ವಿಪಕ್ಷಗಳ ಒಗ್ಗಟ್ಟಿಗೆ ಹಿನ್ನಡೆ; ರಾಜಸ್ತಾನ, ಎಂ.ಪಿ.ಯಲ್ಲಿ ಕಾಂಗ್ರೆಸ್‌ ಜತೆ ಬಿಎಸ್‌ಪಿ ಮೈತ್ರಿ ಇಲ್ಲ
ಸುದ್ದಿ ಸಾರ

ವಿಪಕ್ಷಗಳ ಒಗ್ಗಟ್ಟಿಗೆ ಹಿನ್ನಡೆ; ರಾಜಸ್ತಾನ, ಎಂ.ಪಿ.ಯಲ್ಲಿ ಕಾಂಗ್ರೆಸ್‌ ಜತೆ ಬಿಎಸ್‌ಪಿ ಮೈತ್ರಿ ಇಲ್ಲ

“ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದಕ್ಕಿಂತ ಬಿಎಸ್‌ಪಿಯನ್ನು ಮುಗಿಸುದರಲ್ಲೇ ಕಾಂಗ್ರೆಸ್‌ ಹೆಚ್ಚು ಆಸಕ್ತಿ ವಹಿಸಿದೆ” ಎಂದು ಮಾಯಾವತಿ ಆರೋಪಿಸಿದ್ದಾರೆ.

ಮುಂಬರುವ ರಾಜಸ್ತಾನ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ. ಈ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಮಹಾಮೈತ್ರಿಗೆ ಹಿನ್ನಡೆಯಾದಂತಾಗಿದೆ.

“ಈ ಎರಡೂ ರಾಜ್ಯಗಳಲ್ಲಿ ಬಿಎಸ್‌ಪಿ ಏಕಾಂಗಿಯಾಗಿ ಇಲ್ಲವೇ ಸ್ಥಳೀಯ ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳಲಿದೆ. ಆದರೆ, ಕಾಂಗ್ರೆಸ್‌ ಜತೆಗಿನ ಮೈತ್ರಿಯಿಂದ ದೂರ ಇರಲಿದೆ” ಎಂದು ಬುಧವಾರ ಮಾಯಾವತಿ ಘೋಷಿಸಿದ್ದಾರೆ.

“ಕಾಂಗ್ರೆಸ್‌ ನಮ್ಮ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದಕ್ಕಿಂತ ಬಿಎಸ್‌ಪಿಯನ್ನು ಮುಗಿಸುದರಲ್ಲೇ ಕಾಂಗ್ರೆಸ್‌ ಹೆಚ್ಚು ಆಸಕ್ತಿ ವಹಿಸಿದೆ” ಎಂದು ಮಾಯಾವತಿ ಕಾಂಗ್ರೆಸ್‌ ವಿರುದ್ಧ ಆರೋಪಿಸಿದ್ದಾರೆ.

“ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್‌ ಜತೆಗೆ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಚತ್ತೀಸ್‌ಗಡದಲ್ಲೂ ನಮ್ಮ ಮೈತ್ರಿ ಪ್ರಾದೇಶಿಕ ಪಕ್ಷದೊಂದಿಗಿದೆ. ಈಗ ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸಲು ಮುಂದಾಗಿದ್ದೇವೆ. ಅಗತ್ಯಬಿದ್ದರೆ ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳುತ್ತೇವೆಯೇ ಹೊರತು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಕೈ ಹಿಡಿಯುವುದಿಲ್ಲ” ಎಂದಿದ್ದಾರೆ.