‘ಮಸೀದಿ ಮುಸ್ಲಿಂ ಧರ್ಮದ ಅವಿಭಾಜ್ಯ ಅಂಗವಲ್ಲ’: ನೆನಪಿಸಿದ ಸುಪ್ರಿಂ ಕೋರ್ಟ್‌
ಸುದ್ದಿ ಸಾರ

‘ಮಸೀದಿ ಮುಸ್ಲಿಂ ಧರ್ಮದ ಅವಿಭಾಜ್ಯ ಅಂಗವಲ್ಲ’: ನೆನಪಿಸಿದ ಸುಪ್ರಿಂ ಕೋರ್ಟ್‌

ಈ ತೀರ್ಪಿನ ಮೂಲಕ ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ವಿಚಾರಣೆಯನ್ನು ಅಕ್ಟೋಬರ್‌ 29ರಿಂದ ಆರಂಭಿಸಲು ಹಾದಿ ಸುಗಮವಾಗಿದೆ.

‘ಅಯೋಧ್ಯೆಯಲ್ಲಿನ ಮಸೀದಿ ಮುಸ್ಲಿಂ ಧರ್ಮದ ಅವಿಭಾಜ್ಯ ಅಂಗವಲ್ಲ’ ಎಂಬುದನ್ನು ಸುಪ್ರೀಂ ಕೋರ್ಟ್‌ ಪುನರುಚ್ಛರಿಸಿದೆ. ಅಯೋಧ್ಯೆ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದೆ.

1994ರ ಡಾ. ಇಸ್ಮಾಯಿಲ್‌ ಫಾರೂಕಿ ತೀರ್ಪು ಎಂದು ಕರೆಯಲ್ಪಡುವ ಐದು ಜನ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪಿನಲ್ಲಿ ‘ಮಸೀದಿ ಮುಸ್ಲಿಂ ಧರ್ಮದ ಅವಿಭಾಜ್ಯ ಅಂಗವಲ್ಲ’ ಎಂದು ಹೇಳಲಾಗಿತ್ತು. ಇದರ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 1994ರ ತೀರ್ಪನ್ನು 2:1 ಬಹುಮತದಲ್ಲಿ ಎತ್ತಿ ಹಿಡಿದಿದೆ. ಜತೆಗೆ ಇದರ ಪರಾಮರ್ಶೆ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಈ ತೀರ್ಪಿನ ಮೂಲಕ ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ವಿಚಾರಣೆಯನ್ನು ಅಕ್ಟೋಬರ್‌ 29ರಿಂದ ಆರಂಭಿಸಲು ಹಾದಿ ಸುಗಮವಾಗಿದೆ. ಮೂವರು ನ್ಯಾಯಮೂರ್ತಿಗಳ ಪೀಠವೇ ಅಯೋಧ್ಯೆ ವಿವಾದದ ವಿಚಾರಣೆಯನ್ನು ನಡೆಸಲಿದೆ.

ಇಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ವಾದವನ್ನು ಓದಿದ ನ್ಯಾಯಮೂರ್ತಿ ಅಶೋಕ್‌ ಭೂಷಣ್, ‘ಐದು ಜನ ನ್ಯಾಯಮೂರ್ತಿಗಳ ಪೀಠ 1994ರಲ್ಲಿ ನೀಡಿದ ತೀರ್ಪಿನ ಸಂದರ್ಭವನ್ನು ಪೀಠ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ನ್ಯಾ. ಅಬ್ದುಲ್‌ ನಜೀರ್‌, ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗ ಹೌದೋ ಅಲ್ಲವೋ ಎನ್ನುವುದರ ಬಗ್ಗೆ ವಿವರವಾದ ವಿಚಾರಣೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಇದನ್ನು ವಿಸ್ತರಿತ ಪೀಠಕ್ಕೆ ವರ್ಗಾಯಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಉಳಿದಿಬ್ಬರು ನ್ಯಾಯಮೂರ್ತಿಗಳು 1994ರ ತೀರ್ಪಿನ ಪರಾಮರ್ಷೆ ಅಗತ್ಯವಿಲ್ಲ ಎಂಬ ಆದೇಶವನ್ನು ನೀಡಿದರು.

ಯಾಕೆ ಹೀಗೊಂದು ಆದೇಶ?

2010ರಲ್ಲಿ ಅಲಹಾಬಾದ್‌ ನ್ಯಾಯಾಲಯ 2.77 ಎಕರೆಗಳ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಾಗವನ್ನು ಮೂರು ಭಾಗಗಳಾಗಿ ವಿಭಾಗಿಸಬೇಕು ಎಂಬ ಆದೇಶ ನೀಡಿತ್ತು. ಸುನ್ನಿ ವಕ್ಫ್‌ ಮಂಡಳಿ, ನಿರ್ಮೋಹಿ ಅಖಾರಾ ಮತ್ತು ರಾಮ್‌ ಲಲ್ಲಾಗೆ ಸಮಾನವಾಗಿ ಈ ಭೂಮಿಯನ್ನು ಹಂಚಿಕೆ ಮಾಡುವಂತೆ 2:1 ಬಹುಮತದ ಆದೇಶವನ್ನು ನೀಡಿತ್ತು.

ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಇಂದು ಈ ತೀರ್ಪು ನೀಡಿದೆ. ಆಯೋಧ್ಯೆ ರಾಮ ಜನ್ಮಭೂಮಿ ವಿವಾದದ ವಿಚಾರಣೆಗೆ ಈ ತೀರ್ಪು ಹಾದಿ ಸುಗಮಗೊಳಿಸಿದ್ದು, ಇದೇ ಅಕ್ಟೋಬರ್‌ 29ರಿಂದ ವಿಚಾರಣೆ ಆರಂಭವಾಗಲಿದೆ.