ಕಾಶ್ಮೀರ: ಉಗ್ರರಿಗೆ ಬೆದರಿದ ಪೊಲೀಸರು, 4 ದಿನದಲ್ಲಿ 40  ರಾಜೀನಾಮೆ
ಸುದ್ದಿ ಸಾರ

ಕಾಶ್ಮೀರ: ಉಗ್ರರಿಗೆ ಬೆದರಿದ ಪೊಲೀಸರು, 4 ದಿನದಲ್ಲಿ 40 ರಾಜೀನಾಮೆ

ಭದ್ರತಾ ಪಡೆಗಳಿಗೆ ಜೀವಸೆಲೆಯಾಗಿರುವ ಅಮೂಲ್ಯ ಗುಪ್ತಚರ ಮಾಹಿತಿಗಳನ್ನು ಪೂರೈಸುತ್ತಿದ್ದ ಎಸ್‌ಪಿಒಗಳಲ್ಲೇ ಉಗ್ರರ ಬಗ್ಗೆ ಭಯ ಕಾಣಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ.

ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಪೊಲೀಸ್ ಅಧಿಕಾರಿಗಳನ್ನು ಹಿಜ್ಬುಲ್ಲಾ ಮುಜಾಹಿದ್ದೀನ್ ಉಗ್ರರು ಶುಕ್ರವಾರ ಹತ್ಯೆ ಮಾಡಿದ್ದರು. ‘ರಾಜೀನಾಮೆ ನೀಡಿ ಇಲ್ಲವೇ ಸತ್ತು ಹೋಗಿ’ ಎಂಬ ಬೆದರಿಕೆ ಹಾಕಿದ ಕೆಲವೇ ದಿನಗಳಲ್ಲಿ ಇವರನ್ನು ಅಪಹರಣ ನಡೆಸಿ ಕೊಲೆ ಮಾಡಲಾಗಿತ್ತು. ಈ ಘಟನೆ ತಳಮಟ್ಟದಲ್ಲಿ ಪರಿಣಾಮ ಬೀರುತ್ತಿದ್ದು ಇದೀಗ 40 ಪೊಲೀಸರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಶುಕ್ರವಾರ ಪೊಲೀಸರ ಹತ್ಯೆ ಬೆನ್ನಿಗೆ ವಿಶೇಷ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿದ ವಿಡಿಯೋಗಳು ಹರಿದಾಡಿದ್ದವು. ಆದರೆ, ಈ ವಿಡಿಯೋವನ್ನು ಜಮ್ಮು ಮತ್ತು ಕಾಶ್ಮೀರ ಸರಕಾರ ತಳ್ಳಿ ಹಾಕಿತ್ತು. ಇದೀಗ ಮಂಗಳವಾರ ವಿಶೇಷ ಪೊಲೀಸ್‌ ಅಧಿಕಾರಿಗಳು ರಾಜೀನಾಮೆ ನೀಡಿರುವುದನ್ನು ಸರಕಾರ ಒಪ್ಪಿಕೊಂಡಿದೆ.

ಶುಕ್ರವಾರದಿಂದ ಮಂಗಳವಾರ ಸಂಜೆವರೆಗೆ ಸುಮಾರು 40 ವಿಶೇಷ ಪೊಲೀಸ್‌ ಅಧಿಕಾರಿಗಳು ರಾಜೀನಾಮೆ ನೀಡಿರುವುದು ಬೆಳಕಿಗೆ ಬಂದಿದೆ. ಆದರೆ, “ರಾಜ್ಯದಲ್ಲಿ ಒಟ್ಟು 30,000 ವಿಶೇಷ ಪೊಲೀಸ್‌ ಅಧಿಕಾರಿಗಳಿದ್ದಾರೆ. ರಾಜೀನಾಮೆ ನೀಡಿದವರ ಸಂಖ್ಯೆಗೆ ಹೋಲಿಸಿದರೆ ಇದು ತೀರಾ ಕನಿಷ್ಠ,” ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬಿವಿಆರ್‌ ಸುಬ್ರಮಣಿಯಂ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಮೂವರು ವಿಶೇಷ ಪೊಲೀಸ್‌ ಅಧಿಕಾರಿ (ಎಸ್‌ಪಿಒ) ಗಳನ್ನು ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್‌ ಜಿಲ್ಲೆಯಲ್ಲಿ ಮನೆಯಿಂದ ಹೊರಗೆ ಎಳೆದು ಅಪಹರಣ ನಡೆಸಿ ಹತ್ಯೆ ಮಾಡಲಾಗಿತ್ತು. ಹತ್ಯೆಗೂ ಕೆಲವು ದಿನ ಮೊದಲ ಒಂದೋ ರಾಜೀನಾಮೆ ನೀಡಿ ಇಲ್ಲವೇ ಸಾವನ್ನಪ್ಪಿ ಎಂಬ ಬೆದರಿಕೆಯನ್ನು ಉಗ್ರರು ಪೊಲೀಸರಿಗೆ ನೀಡಿದ್ದರು. ಹೀಗಾಗಿ ಪೊಲೀಸರ ಸಾವಿನ ಬೆನ್ನಿಗೆ ಎಸ್‌ಪಿಒಗಳ ರಾಜೀನಾಮೆಯ ವಿಡಿಯೋಗಳು ಹರಿದಾಡಿದ್ದವು. ಆದರೆ ಇದನ್ನು ತಳ್ಳಿ ಹಾಕಿದ್ದ ಗೃಹ ಸಚಿವಾಲಯ, ‘ಇದೆಲ್ಲಾ ಸುಳ್ಳು. ಇದು ಹಿಜ್ಬುಲ್ಲಾ ಮುಜಾಹಿದ್ದೀನ್‌ಗಳ ಅಜೆಂಡಾ ಹರಡುವ ಯತ್ನ’ ಎಂದಿತ್ತು.

