‘ಚೋರ್‌ ಪಿಎಂ ಚುಪ್‌ ಹೈ’ ಟ್ವೀಟ್‌; ರಮ್ಯಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
ಸುದ್ದಿ ಸಾರ

‘ಚೋರ್‌ ಪಿಎಂ ಚುಪ್‌ ಹೈ’ ಟ್ವೀಟ್‌; ರಮ್ಯಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಟ್ವಿಟರ್‌ನಲ್ಲಿ ‘ಪ್ರಧಾನಿ ಕಳ್ಳ’ ಎಂದು ಕರೆದ ಆರೋಪದ ಮೇಲೆ ರಮ್ಯಾ ವಿರುದ್ಧ ಉತ್ತರ ಪ್ರದೇಶದ ಲಖನೌನಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ‘ಕಳ್ಳ’ ಎಂದ ಆರೋಪದ ಮೇಲೆ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಹಿಂದಿಯಲ್ಲಿ ‘ಚೋರ್‌’ ಎಂದು ಮೋದಿ ಹಣೆಯ ಮೇಲೆ ಬರೆಯಲಾಗಿದ್ದ ಫೋಟೋದ ಜತೆಗೆ ‘ಚೋರ್‌ ಪಿಎಂ ಚುಪ್‌ ಹೈ’ (ಕಳ್ಳ ಪ್ರಧಾನಿ ಸುಮ್ಮನಿದ್ದಾರೆ) ಎಂದು ರಮ್ಯಾ ಸೋಮವಾರ ಟ್ವೀಟ್‌ ಮಾಡಿದ್ದರು.

ಪ್ರಧಾನಿಯನ್ನು ಕಳ್ಳ ಎಂದು ಕರೆದಿರುವುದು ಅಪರಾಧ ಎಂದು ಲಖನೌ ಮೂಲದ ವಕೀಲ ಸಯ್ಯದ್‌ ರಿಜ್ವಾನ್‌ ಅಹ್ಮದ್‌ ಮಂಗಳವಾರ ಗೋಮತಿನಗರ ಠಾಣೆಗೆ ದೂರು ನೀಡಿದ್ದರು.

ಸಯ್ಯದ್‌ ನೀಡಿರುವ ದೂರನ್ನು ಸ್ವೀಕರಿಸಿರುವ ಪೊಲೀಸರು ರಮ್ಯಾ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 124ಎ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಸೆಕ್ಷನ್‌ 67ರ ಪ್ರಕರಣ ದಾಖಲಾಗಿದೆ.

ಕಾನೂನು ಹೇಳುವುದೇನು?

ಐಪಿಸಿ ಸೆಕ್ಷನ್‌ 124ಎ: “ಕಾನೂನಾತ್ಮಕವಾಗಿ ಅಧಿಕಾರಕ್ಕೆ ಬಂದಿರುವ ಸರಕಾರದ ವಿರುದ್ಧ ಮಾತಿನ ಮೂಲಕ ಅಥವಾ ಬರಹದ ಮೂಲಕ ಅಥವಾ ಯಾವುದೇ ರೀತಿಯ ಸಂಕೇತದ ಮೂಲಕ ಅಸಮಾಧಾನದ ನಿಂದನೆ ಮಾಡುವುದು ದೇಶದ್ರೋಹದ ಅಪರಾಧ” ಎನ್ನುತ್ತದೆ ಐಪಿಸಿ ಸೆಕ್ಷನ್‌ 124ಎ. ಈ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೆ, ಇದು ಜಾಮೀನುರಹಿತ ಅಪರಾಧ. ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ವಾರಂಟ್‌ ಇಲ್ಲದೆ ಬಂಧಿಸಿ, ನ್ಯಾಯಾಲಯದ ಅನುಮತಿ ಇಲ್ಲದೆ ತನಿಖೆ ನಡೆಸಬಹುದು.
ಐಟಿ ಕಾಯ್ದೆ ಸೆಕ್ಷನ್‌ 67: ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 67 ಪ್ರಕಾರ, “ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಅಶ್ಲೀಲ ವಿಷಯಗಳನ್ನು ಪ್ರಕಟಿಸುವುದು ಅಥವಾ ಹಂಚುವುದು ಅಪರಾಧ”. ಈ ಅಪರಾಧಕ್ಕಾಗಿ ಗರಿಷ್ಠ 5 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದು.

ಈ ದೂರು ಮಾತ್ರವಲ್ಲದೆ ವಕೀಲ ವಿಭೋರ್‌ ಆನಂದ್‌ ಎಂಬುವರು, ರಮ್ಯಾ ಆಕ್ಷೇಪಾರ್ಹ ಟ್ವೀಟ್‌ ತೆಗೆದು ಹಾಕದಿದ್ದರೆ ಅವರ ವಿರುದ್ಧ 10 ಸಾವಿರ ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿಕೊಂಡಿದ್ದಾರೆ. ಮೊಕದ್ದಮೆ ನಡೆಸುವ ಖರ್ಚಿಗಾಗಿ ಧನಸಹಾಯ ಮಾಡಬೇಕೆಂದು ಕ್ರೌಡ್‌ ಕ್ಯಾಷ್‌ ಆನ್‌ಲೈನ್‌ ನೆರವು ತಾಣದಲ್ಲಿ ಆನಂದ್‌ ಮನವಿ ಮಾಡಿದ್ದಾರೆ.

ರಮ್ಯಾ ಟ್ವೀಟ್‌ ಬಗ್ಗೆ ಆಕ್ಷೇಪಿಸಿರುವ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ, ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಇಂದಿರಾಗಾಂಧಿ, ಜವಾಹರ್‌ಲಾಲ್‌ ನೆಹರೂ ಅವರನ್ನು ಅವಹೇಳನ ಮಾಡುವಂಥ ಹಲವು ಪೋಸ್ಟರ್‌ಗಳನ್ನು ಹಾಕುತ್ತಿದ್ದಾರೆ.