samachara
www.samachara.com
ಮುಂದುವರಿದ ಅಶಾಂತಿ: ಜಮ್ಮ ಮತ್ತು ಕಾಶ್ಮೀರದಲ್ಲಿ ಖಾಕಿ ತೊಟ್ಟ ನಾಗರಿಕರ ಹತ್ಯೆ
ಸುದ್ದಿ ಸಾರ

ಮುಂದುವರಿದ ಅಶಾಂತಿ: ಜಮ್ಮ ಮತ್ತು ಕಾಶ್ಮೀರದಲ್ಲಿ ಖಾಕಿ ತೊಟ್ಟ ನಾಗರಿಕರ ಹತ್ಯೆ

ಉಗ್ರರು ಪೊಲೀಸರನ್ನು ಅಪಹರಣ ಮಾಡಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಆಗಸ್ಟ್‌ 30ರಂದು ದಕ್ಷಿಣ ಕಾಶ್ಮೀರದಲ್ಲಿ ಪೊಲೀಸರ 8 ಸಂಬಂಧಿಕರನ್ನು ಅಪಹರಣ ನಡೆಸಲಾಗಿತ್ತು.

Team Samachara

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2016 ಡಿಸೆಂಬರ್ ಹೊತ್ತಿಗೆಲ್ಲಾ ದೇಶದಲ್ಲಿ ಭಯೋತ್ಪಾದನಾ ಸಮಸ್ಯೆ ನಿವಾರಣೆಯಾಗಬೇಕಿತ್ತು. ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಕೂಗು ಸದ್ದಡಗಬೇಕಿತ್ತು. ದೇಶದ ಭೂಪಟದಲ್ಲಿ ಶಿರದಂತಿರುವ ರಾಜ್ಯ ಜಮ್ಮು ಮತ್ತು ಕಾಶ್ಮೀರ ಗತಕಾಲದ ಪ್ರವಾಸಿ ತಾಣದ ವೈಭವಕ್ಕೆ ಮರಳಬೇಕಿತ್ತು.

ಆದರೆ, ಸದ್ಯದ ಸ್ಥಿತಿ ನೋಡಿದರೆ, ಸ್ಥಳೀಯರು ಇತ್ತ ಭಾರತದ ಮಿಲಿಟರಿ ಅತ್ತ ಪ್ರತ್ಯೇಕತಾವಾದಿಗಳ ನಡುವೆ ಅಕ್ಷರಶಃ ಜೀವ ಕಳೆದುಕೊಳ್ಳುತ್ತಿದ್ದಾರೆ. ಇಲ್ಲಾ, ಬದುಕಿಗಾಗಿ ಆರಿಸಿಕೊಂಡ ವೃತ್ತಿಯನ್ನು ತೊರೆಯುತ್ತಿದ್ದಾರೆ. ಇದು ಜಮ್ಮು ಮತ್ತು ಕಾಶ್ಮೀರದಿಂದ ಬಂದ ಮನಕಲಕುವ ಸುದ್ದಿ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಉಗ್ರರು ಮೂವರು ಪೊಲೀಸರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಇಲ್ಲಿನ ಶೋಪಿಯಾನ್‌ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ.

ಪೊಲೀಸರ ಮೃತ ದೇಹಗಳು ವಂಗಮ್‌ ಪ್ರದೇಶದ ಜಮೀನೊಂದರಲ್ಲಿ ಪತ್ತೆಯಾಗಿವೆ. ಪೊಲೀಸರನ್ನು ಇಲ್ಲಿಂದ ಒಂದು ಕಿಲೋಮೀಟರ್‌ ದೂರದಲ್ಲಿರುವ ಬಟಗುಂಡ್‌ ಪ್ರದೇಶದಿಂದ ಅಪಹರಣ ಮಾಡಲಾಗಿತ್ತು. ಸಾವಿಗೀಡಾದ ಪೊಲೀಸರನ್ನು ಪೇದೆ ನಿಸ್ಸಾರ್‌ ಅಹಮದ್‌ ಮತ್ತು ಇಬ್ಬರು ವಿಶೇಷ ಪೊಲೀಸ್‌ ಅಧಿಕಾರಿಗಳಾದ ಫಿರ್ದೂಸ್‌ ಅಹಮದ್‌ ಮತ್ತು ಕುಲ್ವಂತ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಈ ‘ವಿಶೇಷ ಪೊಲೀಸ್ ಅಧಿಕಾರಿಗಳು’ ಕ್ರಮವಾಗಿ ಶೋಪಿಯಾನ್‌ ಜಿಲ್ಲೆಯ ಕಪ್ರೆನ್‌ ಮತ್ತು ಹೀಪೊರಾ ಗ್ರಾಮಕ್ಕೆ ಸೇರಿದವರಾಗಿದ್ದಾರೆ.