ಹತ್ಯೆಗೀಡಾದ ವಿಶೇಷ ಪೊಲೀಸ್‌ ಅಧಿಕಾರಿಗಳ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ 
ಹತ್ಯೆಗೀಡಾದ ವಿಶೇಷ ಪೊಲೀಸ್‌ ಅಧಿಕಾರಿಗಳ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ 

ಜತೆಗೆ ಪೊಲೀಸ್‌ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಿಗೆ ವಿಡಿಯೋ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸರಕಾರ ಸ್ಥಗಿತಗೊಳಿಸಿತ್ತು. ಹೀಗಿದ್ದೂ ವಿಶೇಷ ಪೊಲೀಸ್‌ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಇವರಲ್ಲೊಬ್ಬರಾದ ಶೋಫಿಯಾನ್‌ ಜಿಲ್ಲೆಯ ಕಚ್ದೊರಾ ಗ್ರಾಮದ ಪೇದೆ ಮುಖ್ತಾರ್‌ ಅಹ್ಮದ್‌ ಪ್ರತಿಕ್ರಿಯೆ ನೀಡಿದ್ದು, “ನನ್ನ ಕುಟುಂಬ ನನಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿತ್ತು. ಮೂವರು ಪೇದೆಗಳ ಕ್ರೂರ ಹತ್ಯೆಯಿಂದ ಅವರು ಹೆದರಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

ಪೊಲೀಸ್‌ ಮೂಲಗಳ ಪ್ರಕಾರ ಸದ್ಯ ದಕ್ಷಿಣ ಕಾಶ್ಮೀರದಲ್ಲಿರುವ 3,000ದಷ್ಟು ಎಸ್‌ಪಿಒಗಳನ್ನು ಮತ್ತು ಹಲವು ಪೊಲೀಸರು ಮತ್ತು ಅವರ ಕುಟುಂಬಸ್ಥರನ್ನು ಸರಕಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದೆ. ಜತೆಗೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗೆ ಸಮಸ್ಯೆ ಪೀಡಿತ ಪ್ರದೇಶಗಳಲ್ಲಿರುವ ಮನೆಗಳಿಗೆ ತೆರಳದಂತೆ ಸೂಚಿಸಲಾಗಿದೆ. ಇದಲ್ಲದೆ ಹೆಚ್ಚಿನ ಜನರ ರಾಜೀನಾಮೆಯನ್ನು ತಡೆಯುವ ಸಲುವಾಗಿ ಎಸ್‌ಪಿಒಗಳಿಗೆ 6 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿ ವೇತನ ಹೆಚ್ಚಿಸಲು ಸರಕಾರ ಮುಂದಾಗಿದೆ.

ಹೀಗೆ ಶುಕ್ರವಾರದ ಹಿಜ್ಬುಲ್ ಮುಜಾಹಿದ್ದೀನ್‌ ಉಗ್ರರ ಹತ್ಯಾಕಾಂಡ ಪೊಲೀಸರ ರಾಜೀನಾಮೆ ಮತ್ತು ಸಂಬಳ ಏರಿಕೆಗೆ ಬಂದು ನಿಂತಿದೆ. ಇದರಾಚೆಗೆ ಭದ್ರತಾ ಪಡೆಗಳಿಗೆ ಜೀವಸೆಲೆಯಾಗಿರುವ ಅಮೂಲ್ಯ ಗುಪ್ತಚರ ಮಾಹಿತಿಗಳನ್ನು ಪೂರೈಸುತ್ತಿದ್ದ ಎಸ್‌ಪಿಒಗಳಲ್ಲೇ ಉಗ್ರರ ಬಗ್ಗೆ ಭಯ ಕಾಣಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ.