‘ರಾಮನನ್ನು ಮರೀಬೇಡಿ’: ಪ್ರಧಾನಿ ಮೇಲೆ ಮುಗಿಬಿದ್ದ ಮಾಜಿ ಸಹವರ್ತಿಗಳು
ಸುದ್ದಿ ಸಾರ

‘ರಾಮನನ್ನು ಮರೀಬೇಡಿ’: ಪ್ರಧಾನಿ ಮೇಲೆ ಮುಗಿಬಿದ್ದ ಮಾಜಿ ಸಹವರ್ತಿಗಳು

‘ಮೋದಿ ಸರಕಾರ ರಾಮನ ಹೆಸರನ್ನು ಮರೆತಿದ್ದು ಈಗ ಮುಸ್ಲಿಂ ಮಹಿಳೆಯರ ಪರವಾಗಿ ವಾದಿಸಲು ಆರಂಭಿಸಿದೆ’ ಎಂದು ಪ್ರವೀಣ್‌ ತೊಗಾಡಿಯಾ ಆರೋಪಿಸಿದ್ದಾರೆ.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೇರುವಲ್ಲಿ ಅಯೋಧ್ಯೆಯ ಶ್ರೀರಾಮನ ಕೊಡುಗೆ ಅಪಾರವಾದುದು. ಇದೀಗ ಅದೇ ರಾಮ ಕೇಂದ್ರ ಸರಕಾರದ ಪಾಲಿಗೆ ಕಂಟಕ ಪ್ರಾಯವಾಗಿದ್ದಾನೆ.

ನರೇಂದ್ರ ಮೋದಿ ಸರಕಾರ ರಾಮ ದೇವರನ್ನು ಮರೆತಿದೆ ಎಂದು ಮಾಜಿ ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷ ಪ್ರವೀಣ್‌ ಭಾಯಿ ತೊಗಾಡಿಯಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಈ ಸಂಬಂಧ ಕೇಂದ್ರ ಸರಕಾರದ ವಿರುದ್ಧ ಅಭಿಯಾನವನ್ನು ಹಮ್ಮಿಕೊಳ್ಳುವುದಾಗಿ ಅವರು ಘೋಷಿಸಿದ್ದಾರೆ.

ಬುಧವಾರ ಕೇಂದ್ರ ಸರಕಾರದ ವಿರುದ್ಧ ಗುಡುಗಿರುವ ಅವರು ಲಕ್ನೋದಿಂದ ಅಯೋಧ್ಯೆವರೆಗೆ ಅಕ್ಟೋಬರ್‌ 21ರಿಂದ ಜಾಥಾ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಸದ್ಯ ತಮ್ಮದೇ ಆದ ‘ಅಂತರ್‌ರಾಷ್ಟ್ರೀಯ ಹಿಂದು ಪರಿಷತ್‌’ ಸಂಘಟನೆ ಮುಖ್ಯಸ್ಥರಾಗಿರುವ ತೊಗಾಡಿಯಾ ‘ಕೇಂದ್ರ ಸರಕಾರ ತನ್ನೆಲ್ಲಾ ಭರವಸೆಗಳಿಂದ ಹಿಂದಕ್ಕೆ ಸರಿದಿದೆ’ ಎಂದು ಕಿಡಿಕಾರಿದ್ದಾರೆ.

ಪ್ರವೀಣ್‌ ತೊಗಾಡಿಯಾ-ನರೇಂದ್ರ ಮೋದಿ
ಪ್ರವೀಣ್‌ ತೊಗಾಡಿಯಾ-ನರೇಂದ್ರ ಮೋದಿ
/ಫೈನಾನ್ಶಿಯಲ್‌ ಎಕ್ಸ್‌ಪ್ರೆಸ್‌

“ಸಂಸತ್‌ನ ಪ್ರಕ್ರಿಯೆಗಳ ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತಾರೆ ಎಂದು ನಾವೆಲ್ಲಾ ನಿರೀಕ್ಷಿಸಿದ್ದೆವು. ಅದೇ ರೀತಿ ಯುವಕರಿಗೆ ಶಿಕ್ಷಣ ಸಿಗುವಂತೆ ಮಾಡುತ್ತಾರೆ, ಕೋಟಿ ಗಟ್ಟಲೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ನಾವು ನಂಬಿದ್ದೆವು. ಪೆಟ್ರೋಲ್‌ ದರ ಕಡಿಮೆಯಾಗುತ್ತದೆ, ರೈತರ ಸಾಲ ಮನ್ನಾ ಮಾಡುತ್ತಾರೆ ಎಂದು ಅಂದುಕೊಂಡಿದ್ದೆವು,” ಎಂಬುದಾಗಿ ವರದಿಗಾರರಿಗೆ ತೊಗಾಡಿಯಾ ಹೇಳಿದ್ದಾರೆ.

ಈ ಮೂಲಕ ಕೇಂದ್ರ ಸರಕಾರದ ಮೇಲಿನ ನಿರೀಕ್ಷೆಗಳೆಲ್ಲಾ ಕಳೆದು ಹೋಗಿವೆ ಬೇಸರ ವ್ಯಕ್ತಪಡಿಸಿರುವ ಅವರು, ‘ಮೋದಿ ಸರಕಾರ ರಾಮನ ಹೆಸರನ್ನು ಮರೆತಿದ್ದು ಈಗ ಮುಸ್ಲಿಂ ಮಹಿಳೆಯರ ಪರವಾಗಿ ವಾದಿಸಲು ಆರಂಭಿಸಿದೆ’ ಎಂದು ಆರೋಪಿಸಿದ್ದಾರೆ. ತ್ರಿವಳಿ ತಲಾಖ್‌ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರವೀಣ್‌ಭಾಯ್‌ ತೊಗಾಡಿಯಾ, ಶಿವಸೇನೆ ಸೇರಿದಂತೆ ಮಾಜಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಹವರ್ತಿಗಳೇ ಮೋದಿ ವಿರುದ್ಧ ಹೀಗೊಂದು ಸರಣಿ ದಾಳಿಗಳನ್ನು ಆರಂಭಿಸಿದ್ದು ಕೇಂದ್ರ ಸರಕಾರಕ್ಕೆ ಮತ್ತು ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.