ಐವರು ಸಾಮಾಜಿಕ ಕಾರ್ಯಕರ್ತರ ಬಂಧನ; ತೀರ್ಪು ಕಾಯ್ದಿರಿಸಿದ ಸುಪ್ರೀಂನತ್ತ ಎಲ್ಲರ ಚಿತ್ತ
ಸುದ್ದಿ ಸಾರ

ಐವರು ಸಾಮಾಜಿಕ ಕಾರ್ಯಕರ್ತರ ಬಂಧನ; ತೀರ್ಪು ಕಾಯ್ದಿರಿಸಿದ ಸುಪ್ರೀಂನತ್ತ ಎಲ್ಲರ ಚಿತ್ತ

ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತರು ಮಾವೋವಾದಿಗಳಿಂದ ದೊಡ್ಡ ಮೊತ್ತದ ಹಣ ಪಡೆದಿದ್ದಾರೆ ಎಂದು ಪೊಲೀಸರು ವಾದಿಸಿದ್ದರು. ಆದರೆ ಸಾಮಾಜಿಕ ಕಾರ್ಯಕರ್ತರ ಪರವಾಗಿ ವಾದಕ್ಕಿಳಿದಿದ್ದ ವಕೀಲರು ಈ ವಾದವನ್ನು ತಳ್ಳಿ ಹಾಕಿದ್ದರು.

ಆಗಸ್ಟ್‌ 28ರಂದು ಬಂಧಿತರಾದ ಐವರು ಸಾಮಾಜಿಕ ಕಾರ್ಯಕರ್ತರ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ. ಭೀಮ-ಕೋರೆಗಾಂವ್‌ ಗಲಭೆ ವಿಚಾರದ ತನಿಖೆಯ ಸಂದರ್ಭದಲ್ಲಿ ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ಪುಣೆ ಪೊಲೀಸರು ಐವರು ಸಾಮಾಜಿಕ ಕಾರ್ಯಕರ್ತರಾದ ವರವರ ರಾವ್‌, ಅರುಣ್‌ ಫೆರೇರಾ, ವರ್ನನ್‌ ಗೊನ್ಸಾಲ್ವೆಸ್‌, ಸುಧಾ ಭಾರಧ್ವಜ್‌ ಮತ್ತು ಗೌತಮ್‌ ನವ್ಲೇಖರನ್ನು ಆಗಸ್ಟ್‌ 28 ರಂದು ಬಂಧಿಸಿದ್ದರು.

ಮರುದಿನ ಇವರ ಬಂಧನ ಪ್ರಶ್ನಿಸಿ ಇತಿಹಾಸಗಾರ್ತಿ ರೊಮಿಲಾ ಥಾಪರ್‌ ಮತ್ತು ಇತರ ನಾಲ್ವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಇವರ ಅರ್ಜಿಯನ್ನು ಪುರಸ್ಕರಿಸಿದ್ದ ಕೋರ್ಟ್‌ ಐವರಿಗೆ ಸೆಪ್ಟೆಂಬರ್‌ 6ರವರೆಗೆ ಮೊದಲ ಬಾರಿಗೆ ಗೃಹ ಬಂಧನ ವಿಧಿಸಿತ್ತು. ನಂತರ ಮೂರು ಬಾರಿ ಗೃಹ ಬಂಧನವನ್ನು ವಿಸ್ತರಿಸಿತ್ತು.

ಇದೀಗ ವಿಚಾರಣೆ ಪೂರ್ಣಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ. ಎ. ಎಂ. ಖನ್ವಿಲ್ಕರ್‌ ಮತ್ತು ನ್ಯಾ. ಡಿ. ವೈ. ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ ಆದೇಶವನ್ನು ಕಾಯ್ದಿರಿಸಿದೆ. ಜತೆಗೆ ‘ಕೇಸ್ ಡೈರಿ’ಯನ್ನು ನ್ಯಾಯಾಲಯಕ್ಕೆ ಸೆಪ್ಟೆಂಬರ್‌ 24ಕ್ಕೂ ಮೊದಲು ಸಲ್ಲಿಸುವಂತೆ ಕೋರ್ಟ್‌ ಮಹಾರಾಷ್ಟ್ರ ಪೊಲೀಸರಿಗೆ ಸೂಚನೆ ನೀಡಿದೆ.

ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತರು ಮಾವೋವಾದಿಗಳಿಂದ ದೊಡ್ಡ ಮೊತ್ತದ ಹಣ ಪಡೆದಿದ್ದಾರೆ ಎಂದು ಪೊಲೀಸರು ವಾದಿಸಿದ್ದರು. ಆದರೆ ಸಾಮಾಜಿಕ ಕಾರ್ಯಕರ್ತರ ಪರವಾಗಿ ವಾದಕ್ಕಿಳಿದಿದ್ದ ಖ್ಯಾತ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ, ಆನಂದ್‌ ಗ್ರೋವರ್‌, ಅಶ್ವಿನಿ ಕುಮಾರ್‌, ರಾಜೀವ್‌ ಧವನ್‌ ಮತ್ತು ಪ್ರಶಾಂತ್‌ ಭೂಷಣ್‌ ಈ ವಾದವನ್ನು ತಳ್ಳಿ ಹಾಕಿದ್ದರು. ಬಿಜೆಪಿ ನೇತೃತ್ವದ ಸರಕಾರದ ಕ್ರಮಗಳು ಮತ್ತು ಸಿದ್ಧಾಂತವನ್ನು ವಿರೋಧಿಸಿದ್ದಕ್ಕಾಗಿ ಇವರನ್ನು ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅವರುಗಳು ವಾದಿಸಿದ್ದರು.

ಈ ಹಿಂದೆ ಸೆಪ್ಟೆಂಬರ್‌ 17ರ ವಿಚಾರಣೆ ವೇಳೆ ಪ್ರತಿಕ್ರಿಯೆ ನೀಡಿದ್ದ ಸುಪ್ರೀಂ ಕೋರ್ಟ್‌, ಒಂದೊಮ್ಮೆ ಪುಣೆ ಪೊಲೀಸರು ಸಲ್ಲಿಸಿದ ದಾಖಲೆಗಳು ಸೃಷ್ಟಿಸಲ್ಪಟ್ಟವು ಎಂದು ತಿಳಿದು ಬಂದರೆ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿತ್ತು. ಇದೀಗ ವಿಚಾರಣೆ ಪೂರ್ಣಗೊಂಡಿದ್ದು ಸುಪ್ರೀಂ ಕೋರ್ಟ್‌ ನೀಡಲಿರುವ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.