ನರ್ಮದೆ ಶುದ್ಧಿಗೆ ಗಂಗಾ ಮಾದರಿ; ಪುನಶ್ಚೇತನಕ್ಕೆ ಪ್ರತ್ಯೇಕ ಇಲಾಖೆ ಬೇಕೆಂದ ‘ಕಂಪ್ಯೂಟರ್‌ ಬಾಬಾ’!
ಸುದ್ದಿ ಸಾರ

ನರ್ಮದೆ ಶುದ್ಧಿಗೆ ಗಂಗಾ ಮಾದರಿ; ಪುನಶ್ಚೇತನಕ್ಕೆ ಪ್ರತ್ಯೇಕ ಇಲಾಖೆ ಬೇಕೆಂದ ‘ಕಂಪ್ಯೂಟರ್‌ ಬಾಬಾ’!

ಗಂಗಾ ಪುನಶ್ಚೇತನಕ್ಕಾಗಿ ಇಲಾಖೆ ರಚಿಸಿ ಮೀಸಲಿಟ್ಟಿದ್ದ 20 ಸಾವಿರ ಕೋಟಿ ರೂಪಾಯಿ ಬಹುತೇಕ ಖಾಲಿಯಾಗಿದೆ. ಆದರೆ, ಗಂಗೆ ಇನ್ನೂ ಶುದ್ಧವಾಗಿಲ್ಲ. ಇದರ ಮಧ್ಯೆ ನರ್ಮದಾ ನದಿಗೆ ಪ್ರತ್ಯೇಕ ಇಲಾಖೆಯ ಪ್ರಸ್ತಾವ ಇಟ್ಟಿದ್ದಾರೆ ಕಂಪ್ಯೂಟರ್‌ ಬಾಬಾ.

ಗಂಗಾ ನದಿ ಪುನಶ್ಚೇತನಕ್ಕಾಗಿ ಕೇಂದ್ರ ಸರಕಾರ ಒಂದು ಇಲಾಖೆ ರಚಿಸಿ, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದರೂ ಇನ್ನೂ ಗಂಗಾ ನದಿ ಶುದ್ಧವಾಗಿಲ್ಲ. ಇದರ ಬೆನ್ನಲ್ಲೇ ಗಂಗಾ ನದಿ ಪುನಶ್ಚೇತನದ ಮಾದರಿಯಲ್ಲಿ ನರ್ಮದಾ ನದಿಯ ಪುನಶ್ಚೇತನಕ್ಕೂ ಪ್ರತ್ಯೇಕ ಇಲಾಖೆ ರಚಿಸಬೇಕು ಎಂದು ಮಧ್ಯಪ್ರದೇಶದ ಸಚಿವ ಕಂಪ್ಯೂಟರ್‌ ಬಾಬಾ ಹೇಳಿದ್ದಾರೆ.

ಗಂಗಾ ನದಿಯ ಶುದ್ಧೀಕರಣ ಹಾಗೂ ಪುನಶ್ಚೇತನಕ್ಕಾಗಿ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಪ್ರತ್ಯೇಕ ಇಲಾಖೆಯನ್ನೇ ರಚಿಸಿತ್ತು. ಗಂಗಾ ಪುನಶ್ಚೇತನ ಇಲಾಖೆಯ ಜತೆಗೆ ‘ನಮಾಮಿ ಗಂಗೆ’ ಹೆಸರಿನಲ್ಲಿ 2015ರಲ್ಲಿ ಜಾರಿಗೆ ಬಂದ ಯೋಜನೆಗಾಗಿ 20 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಈ ಹಣದಲ್ಲಿ ಈಗಾಗಲೇ 19,630 ಕೋಟಿ ರೂಪಾಯಿ ಖರ್ಚಾಗಿದೆ. ಆದರೆ, ಗಂಗೆ ಇನ್ನೂ ಶುದ್ಧಿಯಾಗಿಲ್ಲ.