ಬಟಗುಂಡ್‌ ಪ್ರದೇಶದಿಂದ ಪೊಲೀಸರನ್ನು ಉಗ್ರರು ಅಪಹರಿಸಿದ್ದರು. ಈ ವೇಳೆ ಉಗ್ರರನ್ನು ಬೆನ್ನಟ್ಟಿದ ಸ್ಥಳೀಯರು ಅಪಹರಣ ನಡೆಸದಂತೆ ಮನವಿ ಮಾಡಿಕೊಂಡಿದ್ದರು. ಆದರೆ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ ಉಗ್ರರು ನದಿ ಪ್ರದೇಶವನ್ನು ದಾಟಿ ತೆರಳಿದ್ದರು. ಇದೀಗ ಮುಂಜಾನೆ ಮೂವರನ್ನೂ ಹತ್ಯೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚಟುವಟಿಕೆಯಿಂದ ಕೂಡಿರುವ ಉಗ್ರ ಸಂಘಟನೆ ಹಿಜ್ಬುಲ್‌ ಮುಜಾಹಿದ್ದೀನ್‌ ಈ ಅಪಹರಣ ಮತ್ತು ಕೊಲೆಯ ಹೊಣೆ ಹೊತ್ತುಕೊಂಡಿದೆ.

ಕೊಲೆಯಾದ ನಿಸಾರ್‌ ಅಹಮದ್‌ ಸಶಸ್ತ್ರಧಾರಿ ಪೊಲೀಸ್‌ ಆಗಿದ್ದರೆ, ಫಿರ್ದೋಸ್‌ ಅಹ್ಮದ್‌ ಇನ್ನೂ ಪೇದೆಯಾಗಿ ನೇಮಕಗೊಂಡಿರಲಿಲ್ಲ. ರೈಲ್ವೇಯಲ್ಲಿ ಸೇವೆ ಸಲ್ಲಿಸಿದ್ದ ಅವರ ಕೈಗೆ ಬಂದೂಕು ನೀಡಿ ಇತ್ತೀಚೆಗಷ್ಟೇ ಪೊಲೀಸ್‌ ಇಲಾಖೆ ಒಳಗೆ ಸೇರಿಸಿಕೊಳ್ಳಲಾಗಿತ್ತು. ಇನ್ನು, ಕುಲ್ವಂತ್‌ ಸಿಂಗ್‌ ಕುಲ್ಗಾಮ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿ ವಿಶೇಷ ಕೆಲಸ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇವರು ಮೂವರಲ್ಲದೆ ಪೊಲೀಸ್‌ ಪೇದೆಯ ಸಹೋದರನನ್ನೂ ಉಗ್ರರು ಅಪಹರಣ ಮಾಡಿದ್ದರು. ಆದರೆ ನಂತರ ಅವರನ್ನು ಬಿಡುಗಡೆಗೊಳಿಸಿದ್ದರು.

ಯಾರಿವರು ವಿಶೇಷ ಪೊಲೀಸ್‌ ಅಧಿಕಾರಿಗಳು?

ಇವರು ಅಸಲಿಗೆ ಪೊಲೀಸರಲ್ಲ; ಪೊಲೀಸ್‌ ಮಾಹಿತಿದಾರರು ಎಂಬುದು ಇವರಿಗೆ ಹೆಚ್ಚು ಸೂಕ್ತವಾದ ಪದ. ಆದರೆ ಅದಕ್ಕಿಂತ ಹೆಚ್ಚಿನ ಕೆಲಸಗಳನ್ನು ಇವರು ನಿರ್ವಹಿಸುತ್ತಾರೆ. ಮೂರು ಸುತ್ತಿನ ಸಂದರ್ಶನ ಮಾಡಿ ಯಾವುದೇ ಅಪರಾಧ ಹಿನ್ನೆಲೆ ಇಲ್ಲದವರನ್ನು ‘ವಿಶೇಷ ಪೊಲೀಸ್‌ ಅಧಿಕಾರಿ’ಗಳ ಹೆಸರಿನಲ್ಲಿ ಪೊಲೀಸ್‌ ಇಲಾಖೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಇವರಿಗೆ ಸುಲಭವಾಗಿ ಶಸ್ತ್ರಾಸ್ತ್ರಗಳ ಪರವಾನಿಗೆ ದಕ್ಕುತ್ತದೆ. ಜತೆಗೆ ಬಾರ್‌ ಶಾಪ್‌ಗಳನ್ನೂ ಇವರಿಗೆ ತೆರೆಯಲು ಅವಕಾಶವಿದೆ. ಇವರಿಗೆ ಕೆಲವು ಕಡೆಗಳಲ್ಲಿ ಯೂನಿಫಾರ್ಮ್‌ಗಳು ಮತ್ತು ಗುರುತಿನ ದಾಖಲೆಗಳನ್ನೂ ನೀಡಲಾಗುತ್ತದೆ.

