ನಿಲ್ಲದ ಎಸ್‌ಬಿಐ ಷರತ್ತುಗಳ ಸರಣಿ, ಎಟಿಎಂ ಬಳಕೆದಾರರಿಗೆ ಹೊಸ ಮೂಗು ದಾರ
ಸುದ್ದಿ ಸಾರ

ನಿಲ್ಲದ ಎಸ್‌ಬಿಐ ಷರತ್ತುಗಳ ಸರಣಿ, ಎಟಿಎಂ ಬಳಕೆದಾರರಿಗೆ ಹೊಸ ಮೂಗು ದಾರ

ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನಲೆಯಲ್ಲಿ ಸಾಂಭಾವ್ಯ ವಂಚನೆಯನ್ನು ತಡೆಗಟ್ಟಲು ಎಟಿಎಂ ವಿತ್‌ ಡ್ರಾ ಮಿತಿಯನ್ನು 20 ಸಾವಿರ ರೂಪಾಯಿಗೆ ಇಳಿಸುತ್ತಿರುವುದಾಗಿ ಎಸ್‌ಬಿಐ ಹೇಳಿದೆ.

ಅನಾಣ್ಯೀಕರಣದ ನಂತರ ದೇಶದಲ್ಲಿ ಬ್ಯಾಂಕಿಂಗ್‌ ನಿಯಮಗಳ ಕಾರಣಕ್ಕೆ ಸುದ್ದಿಯಾಗಿದ್ದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ). ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇರಬೇಕು, ಇಲ್ಲದಿದ್ದಲ್ಲಿ ದಂಡ ಎಂದಿದ್ದ ಬ್ಯಾಂಕ್‌ ಲಾಭಕ್ಕಿಂತ ಹೆಚ್ಚು ಹಣವನ್ನು ದಂಡದಿಂದಲೇ ಸಂಪಾದಿಸಿತ್ತು. ಆ ನಂತರ ಬ್ಯಾಂಕ್‌ ಖಾತೆ ನಿಷ್ಕ್ರಿಯಗೊಳಿಸಲೂ ದುಬಾರಿ ಶುಲ್ಕ ವಿಧಿಸಿತ್ತು. ಇದೀಗ ಎಟಿಎಂ ಕಿಂಡಿಗೂ ಬ್ಯಾಂಕ್‌ ಕೈ ಹಾಕಿದೆ.

ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನಲೆಯಲ್ಲಿ ಸಾಂಭಾವ್ಯ ವಂಚನೆಯನ್ನು ತಡೆಗಟ್ಟಲು ಎಟಿಎಂ ವಿತ್‌ ಡ್ರಾ ಮಿತಿಯನ್ನು 20 ಸಾವಿರ ರೂಪಾಯಿಗೆ ಇಳಿಸುತ್ತಿರುವುದಾಗಿ ಎಸ್‌ಬಿಐ ಹೇಳಿದೆ. ಸದ್ಯ ಪ್ರತಿನಿತ್ಯ ಎಟಿಎಂನಿಂದ 40 ಸಾವಿರ ರೂಪಾಯಿ ಪಡೆದುಕೊಳ್ಳಲು ಅವಕಾಶವಿತ್ತು. ಎಟಿಎಂ ವ್ಯವಹಾರದಲ್ಲಾಗುತ್ತಿರುವ ವಂಚನೆಗೆ ಸಂಬಂಧಿಸದಂತೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮತ್ತು ಕ್ಯಾಶ್‌ಲೆಸ್‌ ವ್ಯವಹಾರವನ್ನು ಉತ್ತೇಜಿಸುವ ದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಬ್ಯಾಂಕ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಇದು ದೇಶದಲ್ಲಿ ಬಿಗುಡಾಯಿಸಿರುವ ಹಣದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಾಗಿಸುವ ಸಾಧ್ಯತೆ ಇದೆ. ಈಗಾಗಲೇ ಹೆಚ್ಚಿನ ಎಟಿಎಂಗಳಲ್ಲಿ 2,000 ರೂಪಾಯಿಯ ಪಿಂಕ್‌ ನೋಟು ಮಾತ್ರ ಹೊರ ಬರುತ್ತಿದ್ದು ಜನರು ಚಿಲ್ಲರೆಗಾಗಿ ಒದ್ದಾಡುತ್ತಿದ್ದಾರೆ. ಇದರ ಜತೆಗೆ ಆನ್‌ಲೈನ್‌ ವ್ಯವಹಾರದಲ್ಲಿ ಹೊಸ ಹೊಸ ಸಮಸ್ಯೆಗಳು ತಲೆ ದೋರುತ್ತಿದ್ದು ಅವುಗಳನ್ನು ಪರಿಹರಿಸಲು ಜನರು ಪರದಾಡುತ್ತಿದ್ದಾರೆ.

ಇಂಥಹದ್ದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದಲ್ಲಿ 59,598 ಎಟಿಎಂಗಳ ಬೃಹತ್‌ ಜಾಲವನ್ನು ಹೊಂದಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಈ ತೀರ್ಮಾನ ತೆಗೆದುಕೊಂಡಿದೆ. ದೇಶದಲ್ಲಿ ಬರೋಬ್ಬರಿ 28.9 ಕೋಟಿ ಎಸ್‌ಬಿಐ ಎಟಿಎಂ ಕಾರ್ಡ್‌ಗಳು ಚಾಲ್ತಿಯಲ್ಲಿವೆ. ಇಷ್ಟೊಂದು ದೊಡ್ಡ ಸಂಖ್ಯೆಯ ಗ್ರಾಹಕರಿಗೆ ಬ್ಯಾಂಕ್‌ನ ಈ ಹೊಸ ನೀತಿ ಅನ್ವಯವಾಗಲಿದ್ದು ಮತ್ತಷ್ಟು ಮತ್ತಷ್ಟು ತಲೆನೋವು ತಂದಿದೆ.