Also read: ಗಂಗಾ ನದಿ ನೀರು ಆರೋಗ್ಯಕ್ಕೆ ಹಾನಿಕರ; ಫಲಕೊಡದ ‘ನಮಾಮಿ ಗಂಗೆ’

“ನರ್ಮದಾ ನದಿಯ ಸ್ಥಿತಿ ಚೆನ್ನಾಗಿಲ್ಲ. ಹೀಗಾಗಿ ನರ್ಮದಾ ನದಿಯ ಪುನಶ್ಚೇತನಕ್ಕಾಗಿ ಪ್ರತ್ಯೇಕ ಇಲಾಖೆ ರಚಿಸುವುದು ಅಗತ್ಯ” ಎಂದು ಕಂಪ್ಯೂಟರ್‌ ಬಾಬಾ ಹೇಳಿದ್ದಾರೆ. ಈ ಕಂಪ್ಯೂಟರ್‌ ಬಾಬಾ ಸಚಿವರಾಗುವ ಮುನ್ನಾ ನರ್ಮದಾ ಪುನಶ್ಚೇತನ ಸಮಿತಿಯ ಸದಸ್ಯರಾಗಿದ್ದರು. ಈಗ ಗಂಗೆಯ ಮಾದರಿಯಲ್ಲಿ ನರ್ಮದೆಯನ್ನೂ ಶುದ್ಧಗೊಳಿಸುವ ಮಾದರಿಯನ್ನು ಪ್ರಸ್ತಾಪಿಸಿದ್ದಾರೆ.

ಗಂಗೆಯಂತೆ ನರ್ಮದೆಯನ್ನೂ ಶುದ್ಧಗೊಳಿಸಲು ಹೊಸ ಇಲಾಖೆಯ ಪ್ರಸ್ತಾಪವನ್ನೇನೋ ಕಂಪ್ಯೂಟರ್‌ ಬಾಬಾ ಇಟ್ಟಿದ್ದಾರೆ. ಆದರೆ, ನಾಲ್ಕು ವರ್ಷ ಕಳೆದರೂ ಇನ್ನೂ ಗಂಗೆಯ ಶುದ್ಧೀಕರಣವೇ ಮುಗಿದಿಲ್ಲ. ಅಲ್ಲದೆ, ಗಂಗೆಯ ಒಡಲು ಸೇರುವ ಕೊಳಚೆ ನೀರಿನ ಶುದ್ಧೀಕರಣ ಪ್ರಕ್ರಿಯೆ ಇನ್ನೂ ಸಮರ್ಪಕವಾಗಿಲ್ಲ.

ಅಲ್ಲದೆ ಗಂಗಾ ನದಿಯ ನೀರು ಕುಡಿಯಲು ಯೋಗ್ಯವಾಗಿಲ್ಲ, ಗಂಗೆಯ ನೀರಿನಲ್ಲಿ ಎಫ್‌ಸಿ ಬ್ಯಾಕ್ಟೀರಿಯಾ ಮಟ್ಟ ಹಲವು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಹೇಳಿತ್ತು.

ಗಂಗೆಗಾಗಿ ಪ್ರತ್ಯೇಕ ಇಲಾಖೆ ಹಾಗೂ 20 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದರೂ ಗಂಗೆ ನೀರು ಶುದ್ಧವಾಗಿಲ್ಲ. ಹೀಗಿರುವಾಗ ಗಂಗೆಯ ಮಾದರಿಯನ್ನು ನರ್ಮದೆಗೂ ಅನ್ವಯಿಸಲು ಹೊರಟಿರುವ ಕಂಪ್ಯೂಟರ್‌ ಬಾಬಾ ತಲೆಯೊಳಗೆ ಯಾವ ‘ದುರಾಲೋಚನೆ’ ಇದೆಯೋ ಗೊತ್ತಿಲ್ಲ!