ಇವರುಗಳು ಮುಖ್ಯವಾಗಿ ಪೊಲೀಸರ ನಂಬಿಕಸ್ತರಾಗಿ ಕೆಲಸ ಮಾಡಬೇಕಾಗುತ್ತದೆ. ವಿವಿಧ ಕಾರ್ಯಾಚರಣೆಗಳ ಸಂದರ್ಭದಲ್ಲಿ ಇವರು ತಳಮಟ್ಟದಲ್ಲಿ ಪೊಲೀಸರಿಗೆ ಸಹಾಯಕರಾಗಿ ಪಾಲ್ಗೊಳ್ಳುತ್ತಾರೆ. ಹೀಗೊಂದು ಹುದ್ದೆಗೇರಲು ಯಾವುದೇ ಶೈಕ್ಷಣಿಕ ಅಥವಾ ವಯಸ್ಸಿನ ನಿರ್ಬಂಧಗಳು ಇರುವುದಿಲ್ಲ.

ಇಂಥಹ ಇಬ್ಬರು ಜಮ್ಮು ಮತ್ತು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿಗಳನ್ನೀಗ ಉಗ್ರರು ಅಪಹರಿಸಿ ಕೊಲೆ ಮಾಡಲಾರಂಭಿಸಿದ್ದಾರೆ.

ಉಗ್ರರ ಹೊಸ ಹಾದಿ:

ಉಗ್ರರು ಪೊಲೀಸರನ್ನು ಅಪಹರಣ ಮಾಡಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಆಗಸ್ಟ್‌ 30ರಂದು ದಕ್ಷಿಣ ಕಾಶ್ಮೀರದಲ್ಲಿ ಪೊಲೀಸರ 8 ಸಂಬಂಧಿಕರನ್ನು ಅಪಹರಣ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್‌ ಬಂಧಿತರಾಗಿರುವ ಉಗ್ರರ ಸಂಬಂಧಿಗಳನ್ನು ಬಿಡುಗಡೆ ಮಾಡುವಂತೆ 12 ನಿಮಿಷಗಳ ವಿಡಿಯೋದಲ್ಲಿ ಬೆದರಿಕೆ ಹಾಕಿ ಮೂರು ದಿನಗಳ ಕಾಲವಕಾಶ ನೀಡಿದ್ದ. ಉಗ್ರರ ಸಂಬಂಧಿಗಳನ್ನು ಬಿಡುಗಡೆ ಮಾಡಿದರೆ ಮಾತ್ರ ಪೊಲೀಸರ ಸಂಬಂಧಿಗಳನ್ನು ಬಿಡುತ್ತೇವೆ ಎಂದಿದ್ದ. ನಂತರ ಉಗ್ರರು ಹೇಳಿದಂತೆ ಅವರ ಸಂಬಂಧಿಗಳನ್ನು ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಪೊಲೀಸರ ಸಂಬಂಧಿಗಳನ್ನೂ ಉಗ್ರರು ವಾಪಸ್‌ ಕಳುಹಿಸಿದ್ದರು. ಆದರೆ ಈ ಬಾರಿ ನೇರವಾಗಿ ಮೂವರು ಪೊಲೀಸರನ್ನೇ ಅಪಹರಣ ಮಾಡಿ ಹತ್ಯೆ ಮಾಡಿದ್ದಾರೆ. ಅತ್ತ ಪೊಲೀಸರೂ ಅಲ್ಲ, ಇತ್ತ ಸಾಮಾನ್ಯ ನಾಗರಿಕರಾಗಿಯೂ ಉಳಿಯದ ಸ್ಥಳೀಯರ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ.