕಿದ ರಂಜನ್‌ ಗೊಗೋಯಿ

ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರಂಜನ್‌ ಗೊಗೋಯಿ ಪ್ರಮಾಣ ಪತ್ರಕ್ಕೆ ಸಹಿ ಹಾಕಲು ತಮ್ಮ ಸ್ವಂತ ಪೆನ್‌ ಬಳಸಿದರು.

ಸುಪ್ರೀಂಕೋರ್ಟ್‌ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್‌ ಗೊಗೋಯಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಷ್ಟ್ರಪತಿ ಭವನದ ದರ್ಬಾರ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಗೊಗೋಯಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರತಿಜ್ಞಾ ವಿಧಿ ಸ್ವೀಕಾರದ ನಂತರ ಪ್ರಮಾಣ ಪತ್ರಕ್ಕೆ ಸಹಿ ಹಾಕುವ ಕುರ್ಚಿಗೆ ಬಂದು ಕುಳಿತ ಗೊಗೋಯಿ ಅವರಿಗೆ ರಾಷ್ಟ್ರಪತಿ ಭವನದ ಅಧಿಕಾರಿಗಳು ಪೆನ್‌ ನೀಡಲು ಮುಂದಾದರು. ಈ ವೇಳೆ ಅಧಿಕಾರಿ ನೀಡಿದ ಪೆನ್‌ ಅನ್ನು ನಯವಾಗಿಯೇ ನಿರಾಕರಿಸಿದ ಗೊಗೋಯಿ ತಮ್ಮ ಪೆನ್‌ನಿಂದಲೇ ಸಹಿ ಹಾಕಿದರು. ಬಳಿಕ ಗೊಗೋಯಿ ತಮ್ಮ ತಾಯಿಯ ಬಳಿ ತೆರಳಿ ಅವರ ಪಾದಕ್ಕೆ ನಮಿಸಿದರು.

Also read: ‘ಪರ್ಫೆಕ್ಟ್ ಮ್ಯಾನ್’: ಯಾರಿವರು ಸಿಜೆಐ ಹುದ್ದೆಗೇರಿದ ನ್ಯಾ. ಗೊಗೋಯಿ?

ದೀಪಕ್‌ ಮಿಶ್ರಾ ಬಳಿಕ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರುತ್ತಿರುವ ಗೊಗೋಯಿ ಅವರ ಅಧಿಕಾರಾವಧಿ 13 ತಿಂಗಳು ಇರಲಿದೆ. 2019ರ ನವೆಂಬರ್‌ 17ಕ್ಕೆ ಗೊಗೋಯಿ ನಿವೃತ್ತರಾಗಲಿದ್ದಾರೆ.

ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ತಮ್ಮ ನಂತರ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಗೊಗೋಯಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಮಿಶ್ರಾ ಶಿಫಾರಸ್ಸಿಗೆ ರಾಷ್ಟ್ರಪತಿ ಕೋವಿಂದ್‌ ಅಂಕಿತ ಹಾಕಿದ್ದರು.