ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ, ಸುನಾಮಿ; 400ಕ್ಕೂ ಹೆಚ್ಚು ಸಾವು
ಸುದ್ದಿ ಸಾರ

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ, ಸುನಾಮಿ; 400ಕ್ಕೂ ಹೆಚ್ಚು ಸಾವು

ಶುಕ್ರವಾರ ಸಂಜೆಯಿಂದ ಬೀಚ್‌ ಸಿಟಿ ಪಾಲುವಿನಲ್ಲಿ ಬೀಚ್‌ ಫೆಸ್ಟಿವಲ್‌ಗಾಗಿ ನೂರಾರು ಜನರು ತೀರದಲ್ಲಿ ನೆರೆದಿದ್ದರು. ಇದೇ ಸಂದರ್ಭದಲ್ಲಿ ಸುನಾಮಿ ಬಂದಿದ್ದರಿಂದ ಇವರ ಪರಿಸ್ಥಿತಿ ಏನಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಶುಕ್ರವಾರ ಸಂಜೆ ಇಂಡೋನೇಷ್ಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಅದರಿಂದ ಹುಟ್ಟಿಕೊಂಡ ಸುನಾಮಿ 400ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಇನ್ನೂ ನೂರಾರು ಜನರು ನಾಪತ್ತೆಯಾಗಿದ್ದು ಭೂಕಂಪ ಪೀಡಿತ ದೇಶ ನರಕ ಸದೃಶವಾಗಿದೆ.

ಶುಕ್ರವಾರ ಸಂಜೆ ಇಂಡೋನೇಷ್ಯಾದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಪಾಲು ನಗರದಿಂದ 77 ಕಿಲೋಮೀಟರ್‌ ದೂರದಲ್ಲಿ ಭೂಕಂಪದ ಕೇಂದ್ರವಿತ್ತು. ಕಂಪನದ ಬೆನ್ನಿಗೆ ಸುಮಾರು 3.5 ಲಕ್ಷ ಜನರಿರುವ ಪಾಲು ನಗರಕ್ಕೆ ಸುನಾಮಿಯ ಅಲೆಗಳು ಬಂದು ಅಪ್ಪಳಿಸಿದ್ದವು. ಹಲವು ಮನೆಗಳು ಭೂಕಂಪದ ತೀವ್ರತೆಗೆ ಧರಶಾಯಿಯಾಗಿದ್ದರೆ, ಸುನಾಮಿ ತೀರ ಪ್ರದೇಶವನ್ನು ನಾಶಗೊಳಿಸಿದೆ. ಶನಿವಾರದ ವೇಳೆಗೆ ರಾಷ್ಟ್ರೀಯ ವಿಕೋಪ ಸಂಸ್ಥೆಯ ಅಧಿಕಾರಿಗಳು ಅಧಿಕೃತವಾಗಿ 384 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಆದರೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಶುಕ್ರವಾರ ಸಂಜೆಯಿಂದ ಬೀಚ್‌ ಸಿಟಿ ಪಾಲುವಿನಲ್ಲಿ ಬೀಚ್‌ ಫೆಸ್ಟಿವಲ್‌ಗಾಗಿ ನೂರಾರು ಜನರು ತೀರದಲ್ಲಿ ನೆರೆದಿದ್ದರು. ಇದೇ ಸಂದರ್ಭದಲ್ಲಿ ಸುನಾಮಿ ಬಂದಿದ್ದರಿಂದ ಇವರ ಪರಿಸ್ಥಿತಿ ಏನಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ನಗರದಲ್ಲಿರುವ ಆಸ್ಪತ್ರೆಗಳು ರೋಗಿಗಳಿಂದ ತುಂಬಿದ್ದು ಗಾಯಾಳುಗಳಿಗೆ ಆಕಾಶದ ಕೆಳಗೆಯೇ ಚಿಕಿತ್ಸೆ ನೀಡಲಾಗುತ್ತಿದೆ.

‘ಭೀಕರ ಭೂಕಂಪದ ಬೆನ್ನಿಗೆ ಹುಟ್ಟಿಕೊಂಡ ಸುನಾಮಿ ಕಾರು, ಮನೆ, ವಸ್ತುಗಳನ್ನು ಕೊಚ್ಚಿಕೊಂಡು ಹೋಗಿದೆ. ಈ ಸಂದರ್ಭದಲ್ಲಿ ಕೆಲವರು ಆರು ಅಡಿವರೆಗೆ ಮರಗಳನ್ನು ಹತ್ತಿ ಬಚಾವಾಗಿದ್ದಾರೆ’ ಎಂದು ವಿಕೋಪ ಕೇಂದ್ರದ ವಕ್ತಾರ ಸುತೊಪಿ ಪುರ್ವೊ ನುಗ್ರೋಗೋ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗಂಟೆಗೆ ಸುಮಾರು 800 ಕಿಲೋಮೀಟರ್‌ ವೇಗದಲ್ಲಿ ನುಗ್ಗಿದ ಸುನಾಮಿಯ ಅಲೆಗಳು ನಗರವನ್ನೇ ನಾಶಗೊಳಿಸಿದೆ ಎಂದವರು ವಿವರಿಸಿದ್ದಾರೆ.

ಶುಕ್ರವಾರದ ಭೂಕಂಪದ ಕಥೆ ಹೀಗಾದರೆ ಶನಿವಾರವೂ ಪಾಲು ನಗರದಲ್ಲಿ ಕಂಪನಗಳು ಕಾಣಿಸಿಕೊಂಡಿದ್ದು ಮೊದಲೇ ಆಘಾತದಲ್ಲಿರುವ ಜನರನ್ನು ಮತ್ತಷ್ಟು ಬೆಚ್ಚಿ ಬೀಳಿಸಿದೆ. ಹಾಗೆ ನೋಡಿದರೆ ಸುನಾಮಿ ಮತ್ತು ಭೂಕಂಪ ಎನ್ನುವುದು ಇಂಡೋನೇಷ್ಯಾಗೆ ಹೊಸತಲ್ಲ. ಇಲ್ಲಿನ ಭೂಮಿಯ ಅಡಿಯಲ್ಲಿ ಶಿಲಾ ವಲಯಗಳಲ್ಲಿ ಬಿರುಕುಗಳಿದ್ದು ಇವುಗಳ ಚಲನೆ ಆಗಾಗ ಭೂಕಂಪಕ್ಕೆ ಕಾರಣವಾಗುತ್ತಿರುತ್ತದೆ. ಸಮುದ್ರದ ಆಳದಲ್ಲಿ ಈ ರೀತಿ ಭೂಕಂಪವಾದಾಗ ಸುನಾಮಿಯ ಅಲೆಗಳು ಏಳುತ್ತವೆ. 2004ರಲ್ಲಿ ಇದೇ ರೀತಿ ಪ್ರಬಲ 9.1 ತೀವ್ರತೆಯ ಭೂಕಂಪ ಇಲ್ಲಿನ ಸುಮಾತ್ರಾ ದ್ವೀಪದಲ್ಲಿ ಸಂಭವಿಸಿತ್ತು. ಇದರಲ್ಲಿ ಸುಮಾರು 2.27 ಲಕ್ಷ ಜನರು ಸಾವನ್ನಪ್ಪಿದ್ದರು.