ಬಿಷಪ್ ಫ್ರಾಂಕೋ ಮುಳಕ್ಕಲ್‌ ಜಾಮೀನು ಅರ್ಜಿ ವಜಾ; ಎರಡು ದಿನ ಪೊಲೀಸ್‌ ಕಸ್ಟಡಿಗೆ
ಸುದ್ದಿ ಸಾರ

ಬಿಷಪ್ ಫ್ರಾಂಕೋ ಮುಳಕ್ಕಲ್‌ ಜಾಮೀನು ಅರ್ಜಿ ವಜಾ; ಎರಡು ದಿನ ಪೊಲೀಸ್‌ ಕಸ್ಟಡಿಗೆ

ಅತ್ಯಾಚಾರ ಆರೋಪಿ ಫ್ರಾಂಕೋ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಕೊಟ್ಟಾಯಮ್‌ ಜಿಲ್ಲೆಯ ಸ್ಥಳೀಯ ನ್ಯಾಯಾಲಯ, ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಬಿಷಪ್‌ ಫ್ರಾಂಕೋ ಮುಳಕ್ಕಲ್‌ ಅವರನ್ನು ಕೇರಳದ ನ್ಯಾಯಾಲಯ ಶನಿವಾರ ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ. ಜಾಮೀನು ನೀಡುವಂತೆ ಫ್ರಾಂಕೋ ಸಲ್ಲಿಸಿದ್ದ ಮನವಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ ಶುಕ್ರವಾರ ರಾತ್ರಿ ಫ್ರಾಂಕೋ ಅವರನ್ನು ಬಂಧಿಸಿದ್ದ ಪೊಲೀಸರು ಶನಿವಾರ ಆರೋಪಿಯನ್ನು ಕೊಟ್ಟಾಯಮ್‌ನ ಪಾಲಾ ಪಟ್ಟಣದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಲಯಕ್ಕೆ ಹಾಜರಾಗುವ ಸಮಯದಲ್ಲಿ ಹಾಗೂ ವಿಚಾರಣೆ ನಡೆಯುತ್ತಿದ್ದ ಅಷ್ಟೂ ಹೊತ್ತು ನಗುಮುಖದಲ್ಲೇ ಇದ್ದ ಫ್ರಾಂಕೋಗೆ ನ್ಯಾಯಾಲಯದ ಹೊರಗೆ ನೆರೆದಿದ್ದ ಜನ ಛೀಮಾರಿ ಹಾಕಿದರು.

ಫ್ರಾಂಕೋ ಒಪ್ಪಿಗೆ ಇಲ್ಲದೆ ಅವರಿಂದ ರಕ್ತ ಹಾಗೂ ಎಂಜಲಿನ ಮಾದರಿಯನ್ನು ಸಂಗ್ರಹಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ ಫ್ರಾಂಕೋ ಪರ ವಕೀಲರು, ರಕ್ತ ಹಾಗೂ ಎಂಜಲಿನ ಮಾದರಿ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಬಂಧನದ ಬಳಿಕ ಫ್ರಾಂಕೋ ಎದೆನೋವಿನ ಕಾರಣಕ್ಕೆ ಕೊಟ್ಟಾಯಮ್‌ನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಬೆಳಿಗ್ಗೆ ಫ್ರಾಂಕೋ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. 2014ರಿಂದ 2016ರ ನಡುವೆ ಕ್ರೈಸ್ತ ಸನ್ಯಾಸಿನಿ ಮೇಲೆ 13 ಬಾರಿ ಅತ್ಯಾಚಾರ ಎಸಗಿರುವ ಆರೋಪ ಫ್ರಾಂಕೋ ಮೇಲಿದೆ.

Also read: ಅತ್ಯಾಚಾರ ಪ್ರಕರಣದಲ್ಲಿ ಚರ್ಚ್‌ನ ಮೌನ; ವ್ಯಾಟಿಕನ್‌ ಪ್ರತಿನಿಧಿಗೆ ಕ್ರೈಸ್ತ ಸನ್ಯಾಸಿನಿ ಪತ್ರ

Also read: ದೂರು ವಾಪಸ್‌ ಪಡೆಯಲು 5 ಕೋಟಿ ಆಮಿಷ; ಬಿಷಪ್‌ ಫ್ರಾಂಕೋ ವಿರುದ್ಧ ಮತ್ತೊಂದು ಆರೋಪ