ಮುಗಿದ ಲೋಕಲ್‌ ರೆಸಾರ್ಟ್‌ ರಾಜಕಾರಣ; ಬಿಬಿಎಂಪಿಯಲ್ಲಿ ‘ಸಮ್ಮಿಶ್ರ’ ಮೈತ್ರಿ ಮುಂದುವರಿಕೆ
ಸುದ್ದಿ ಸಾರ

ಮುಗಿದ ಲೋಕಲ್‌ ರೆಸಾರ್ಟ್‌ ರಾಜಕಾರಣ; ಬಿಬಿಎಂಪಿಯಲ್ಲಿ ‘ಸಮ್ಮಿಶ್ರ’ ಮೈತ್ರಿ ಮುಂದುವರಿಕೆ

ಬಿಬಿಎಂಪಿಯಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಮುಂದುವರಿದಿದ್ದು ಕಾಂಗ್ರೆಸ್‌ನ ಗಂಗಾಂಬಿಕೆ ಮೇಯರ್‌ ಆಗಿ ಹಾಗೂ ಜೆಡಿಎಸ್‌ನ ರಮೀಳಾ ಉಮಾಶಂಕರ್‌ ಉಪಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ರಾಜ್ಯದ ರೆಸಾರ್ಟ್ ರಾಜಕಾರಣ ವಿಧಾನಸೌಧದಿಂದ ಬಿಬಿಎಂಪಿ ಕಡೆಗೆ ತಿರುಗುವಂತೆ ಮಾಡಿದ್ದ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆ ಕೊನೆಗೂ ಮುಗಿದಿದೆ. ಕಾಂಗ್ರೆಸ್‌ನ ಗಂಗಾಂಬಿಕಾ ಮೇಯರ್‌ ಆಗಿ ಹಾಗೂ ಜೆಡಿಎಸ್‌ನ ಆರ್‌. ರಮಿಳಾ ಉಮಾಶಂಕರ್ ಉಪ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ಮೇಯರ್‌ ಸ್ಥಾನಕ್ಕಾಗಿ ಶೋಭಾ ಆಂಜನಪ್ಪ ಹಾಗೂ ಉಪ ಮೇಯರ್‌ ಸ್ಥಾನಕ್ಕೆ ಪ್ರತಿಭಾ ಧನರಾಜ್‌ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ, ಚುನಾವಣಾ ಪ್ರಕ್ರಿಯೆ ಮುಗಿಯುವ ಮುನ್ನವೇ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿ ಹೊರ ನಡೆದ ಕಾರಣ ಈ ಇಬ್ಬರ ಪರವಾಗಿ ಒಂದು ಮತವೂ ಬೀಳಲಿಲ್ಲ. ಇವರಿಗೆ ವಿರುದ್ಧವಾಗಿ 130 ಮತಗಳು ಚಲಾವಣೆಯಾದವು.

ಅಂತಿಮವಾಗಿ ಗಂಗಾಂಬಿಕೆ ಹಾಗೂ ರಮಿಳಾ ಅವರ ಆಯ್ಕೆಯನ್ನು ಬೆಂಗಳೂರು ವಲಯದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್‌ ಘೋಷಿಸಿದರು. ಪಕ್ಷೇತರ ಐದು ಮಂದಿ ಸದಸ್ಯರನ್ನು ಬಿಜೆಪಿ ಸೆಳೆಯಬಹುದೆಂಬ ಕಾರಣಕ್ಕೆ ಅವರನ್ನು ಕಾಂಗ್ರೆಸ್ ಶಾಸಕ ಸೋಮಶೇಖರ್‌ ನೇತೃತ್ವದಲ್ಲಿ ರಾಮನಗರದ ಈಗಲ್‌ಟನ್‌ ರೆಸಾರ್ಟ್‌ನಲ್ಲಿರಿಸಲಾಗಿತ್ತು.

ಚುನಾವಣೆ ಪ್ರಕ್ರಿಯೆ ಕಾಂಗ್ರೆಸ್ ಪರವಾಗಿ ನಡೆಯುತ್ತಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಚುನಾವಣೆ ಪ್ರಕ್ರಿಯೆಯ ಮಧ್ಯೆಯೇ ಸಭೆಯಿಂದ ಹೊರ ನಡೆದರು. ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಮೇಯರ್‌ ಹಾಗೂ ಜೆಡಿಎಸ್‌ ಉಪಮೇಯರ್ ಸ್ಥಾನ ಪಡೆಯುವ ಮೂಲಕ ಬೆಂಗಳೂರಿನ ಸ್ಥಳೀಯ ಆಡಳಿತದಲ್ಲಿ ಸಮ್ಮಿಶ್ರ ಮೈತ್ರಿ ಮುಂದುವರಿದಿದೆ.